ಕಾಂ.ಯೆಚೂರಿ ಇನ್ನಿಲ್ಲ ಎಂಬ ವಾರ್ತೆ ಕೇಳಿ ನಿಜಕ್ಕೂ ತುಂಬಾ ಆಘಾತವಾಯಿತು. ಯಾವಾಗ ಪಕ್ಷದ ಕೇಂದ್ರ ಸಮಿತಿ ಯೆಚೂರಿ ಆರೋಗ್ಯ ಸ್ಥಿತಿ ಗಂಭೀರ ಎಂದು ಹೇಳಿತ್ತೋ ಆ ಕ್ಷಣದಿಂದ ತುಂಬಾ ಸೊರಗಿ ಹೋಗಿದ್ದೆ. ನನ್ನ 30 ವರ್ಷಗಳ ಸಾರ್ವಜನಿಕ ಜೀವನದಲ್ಲಿ ನಾನು ಅತ್ಯಂತ ಜಾಸ್ತಿ ಇಷ್ಟ ಪಟ್ಟ ರಾಷ್ಟ್ರ ನಾಯಕ ಕಾಂ.ಸೀತಾರಾಮ ಯೆಚೂರಿ. ಅವರನ್ನು ನೋಡಿದರೆ ತುಂಬಾ ಖುಷಿ, ಅವರ ನಗುಮುಖ ಅದರಲ್ಲೂ ಅವರ ಮಾತಂತೂ ಅಪ್ಪಟ ಬಂಗಾರ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಕಮ್ಯುನಿಸ್ಟ್ ಚಳುವಳಿಯ ಕುಟುಂಬದಲ್ಲಂತೂ ಯೆಚೂರಿಯನ್ನು ಪ್ರೀತಿಸದ ವ್ಯಕ್ತಿಗಳೇ ಇರಲಿಕ್ಕಿಲ್ಲ. ಅಷ್ಟೊಂದು ಪ್ರಭಾವಿ ವ್ಯಕ್ತಿತ್ವ ಅವರದು. ತನ್ನ ಮುಗುಳ್ನಗೆಯ ಮೂಲಕ ಎದುರಾಳಿಗಳ ಮನಸ್ಸನ್ನು ಗೆಲ್ಲುವಂತಹ ಆಕರ್ಷಕ ವ್ಯಕ್ತಿತ್ವ ಯೆಚೂರಿಯವರದು.
ನೆರೆಯ ನೇಪಾಳದಲ್ಲಿ ಗಂಭೀರ ರಾಜಕೀಯ ಸಮಸ್ಯೆ ತಲೆದೋರಿದಾಗ ಅದನ್ನು ನಿವಾರಿಸಲು ಅಲ್ಲಿನ ಜನತೆ ಒಕ್ಕೊರಲಿನಿಂದ ಭಾರತ ಸರಕಾರದಲ್ಲಿ ಮನವಿ ಮಾಡಿದ್ದು ನಮಗೆ ಸೀತಾರಾಮ ಯೆಚೂರಿಯವರನ್ನು ಇಲ್ಲಿಗೆ ಕಳುಹಿಸಿ ಕೊಡಿ ಎಂದು…..
ಹೀಗೆ ಜಾಗತಿಕ ಸಮಸ್ಯೆಗಳು ಉದ್ಭವಿಸಿದಾಗ ಅದಕ್ಕೆ ಸರಿಯಾದ ಮಾರ್ಗೋಪಾಯಗಳನ್ನು ವೈಜ್ಞಾನಿಕ ನೆಲೆಯಲ್ಲಿ ಕಂಡು ಹುಡುಕಿ ಅದನ್ನು ಸಮರ್ಥವಾಗಿ ಪ್ರತಿಪಾದಿಸುವ ಮೂಲಕ ಜಾಗತಿಕ ನಾಯಕರಾಗಿ ಮೆರೆದ ಯೆಚೂರಿಯನ್ನು ವಿಶ್ವಮಾನ್ಯ ನಾಯಕರೆಂದರೆ ತಪ್ಪಾಗಲಾರದು. ಜಾಗತಿಕ ಕಮ್ಯುನಿಸ್ಟ್ ಚಳುವಳಿಯನ್ನು ಮುನ್ನಡೆಸುವಲ್ಲಿಯೂ ಯೆಚೂರಿಯವರ ಪಾತ್ರ ಸ್ಮರಣೀಯವಾಗಿದೆ.
ಭಾರತದ ರಾಜಕಾರಣದಲ್ಲಿ ಭೀಷ್ಮ ಪಿತಾಮಹನೆಂದು ಗುರುತಿಸಿಕೊಂಡಂತಹ ಕಾಂ.ಹರಿಕಿಶನ್ ಸಿಂಗ್ ಸೂರ್ಜಿತ್ ರವರ ಗರಡಿಯಲ್ಲಿ ಪಳಗಿದ ಕಾಂ ಯೆಚೂರಿಯವರು 2004ರಲ್ಲಿ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ UPA ಸರಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ರೂವಾರಿಯಾಗಿದ್ದರು.
ದೇಶದ ಸಂವಿಧಾನಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ ಅಪಾಯವನ್ನು ತಂದೊಡ್ಡಿದ ಕೋಮುವಾದದ ವಿರುದ್ಧ ಜಾತ್ಯಾತೀತ ಶಕ್ತಿಗಳನ್ನು ಒಗ್ಗೂಡಿಸುವಲ್ಲಿ ಅವಿಶ್ರಾಂತವಾಗಿ ಶ್ರಮಿಸಿರುವುದು ಮಾತ್ರವಲ್ಲ INDIA ಕೂಟ ರಚನೆಯಾಗುವುದರಲ್ಲಿ ಕಾಂ.ಯೆಚೂರಿಯವರ ಪಾತ್ರವೇ ದೊಡ್ಡದಿದೆ. ಮೇಲ್ವರ್ಗದ ಕುಟುಂಬವೊಂದರಲ್ಲಿ ಜನಿಸಿ,ಶ್ರೀಮಂತ ಮನೆತನದವರಾಗಿದ್ದರೂ ತಾನು ಮಾತ್ರ ಸಮಾಜದ ಅತ್ಯಂತ ಶೋಷಿತ ಸಮುದಾಯದ ಪರವಾಗಿ ಧ್ವನಿ ಎತ್ತಲು ತೀರ್ಮಾನಿಸಿ ತಾನು ನಂಬಿದ ದುಡಿಯುವ ವರ್ಗದ ಸಿದ್ದಾಂತದ ಭಾಗವಾಗಿ ಜೀವನ ನಡೆಸಿರುವುದು ಸ್ಪೂರ್ತಿದಾಯಕ ಸಂಗತಿಯಾಗಿದೆ.
ವಿದ್ಯಾರ್ಥಿ ದೆಸೆಯಿಂದಲೇ ಅತ್ಯಂತ ಪ್ರತಿಭಾನ್ವಿತರಾಗಿದ್ದ ಯೆಚೂರಿಯವರು ದೆಹಲಿಯ JNU ವಿಶ್ವವಿದ್ಯಾಲಯದಲ್ಲಿ ಮೂರು ಬಾರಿ ಅದ್ಯಕ್ಷರಾಗಿರುವುದು ಮಾತ್ರವಲ್ಲ ತನ್ನ ಶೈಕ್ಷಣಿಕ ಸಾಧನೆಯಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು.ಅಲ್ಲಿಂದ ಅತ್ಯಲ್ಪ ಕಾಲದಲ್ಲೇ ದೇಶದ ರಾಜಕಾರಣದಲ್ಲಿ ಮಿಂಚಿದ ಯೆಚೂರಿಯವರು ಕಳೆದ 50 ವರ್ಷಗಳ ಕಾಲ ಮೇರುಪರ್ವತದಂತೆ ಕಂಗೊಳಿಸಿದರು.ಖ್ಯಾತ ಸಂಸದೀಯ ಪಟುವಾಗಿದ್ದ ಕಾಂ.ಯೆಚೂರಿಯವರು ರಾಜ್ಯಸಭೆಯಲ್ಲಿ ಮಾಡಿದ ಅತ್ಯದ್ಭುತ ಭಾಷಣಗಳು ಕಡು ವಿರೋಧಿಗಳನ್ನು ತುದಿಗಾಲಲ್ಲಿ ನಿಲ್ಲಿಸುವಂತೆ ಮಾಡುತ್ತಿತ್ತು. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಕಾಂ. ಯೆಚೂರಿಯವರನ್ನು ಎರಡನೆಯ ಬಾರಿಗೆ ಸಂಸದರಾಗಲು ಪಕ್ಷ ನಿರಾಕರಿಸಿದಾಗ ಸಂಸತ್ತಿನಲ್ಲಿ ಕಡು ವಿರೋಧಿಯಾಗಿದ್ದ ಬಿಜೆಪಿ ನಾಯಕರು ಮತ್ತೆ ಅವಕಾಶ ನೀಡಬೇಕೆಂದು CPIM ಪಕ್ಷದಲ್ಲಿ ವಿನಂತಿಸಿರುವುದು ವಿಶೇಷವಾಗಿದೆ.
ಇಂತಹ ನಾಯಕನನ್ನು ಕಣ್ಣಾರೆ ನೋಡಬೇಕೆಂಬ ಹಂಬಲ ನನ್ನ ಮನಸ್ಸಿನಲ್ಲಿ ಸದಾ ಇತ್ತು.ಇದಕ್ಕಾಗಿ ಒಂದು ಅವಕಾಶವೇ ಬಂತು…..1996 ಸಪ್ಟೆಂಬರ್ ತಿಂಗಳು…. SFI ಕರ್ನಾಟಕ ರಾಜ್ಯ ಸಮ್ಮೇಳನ ಮಂಡ್ಯದಲ್ಲಿ….ಪ್ರಥಮ ದಿನವೇ ಸಾವಿರಾರು ವಿದ್ಯಾರ್ಥಿಗಳ ಆಕರ್ಷಕ ಮೆರವಣಿಗೆ…. ಬಳಿಕ ಬಹಿರಂಗ ಸಭೆ…ಅದಕ್ಕೆ ಮುಖ್ಯ ಭಾಷಣಕಾರರು ಕಾಂ.ಸೀತಾರಾಮ ಯೆಚೂರಿ. ಅವರ ಹತ್ತಿರ ಸುಳಿಯುವ ಹಾಗಿಲ್ಲ ಅಷ್ಟೊಂದು ಪೋಲಿಸ್ ಸರ್ಪಗಾವಲು…..ಆದರೂ ಅವರ ಜೊತೆ ಹೇಗಾದರೂ ಪೋಟೋ ತೆಗೆಸಿದ್ದಾಯಿತು. ಅಂದಿನಿಂದ ಇಷ್ಟರವರೆಗೆ ಅದೆಷ್ಟೋ ಬಾರಿ ಯೆಚೂರಿ ಜೊತೆ ಭೇಟಿ ಆದಾಗಲೂ ಪೋಟೋ ತೆಗೆಯಲೇಬೇಕು. ಅಷ್ಟೊಂದು ಗೌರವ ಕಾಂ.ಯೆಚೂರಿ ಬಗ್ಗೆ… ಹೃದಯದಲ್ಲಿಟ್ಟು ಪೂಜಿಸುವಷ್ಟು…..
ಕಾಂ.ಸೀತಾರಾಮ ಯೆಚೂರಿ ಲಾಲ್ ಸಲಾಂ…..
– ಸುನಿಲ್ ಕುಮಾರ್ ಬಜಾಲ್









