ಕೇಂದ್ರ ಸರ್ಕಾರದಲ್ಲಿ ಕನ್ನಡಿಗರಿಗೆ ಉದ್ಯೋಗಕ್ಕಾಗಿ ಸಂವಿಧಾನ ತಿದ್ದುಪಡಿ ಹೋರಾಟದ ನೇತೃತ್ವವನ್ನು ಸಿದ್ದರಾಮಯ್ಯನವರೇ ವಹಿಸಿಕೊಳ್ಳಲಿ
ಕೇಂದ್ರ ಸರ್ಕಾರದ ವಿವಿಧ ಸಂಸ್ಥೆಗಳಲ್ಲಿ ಮತ್ತು ಬ್ಯಾಂಕ್ ಗಳಲ್ಲಿ ಕನ್ನಡಿಗರಿಗೆ ಶೇಕಡಾ 80ರಷ್ಟು ಉದ್ಯೋಗವನ್ನು ನೀಡಬೇಕೆಂಬ ಬೇಡಿಕೆ ಅನೇಕ ದಶಕಗಳಿಂದ ಕೇಳಿ ಬರುತ್ತಲೇ ಇದೆ. ಈ ಒಂದು ಬೇಡಿಕೆ ಈಡೇರಬೇಕಾದರೆ ಸಂವಿಧಾನದ ತಿದ್ದುಪಡಿಯಾಗಲೇಬೇಕು. ಸಂವಿಧಾನದ ತಿದ್ದುಪಡಿಯಾದರೆ ಆಗ ಮಾತ್ರ ಆಯಾ ರಾಜ್ಯದವರಿಗೆ ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಪಾಲು ದೊರೆಯಲು ಸಾಧ್ಯವಿರುತ್ತದೆ. ಆದುದರಿಂದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇಂತಹ ಒಂದು ತಿದ್ದುಪಡಿಗಾಗಿ ರಾಷ್ಟ್ರದ ಎಲ್ಲ ರಾಜ್ಯಗಳ ಬೆಂಬಲವನ್ನು ಪಡೆಯುವ ಸಲುವಾಗಿ ಎಲ್ಲ ರಾಜ್ಯದ ಮುಖ್ಯಮಂತ್ರಿಗಳಿಗೆ ಲೋಕಸಭಾ, ರಾಜ್ಯಸಭಾ ಸದಸ್ಯರುಗಳಿಗೆ ಪತ್ರವನ್ನು ಬರೆದು ಸಂವಿಧಾನದ ತಿದ್ದುಪಡಿಯ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಟ್ಟು ಈ ಮೂಲಕ ಎಲ್ಲ ರಾಜ್ಯದ ಜನರಿಗೂ ಸಮಾನವಾಗಿ ಕೇಂದ್ರ ಸರ್ಕಾರದ ಹುದ್ದೆಗಳ ಪಾಲು ದೊರೆಯಲು ಸಾಧ್ಯವಾಗುತ್ತದೆ ಎಂಬುದನ್ನು ತಿಳಿಸುವಂತಹ ಕೆಲಸವನ್ನು ಮಾಡಬೇಕಾಗಿದೆ.
ಕನ್ನಡದ ವಿಚಾರದಲ್ಲಿ ಸಾಕಷ್ಟು ಬದ್ಧತೆಯನ್ನು ಹೊಂದಿರುವ ಸಿದ್ದರಾಮಯ್ಯನವರು ಈ ಒಂದು ಹೋರಾಟದ ನೇತೃತ್ವವನ್ನು ವಹಿಸಿಕೊಂಡು ಸಂವಿಧಾನದ ತಿದ್ದುಪಡಿಯ ಮಹತ್ವದ ಕಾರ್ಯಕ್ಕೆ ಚಾಲನೆಯನ್ನು ನೀಡಿದರೆ ದೇಶದಲ್ಲಿ ದೊಡ್ಡ ಇತಿಹಾಸವಾಗುತ್ತದೆ. 1967ರಲ್ಲಿ ಜೆ.ಹೆಚ್.ಪಟೇಲ್ ಇವರು ಮೊದಲ ಬಾರಿಗೆ ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡುವುದರ ಮೂಲಕ ದೇಶದ ಅನೇಕ ಭಾಷೆಗಳಲ್ಲಿ ಲೋಕಸಭೆಯಲ್ಲಿ ಚರ್ಚೆಗಳನ್ನು ಮಾಡಲು, ಪ್ರಶ್ನೆಯನ್ನು ಕೇಳಲು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ನಾಂದಿಯಾಯಿತು.
ಸಿದ್ದರಾಮಯ್ಯನವರು ಈಗ ಸಂವಿಧಾನದ ತಿದ್ದುಪಡಿಗಾಗಿ ಕನ್ನಡಿಗರಿಗೆ ಕೇಂದ್ರದ ಹುದ್ದೆಗಳಿಗಾಗಿ ಇಂತಹದೇ ಒಂದು ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳುವ ಕಾಲ ಒದಗಿ ಬಂದಿದೆ.
- ಕೆ.ಎಸ್.ನಾಗರಾಜ್, ಬೆಂಗಳೂರು



