ಬಿಜೆಪಿ ಬಂಡಾಯ ಶಮನಕ್ಕೆ ನಾಯಕರ ಯತ್ನ

3 years ago

Leaders try to quell BJP rebellion

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ರಣತಂತ್ರ ರೂಪಿಸಿ ಚುನಾವಣೆಗೆ ಮೊದಲ ಹಾಗೂ ಎರಡನೇ ಹಂತದ ಪಟ್ಟಿ ಬಿಡುಗಡೆ ನಂತರ ಉಂಟಾಗಿರುವ ಅಸಮಾಧಾನವನ್ನು ಶಮನಗೊಳಿಸಲು ಮುಂದಾಗಿರುವ ಬಿಜೆಪಿ ವರಿಷ್ಠರು ಇದೀಗ ಕೆಲ ಕ್ಷೇತ್ರಗಳ ಅಭ್ಯರ್ಥಿಗಳ ಬದಲಾವಣೆಗೆ ಚಿಂತನೆ ನಡೆಸಿದ್ದಾರೆ.

ಸದ್ಯ ಬಾಕಿ ಇರುವ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ತಯಾರಿಸುತ್ತಿದ್ದು, ಸದ್ಯದಲ್ಲೇ ಪಟ್ಟಿ ಬಿಡುಗಡೆಯಾಗಲಿದೆ. ಈ ವೇಳೆ ಟಿಕೆಟ್ ವಂಚಿತ ಮಾಜಿ ಮುಖ್ಯಮಂತ್ರಿ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಶಿವಮೊಗ್ಗ, ಕಾರವಾರ, ತುಮಕೂರು ಹಾಸನ ಮೈಸೂರು, ಬೆಂಗಳೂರು ನಗರ ಸೇರುವಂತೆ ಕೆಲವು ಕಡೆ ಅಸಮಾಧಾನ ತೀವ್ರಗೊಂಡಿದ್ದು ಇದನ್ನು ಶಮನಗೊಳಿಸಲು ಹೈಕಮಾಂಡ್ ಹಲವಾರು ತಂತ್ರಗಳನ್ನು ರೂಪಿಸುತ್ತಿದೆ.

ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಮತ್ತಿತರ ಪ್ರಮುಖರು ರಂಗಪ್ರವೇಶ ಮಾಡಿದ್ದು, ಭಿನ್ನಮತೀಯರನ್ನು ಮನವೊಲಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಟಿಕೆಟ್ ಸಿಗದ ಕಾರಣ ಪಕ್ಷ ತೊರೆಯಲು ಸಜ್ಜಾಗಿರುವವರನ್ನು ಸಂಪರ್ಕಿಸುತ್ತಿದ್ದು ಪಕ್ಷ ಬಿಟ್ಟುಹೋಗದಂತೆ ಮನವರಿಕೆ ಮಾಡುತ್ತಿರುವ ಪ್ರಮುಖರು ಬರುವ ದಿನಗಳಲ್ಲಿ ನಿಮಗೆ ಪಕ್ಷದ ವತಿಯಿಂದ ಸೂಕ್ತ ಸ್ಥಾನಮಾನ ನೀಡಲಾಗುವುದು. ಆತುರ ಬಿದ್ದು ದುಡುಕಿನ ನಿರ್ಧಾರ ಕೈಗೊಳ್ಳಬಾರ ದೆಂದು ಮನವಿ ಮಾಡುತ್ತಿದ್ದಾರೆ.

ಅಲ್ಲದೆ ಸದ್ಯ ಗೊಂದಲ ಇರುವ ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಸಂಪರ್ಕಿಸಿರುವ ವರಿಷ್ಠರು ತಮ್ಮಿಂದ ಸೂಚನೆ ಬರುವವರೆಗೂ ನಾಮಪತ್ರ ಸಲ್ಲಿಸದಿರಲು ಹೇಳಿದ್ದಾರೆ. ಹೀಗಾಗಿ ಬೆಳಗಾವಿ ಧಾರವಾಡ ಮತ್ತು ಕರಾವಳಿಯ ಕೆಲವು ಕಡೆ ಅಭ್ಯರ್ಥಿಗಳ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Leave a Reply