ವಿಧಾನಪರಿಷತ್ತಿಗೆ ಈಗ ಬೇಕಿರುವುದು ಬರಗೂರು

10 months ago

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆ.ಪಿ.ಸಿ.ಸಿ. ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ವಿಧಾನ ಪರಿಷತ್ತಿಗೆ ಇನ್ನೂ ನಾಮಕರಣ ಪ್ರಕ್ರಿಯೆ ಮುಗಿದಿಲ್ಲವಾದರೆ ನೀವು ತಕ್ಷಣಕ್ಕೆ ಗಮನಿಸಬೇಕಾದ ಹೆಸರು ಕನ್ನಡನಾಡಿನ ಪ್ರಖರ ಚಿಂತಕ, ಮಹತ್ವದ ಸಾಹಿತಿ, ಚಲನಚಿತ್ರ ನಿರ್ದೇಶಕ ಬರಗೂರು ರಾಮಚಂದ್ರಪ್ಪ.

ಮನುಷ್ಯರ ನಡುವೆ ಪ್ರೀತಿ ಬೆಸೆಯುವ, ಧರ್ಮಗಳ ನಡುವೆ ಸಾಮರಸ್ಯ ಮೂಡಿಸುವ, ಅಪ್ಪಟ ಜಾತ್ಯತೀತ ಪ್ರಗತಿಪರ ವ್ಯಕ್ತಿ ಬರಗೂರು. ಇವರು ಬಡಬಡಿಕೆಯ, ಗದ್ದಲ, ಗೊಂದಲ ಎಬ್ಬಿಸುವ ಹುಸಿ ಕ್ರಾಂತಿಕಾರಿಯಲ್ಲ ಎಂಬುದು ಇಡೀ ನಾಡಿಗೇ ಗೊತ್ತು.

ನಿಖರವಾಗಿ, ಗುರಿ ತಪ್ಪದಂತೆ ಮಾತನಾಡುವ ಪ್ರಬುದ್ಧ ಮತ್ತು ಜವಾಬ್ದಾರಿಯುತ ನಾಗರಿಕ, ಘನತೆ ಕಾಪಾಡಿಕೊಂಡಿರುವ ಅಪ್ಪಟ ಮನುಷ್ಯ. ನಾನು ಅವರನ್ನು ಅರವತ್ತೈದರ ಆಸುಪಾಸಿನವರು ಅಂದುಕೊಂಡಿದ್ದೆ. ನಂತರ‌ ಗೊತ್ತಾದದ್ದು ಅವರಿಗೆ 78 ವರ್ಷ. ವಯಸ್ಸು ಕೇವಲ ಸಂಖ್ಯೆ ಎನ್ನುವುದು ಬರಗೂರು ಅವರನ್ನು ನೋಡಿದರೇ ಗೊತ್ತಾಗುತ್ತದೆ.

ಮುಖ್ಯಮಂತ್ರಿಯಾದ ನಿಮಗೂ 76 ವರ್ಷ. ಇವತ್ತಿಗೂ ಕ್ರಿಯಾಶೀಲರಾಗಿ ಜನಪರ ಸಭೆ, ಸಮಾರಂಭಗಳಲ್ಲಿ ಭಾಗವಹಿಸುತ್ತಾ ಜನಜಾಗೃತಿ ಮೂಡಿಸುತ್ತಿರುವ ಬರಗೂರು ವಿಧಾನ ಪರಿಷತ್ತಿಗೆ ಗೌರವ ತರಬಲ್ಲರು.

ಈ‌ ನಾಡಿನ ವರ್ತಮಾನದ ಅಪರೂಪದ ಚೇತನವಾಗಿರುವ ಬರಗೂರು ಸರ್ಕಾರಕ್ಕೂ ಮಾರ್ಗದರ್ಶನ ನೀಡಬಲ್ಲರು, ಅಪ್ರಬುದ್ಧ ಬಿಜೆಪಿಗಳಿಗೂ ಮನುಷ್ಯತ್ವದ ಪಾಠ ಕಲಿಸಬಲ್ಲರು. ಅವರ‌ ಮಾತಿಗೆ ಅಂಥ ಶಕ್ತಿ ಇದೆ. ಅವರಿಗೆ ಇದರಲ್ಲಿ ಆಸಕ್ತಿ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಅವರು ಕನ್ನಡದ ನಿಜವಾದ ಸಾಂಸ್ಕೃತಿಕ ಪ್ರತಿನಿಧಿ. ಅವರ ಪ್ರತಿಭೆ‌ ಮತ್ತು ಜನಪರ ಕಾಳಜಿಯೇ ಅವರ ಬಂಡವಾಳ.

ಬರಗೂರು ಅವರನ್ನು ನಾಮಕರಣ ಮಾಡಿದರೆ ನಿಮ್ಮ ಸರ್ಕಾರಕ್ಕೂ ಇನ್ನಷ್ಟು ಗೌರವ ಬರುತ್ತದೆ. ಈ ಬಗ್ಗೆ ಚಿಂತಿಸಿ ಸಕಾರಾತ್ಮಕವಾಗಿ ನಿರ್ಧರಿಸುವಿರೆಂಬ ನಂಬಿಕೆ ನನಗಿದೆ.
ನಿಮ್ಮ

– ಟಿ.ಕೆ.ತ್ಯಾಗರಾಜ್, ಹಿರಿಯ ಪತ್ರಕರ್ತರು

One Response

  1. Perfect human being with pro people thinking.Great writer,thinker and Cinema director with perfect vision.Definitely he will be asset to the House and Govt as well

Leave a Reply