ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ತೀವ್ರತೆ ಹೆಚ್ಚುತ್ತಿರುವಂತೆ ವಿಧಾನಸಭಾ ಚುನಾವಣೆಯ ಕಾವು ಕೂಡ ನಿಧಾನಗತಿಯಿಂದ ಏರತೊಡಗಿದೆ. ಇದರ ನಡುವೆ ಬಿರಿಯಾನಿ ತಿನ್ನಲು ಹೇಳಿದ ಕಾರಣಕ್ಕೆ ಅಭ್ಯರ್ಥಿ ಒಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಾಮಪತ್ರ ಸಲ್ಲಿಕೆ ಸಂಬಂಧ ಸಭೆ ನಡೆಸಿ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಹಕಾರ ಸಚಿವ ಎಸ್‌ಟಿ ಸೋಮಶೇಖರ್ ಮತದಾರರನ್ನು ಬಿರಿಯಾನಿ ತಿನ್ನಲು ಬನ್ನಿ ಎಂದು ಆಹ್ವಾನಿಸಿದರು. ಈ ರೀತಿಯಾಗಿ ಬಹಿರಂಗವಾಗಿ ಆಹ್ವಾನ ನೀಡಿದ್ದರಿಂದ ಅವರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚುನಾವಣಾಧಿಕಾರಿಗಳು ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ್ದವರಿಗೆ ಬಿರಿಯಾನಿ ತಿನ್ನುವಂತೆ ಸಚಿವ ಎಸ್‌ಟಿ ಸೋಮಶೇಖರ್ ಆಹ್ವಾನಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಾರಿದಾಡಿತ್ತು. ಇದನ್ನು ದಾಖಲೆಯಾಗಿ ನೀಡಿರುವ ಜಾತ್ಯತೀತ ಜನತಾದಳ
ಸಚಿವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ ದಡಿಯಲ್ಲಿ ದೂರು ದಾಖಲಿಸಿದೆ. ಈ ದೂರಿನ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸಿದೆ.
ಕಳೆದ ಏ.ಪ್ರಿಲ್ 9ರಂದು ಬೆಂಗಳೂರಿನ ಕೆಂಗೇರಿ ಹೋಬಳಿಯ ದೊಡ್ಡಿಪಾಳ್ಯದ ಕಬ್ಬಾಳಮ್ಮ ದೇವಸ್ಥಾನದ ಬಳಿ ಎಸ್‌ಟಿ ಸೋಮಶೇಖರ್ ಪ್ರಚಾರ ನಡೆಸುತ್ತಿದ್ದು, ಅಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾಷಣ ಮುಗಿಸಲು ಸಿದ್ಧವಾದಾಗ ಅವರ ಬೆಂಬಲಿಗರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದವರಿಗೆ ಊಟ ಸಿದ್ಧವಾಗಿದೆ ಎಂದು ಘೋಷಿಸುವಂತೆ ಮನವಿ ಮಾಡಿದರು.
ಈ ವೇಳೆ ಬಿಜೆಪಿ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ಬೆಂಬಲಿಗರ ಮನವಿಗೆ ಒಪ್ಪಿಕೊಂಡು, “ಈಗಾಗಲೇ ಊಟಕ್ಕೆ ತಡವಾಗಿದೆ ಮತ್ತು ಆಹಾರ ಸಿದ್ಧವಾಗಿದೆ. ಅದೂ ಬಿರಿಯಾನಿ. ದಯವಿಟ್ಟು ಎಲ್ಲರೂ ಊಟ ಮಾಡಿಕೊಂಡು ಹೋಗಿ” ಎಂದಿದ್ದರು. ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಿರುವ ಕಾರಣ ಹೀಗೆ ಮತದಾರರಿಗೆ ಆಮಿಶ ಒಡ್ಡುವಂತಿಲ್ಲ. ಸೋಮಶೇಖರ್ ಅವರು ಮತದಾರರಿಗೆ ಆಮಿಷ ಒಡ್ಡಿ ಬಿರಿಯಾನಿ ಔತಣ ನೀಡಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಅವರ ಹೇಳಿಕೆಯ ವಿಡಿಯೋ ದೃಶ್ಯಾವಳಿ ಆಧರಿಸಿ ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ವಿಡಿಯೋ ದೃಶ್ಯಾವಳಿ ಆಧರಿಸಿ ಚುನಾವಣಾ ಕಣ್ಗಾವಲು ತಂಡದ ಅಧಿಕಾರಿ ಪ್ರಕಾಶ್ ಸಿಪಿ ಅವರು ಕಗ್ಗಲಿಪುರ ಪೊಲೀಸರಿಗೆ ದೂರು ನೀಡಿದ್ದು, ಸೋಮಶೇಖರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಮೇ.10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಮಾರ್ಚ್ 29 ನೀತಿ ಸಂಹಿತೆ ಜಾರಿಯಾಗಿದೆ. ಆದರೂ, ಕೂಡ ಸಿವಿಜಿಲ್ ಆಯಪ್‌ನಲ್ಲಿ ಏಪ್ರಿಲ್ 11ರವರೆಗೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ 460 ದೂರುಗಳು ದಾಖಲಾಗಿವೆ. ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಮಂಗಳವಾರದವರೆಗೆ 1,018 ಎಫ್‌ಐಆರ್‌ಗಳು ದಾಖಲಾಗಿದ್ದು, ಮಾದಕ ದ್ರವ್ಯ, ಮದ್ಯ, ಅಮೂಲ್ಯ ಲೋಹಗಳು ಮತ್ತು ಇತರ ಉಡುಗೊರೆಗಳು ಸೇರಿದಂತೆ 51 ಕೋಟಿ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ 24 ಗಂಟೆಗಳ ಸಹಾಯವಾಣಿ ಸೇವೆಯನ್ನು ತೆರೆಯಲಾಗಿದೆ.




