ಹಿರಿಯ ನಟಿ ಬಿ.ಸರೋಜಾದೇವಿಯವರ ಬದುಕು ಮತ್ತು ಸಾಧನೆ

9 months ago

ಹಿರಿಯ ನಟಿ ಬಿ.ಸರೋಜಾದೇವಿಯವರ ಬದುಕು ಮತ್ತು ಸಾಧನೆ

(೭ ಜನವರಿ ೧೯೩೮ – ೧೪ ಜುಲೈ ೨೦೨೫)

ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ಹಿರಿಯ ನಟಿ ಬಿ.ಸರೋಜಾದೇವಿ ನಿಧನರಾಗಿದ್ದಾರೆ. ಅವರ ಜೀವನ ಮತ್ತು ಸಾಧನೆಯ ಮೆಲುಕು ಇಲ್ಲಿದೆ.

ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯ ಸುಮಾರು 200 ಚಲನಚಿತ್ರಗಳಲ್ಲಿ ನಟಿಸಿರುವ ಶ್ರೇಯಸ್ಸು ಬಿ.ಸರೋಜಾದೇವಿಯವರದು. ಅಭಿನಯ ಸರಸ್ವತಿ ಮತ್ತು ತಮಿಳಿನಲ್ಲಿ “ಕನ್ನಡತು ಪೈಂಗಿಲಿ” (ಕನ್ನಡದ ಗಿಳಿ) ಎಂಬ ಬಿರುದುಗಳಿಂದ ಗುರುತಿಸಲಾಗುತ್ತಿತ್ತು. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಟಿಯರ ಪೈಕಿ ಇವರಿಗೆ ಸ್ಥಾನವಿದೆ. 

ಇವರು ತಮ್ಮ 17ನೇ ವಯಸ್ಸಿನಲ್ಲಿ ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್‌ಸ್ಟಾರ್ ಎಂದು ಹೆಸರಾಗಿದ್ದರು. ಕನ್ನಡ ಚಲನಚಿತ್ರ ಮಹಾಕವಿ ಕಾಳಿದಾಸ (೧೯೫೫) ಚಿತ್ರದ ಮೂಲಕ ಚಂದನವನದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಪಾಂಡುರಂಗ ಮಹಾತ್ಯಂ (೧೯೫೭) ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಯವಾದರು.

೧೯೭೦ರ ದಶಕದ ಅಂತ್ಯದವರೆಗೆ ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿ ಪ್ರಸಿದ್ಧಿಯಾದರು. ತಮಿಳು ಚಲನಚಿತ್ರ ನಾಡೋಡಿ ಮನ್ನನ್ (೧೯೫೮) ಅವರನ್ನು ತಮಿಳು ಚಿತ್ರರಂಗದ ಅಗ್ರ ನಟಿಯರಲ್ಲಿ ಸ್ಥಾನ ದೊರಕಿಸಿತು.

೧೯೬೭ರಲ್ಲಿ ವಿವಾಹವಾದ ತರುವಾಯ, ಅವರು ೧೯೭೪ ರವರೆಗೆ ತಮಿಳು ಚಲನಚಿತ್ರಗಳಲ್ಲಿ ಬೇಡಿಕೆಯ ನಟಿಯಾಗಿ ಎರಡನೇ ಸ್ಥಾನವನ್ನು ಅಲಂಕರಿಸಿದ್ದರು. ೧೯೫೮ ರಿಂದ ೧೯೮೦ ರವರೆಗೆ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಮತ್ತು ಅಗ್ರ ನಟಿಯಾಗಿ ಸಿನಿಮಾರಂಗದಲ್ಲಿ ಮೆರೆದರು. ಪೈಘಮ್ (೧೯೫೯) ದಿಂದ ೧೯೬೦ ರ ದಶಕದ ಮಧ್ಯಭಾಗದವರೆಗೆ ಅವರು ಹಿಂದಿ ಚಲನಚಿತ್ರಗಳಲ್ಲಿ ನಟಿಸಿ ರಾಷ್ಟ್ರಮಟ್ಟದ ನಟಿಯಾಗಿ ಹೆಸರಾದರು. 

೧೯೫೫ ಮತ್ತು ೧೯೮೪ ರ ನಡುವಿನ ೨೯ ವರ್ಷಗಳ ಅವಧಿಯಲ್ಲಿ ೧೬೧ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸೂಪರ್ ಸ್ಟಾರ್ ಪಟ್ಟ ಗಿಟ್ಟಿಸಿದರು. ೧೯೬೯ ರಲ್ಲಿ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ ಮತ್ತು ೧೯೯೨ರಲ್ಲಿ ಭಾರತ ಸರ್ಕಾರದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣವನ್ನು ಪಡೆದರು. ಹಾಗೆಯೇ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿಗೆ ಭಾಜನರಾದರು.

೭ ಜನವರಿ ೧೯೩೮ರಂದು ಒಕ್ಕಲಿಗ ಸಮುದಾಯದಲ್ಲಿ ಜನಿಸಿದರು. ಇವರಿಗೆ ಬಾಲ್ಯದಲ್ಲೇ ಲಲಿತಕಲೆಗಳ ಬಗ್ಗೆ ಆಸಕ್ತಿಯಿತ್ತು. ಪೊಲೀಸ್ ಅಧಿಕಾರಿಯಾಗಿದ್ದ ತಂದೆ ಭೈರಪ್ಪ ಮತ್ತು ತಾಯಿ ರುದ್ರಮ್ಮನವರು ಇವರ ಬೆಳವಣಿಗೆಯಲ್ಲಿ ಬೆಂಬಲವಾಗಿ ನಿಂತರು. ತಂದೆ ನೃತ್ಯ ಕಲಿಯಲು ಪ್ರೇರಣೆ ನೀಡಿದ್ದಲ್ಲದೆ ನಟನೆಯನ್ನು ವೃತ್ತಿಯಾಗಿ ಸ್ವೀಕರಿಸುವಂತೆ ಪ್ರೋತ್ಸಾಹ ನೀಡಿದರು.

ಬಹುಭಾಷಾತಾರೆಯಾಗಿ ಬೆಳೆದ ಸರೋಜಾದೇವಿ: ಕನ್ನಡದಲ್ಲಿ ಡಾ.ರಾಜ್‌ಕುಮಾರ್, ಕಲ್ಯಾಣ್‌ಕುಮಾರ್, ಉದಯಕುಮಾರ್ ಅವರ ಜೊತೆಗೆ ನಟಿಸುವ ಮೂಲಕ ಚಂದನವನದಲ್ಲಿ ಛಾಪು ಮೂಡಿಸಿದರು. ತೆಲುಗಿನಲ್ಲಿ ಎ. ನಾಗೇಶ್ವರರಾವ್, ಎನ್.ಟಿ. ರಾಮರಾವ್ ಅವರ ಜೊತೆ ನಟಿಸಿ ಅಲ್ಲಿಯೂ ಪ್ರಸಿದ್ಧರಾದರು. ತಮಿಳಿನಲ್ಲಿ ಜೆಮಿನಿ ಗಣೇಶನ್, ಶಿವಾಜಿಗಣೇಶನ್ ಜೊತೆಗೆ 22 ಹಿಟ್ ಚಿತ್ರಗಳಲ್ಲಿ, ಎಂ.ಜಿ. ರಾಮಚಂದ್ರನ್ ಅವರ ಜೊತೆಗೆ 26 ಹಿಟ್ ಚಿತ್ರಗಳಲ್ಲಿ ನಟಿಸಿ ದಕ್ಷಿಣ ಭಾರತದ ಪ್ರಮುಖ ತಾರೆಯಾಗಿ ಹೊರಹೊಮ್ಮಿದರು. ಇನ್ನು ಹಿಂದಿಯಲ್ಲಿ ದಿಲೀಪ್ ಕುಮಾರ್, ರಾಜೇಂದ್ರಕುಮಾರ್, ಶಮ್ಮೀ ಕಪೂರ್, ಸುನಿಲ್‌ದತ್ ಜೊತೆಗೆ ನಟಿಸಿದ ಅವರು ಚತುರ್ಭಾಷಾ ತಾರೆ ಎಂಬ ಪಟ್ಟ ಗಳಿಸಿದರು. ಇಂತಹ ಹೆಗ್ಗಳಿಕೆಗೆ ಪಾತ್ರವಾದ ಮೊದಲ ಕನ್ನಡ ನಟಿ ಎಂಬ ದಾಖಲೆ ಇವರದೇ ಆಗಿದೆ. 

ಸರೋಜಾದೇವಿಯವರು ನಟಿಸಿದ ಕೆಲವು ಚಿತ್ರಗಳು

ಕಿತ್ತೂರುರಾಣಿ ಚೆನ್ನಮ್ಮ
ಅಮರಶಿಲ್ಪಿ ಜಕಣಾಚಾರಿ
ಕಥಾಸಾಗರ
ಬಬ್ರುವಾಹನ
ಭಾಗ್ಯವಂತರು
ಆಷಾಡಭೂತಿ
ಶ್ರೀರಾಮಪೂಜಾ
ಕಚ ದೇವಯಾನಿ
ರತ್ನಗಿರಿ ರಹಸ್ಯ
ಕೋಕಿಲವಾಣಿ
ಸ್ಕೂಲ್‌ಮಾಸ್ಟರ್
ಪಂಚರತ್ನ
ಲಕ್ಷ್ಮೀಸರಸ್ವತಿ
ಚಿಂತಾಮಣಿ
ಭೂಕೈಲಾಸ
ಅಣ್ಣತಂಗಿ
ಜಗಜ್ಯೋತಿ ಬಸವೇಶ್ವರ
ಕಿತ್ತೂರುಚೆನ್ನಮ್ಮ
ದೇವಸುಂದರಿ
ವಿಜಯನಗರದ ವೀರಪುತ್ರ
ಮಲ್ಲಮ್ಮನ ಪವಾಡ
ಶ್ರೀಕೃಷ್ಣರುಕ್ಮಿಣಿ ಸತ್ಯಭಾಮ
ಪೂರ್ಣಿಮಾ
ಗೃಹಿಣಿ
ಪಾಪಪುಣ್ಯ
ಸಹಧರ್ಮಿಣಿ
ಶ್ರೀನಿವಾಸಕಲ್ಯಾಣ
ಚಾಮುಂಡೇಶ್ವರಿ ಮಹಿಮೆ
ಚಿರಂಜೀವಿ
ಶನಿಪ್ರಭಾವ 

ಪ್ರಶಸ್ತಿಗಳು ಮತ್ತು ಗೌರವಗಳು:
ರಾಷ್ಟ್ರೀಯ ಪ್ರಶಸ್ತಿಗಳು

1. ಭಾರತದ ೬೦ ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭಾರತ ಸರ್ಕಾರದಿಂದ ೨೦೦೮ ರ ಜೀವಮಾನ ಸಾಧನೆ ಪ್ರಶಸ್ತಿ
2. ೧೯೯೨ರಲ್ಲಿ ಕೇಂದ್ರ ಸರಕಾರದ ‘ಪದ್ಮಭೂಷಣ ಪ್ರಶಸ್ತಿ’
3. ೧೯೬೯ರಲ್ಲಿ ಕೇಂದ್ರ ಸರಕಾರದ ಪದ್ಮಶ್ರೀ ಪ್ರಶಸ್ತಿ

ರಾಜ್ಯ ಪ್ರಶಸ್ತಿಗಳು

1. ೨೦೦೯ – ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಚಿತ್ರಕ್ಕೆ ಜೀವಮಾನ ಸಾಧನೆ ಪ್ರಶಸ್ತಿ
2. ೨೦೦೯ – ಕರ್ನಾಟಕ ಸರ್ಕಾರದಿಂದ ಡಾ.ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ
3. ೨೦೦೯ – ಎರಡನೇ ಬಾರಿಗೆ ಆಂಧ್ರ ಪ್ರದೇಶ ಸರ್ಕಾರದಿಂದ NTR ರಾಷ್ಟ್ರೀಯ ಪ್ರಶಸ್ತಿ
4. ೨೦೦೧ – ಆಂಧ್ರ ಪ್ರದೇಶ ಸರ್ಕಾರದಿಂದ NTR ರಾಷ್ಟ್ರೀಯ ಪ್ರಶಸ್ತಿ
5. ೧೯೯೩ – ತಮಿಳುನಾಡು ಸರ್ಕಾರದ ಎಂಜಿಆರ್ ಪ್ರಶಸ್ತಿ
6. ೧೯೮೮ – ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ
7. ೧೯೮೦ – ಕರ್ನಾಟಕ ರಾಜ್ಯದಿಂದ ಅಭಿನಂದನ-ಕಾಂಚನ ಮಾಲಾ ಪ್ರಶಸ್ತಿ
8. ೧೯೬೯ – ಕುಲ ವಿಳಕ್ಕು ಚಿತ್ರಕ್ಕೆ ಅತ್ಯುತ್ತಮ ನಟಿಯಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ
9. ೧೯೬೫ – ಕರ್ನಾಟಕದಿಂದ ಅಭಿನಯ ಸರಸ್ವತಿ ಗೌರವ

ಇತರ ಪ್ರಶಸ್ತಿಗಳು

1. ೨೦೦೯ – ನಾಟ್ಯ ಕಲಾಧರ್ ಪ್ರಶಸ್ತಿ— ತಮಿಳು ಸಿನಿಮಾ, ಭರತ್ ಕಲಾಚಾರ್ ಚೆನ್ನೈ
2. ೨೦೦೭ – ಕರ್ನಾಟಕ ತೆಲುಗು ಅಕಾಡೆಮಿಯಿಂದ ಗಮನಾರ್ಹ ಸಾಧನೆಗಾಗಿ NTR ಪ್ರಶಸ್ತಿ
3. ೨೦೦೭ – ಚಾರಿಟಬಲ್ ಟ್ರಸ್ಟ್ ಮತ್ತು ರೋಟರಿ ಕ್ಲಬ್ ಆಫ್ ಚೆನ್ನೈನಿಂದ ರೋಟರಿ ಶಿವಾಜಿ ಪ್ರಶಸ್ತಿ
4. ೨೦೦೬ – ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್
5. ೨೦೦೬ – ತಮಿಳು ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ವಿಜಯ್ ಪ್ರಶಸ್ತಿ
6. ೨೦೦೩ – ಸರ್ವಾಂಗೀಣ ಸಾಧನೆಗಾಗಿ ದಿನಕರನ್ ಪ್ರಶಸ್ತಿ
7. ೧೯೯೭ – ಚೆನ್ನೈನಲ್ಲಿ ಸಿನಿಮಾ ಎಕ್ಸ್‌ಪ್ರೆಸ್‌ನಿಂದ ಜೀವಮಾನ ಸಾಧನೆ ಪ್ರಶಸ್ತಿ
8. ೧೯೯೪ – ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ

ಬಿ. ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ: ೨೦೧೦ರಲ್ಲಿ, ಭಾರತೀಯ ವಿದ್ಯಾ ಭವನ ‘ಪದ್ಮಭೂಷಣ ಬಿ. ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ’ಯನ್ನು ಘೋಷಿಸಿತು. ಇದು ಪ್ರತಿ ವರ್ಷ ಪ್ರದರ್ಶನ ಕಲೆಯಲ್ಲಿ ಸೇವೆಗೌದ ಕಲಾವಿದರನ್ನು ಗುರುತಿಸಿ ಗೌರವಿಸುವ ಜೀವಮಾನ ಸಾಧನೆ ಪ್ರಶಸ್ತಿಯಾಗಿದೆ. ಖ್ಯಾತ ಬಹುಭಾಷಾ ಗಾಯಕ ಕೆ.ಜೆ.ಯೇಸುದಾಸ್, ವೈಜಯಂತಿಮಾಲಾ, ಅಂಜಲಿದೇವಿ, ಅಂಬರೀಶ್, ಜಯಂತಿ ಮತ್ತಿತರರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Leave a Reply