ಬಾಲ ಕಾರ್ಮಿಕ ಪತ್ತೆ ಕಾರ್ಯದಲ್ಲಿ ಪ್ರಗತಿ ಕುಂಠಿತ
ಶಾಲೆಬಿಟ್ಟ ಮಕ್ಕಳ ಚಲನವಲನದ ಮೇಲೆ ನಿಗಾವಹಿಸಲು ಡಿಸಿ ಕಟ್ಟುನಿಟ್ಟಿನ ಸೂಚನೆ
ದಾವಣಗೆರೆ: ಬಾಲ ಕಾರ್ಮಿಕ ಪದ್ಧತಿ ಅಲ್ಲಲ್ಲಿ ವರದಿಯಾಗುತ್ತಿದ್ದರೂ ಇದನ್ನು ಸಪೂರ್ಣವಾಗಿ ನಿರ್ಮೂಲನೆ ಮಾಡಲು ಅಂತರ್ ಇಲಾಖೆಗಳಲ್ಲಿನ ಸಮನ್ವಯತೆ ಕೊರತೆ ಕಾರಣವಾಗಿದೆ. ಬಾಲ ಕಾರ್ಮಿಕರು ಕಂಡು ಬಂದ ತಕ್ಷಣ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದರು.
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
- ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ: ಸಿದ್ದರಾಮಯ್ಯ
- ಉನ್ನತ ಮಟ್ಟದ ಪರಿಶೀಲನಾ ಸಮಿತಿಗೆ ಪತ್ರ ಬರೆದ ಪ್ರತಿಪಕ್ಷ ನಾಯಕ ಆರ್.ಅಶೋಕ
- ಕಸಾಪಗೆ ಕಪ್ಪುಚುಕ್ಕೆ ಇಟ್ಟವರು ನಾಲ್ವಡಿಯವರಿಗೆ ಬಗೆದ ದ್ರೋಹ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಯ ಜಿಲ್ಲಾ ಮಟ್ಟದ ಕಾರ್ಯಪಡೆ ಹಾಗೂ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 2024 ರ ಏಪ್ರಿಲ್ ನಿಂದ 2025 ರ ಮಾರ್ಚ್ ಅಂತ್ಯದವರೆಗೆ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ 1986 ರ ಕಾಯಿದೆ ಕಲಂ 16 ಮತ್ತು 17 ರಡಿ 372 ಕಡೆ ತಪಾಸಣೆ ನಡೆಸಿ 23 ಬಾಲ ಕಾರ್ಮಿಕರನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಲಾಗಿದೆ. ಆದರೆ ಒಂದು ವರ್ಷದ ಅವಧಿಯಲ್ಲಿ ಇಷ್ಟು ಮಾತ್ರ ಬಾಲ ಕಾರ್ಮಿಕರು ಪತ್ತೆ ಮಾಡಲಾಗಿದ್ದು ಅಂತರ್ ಇಲಾಖೆಗಳಲ್ಲಿನ ಅಧಿಕಾರಿಗಳ ಸಮನ್ವಯತೆಯ ಕೊರತೆ ಕಾಣಲಾಗುತ್ತಿದೆ ಎಂದರು.
ಬಾಲ ಕಾರ್ಮಿಕ ಪದ್ದತಿ ಸಂಪೂರ್ಣ ನಿರ್ಮೂಲನೆಯಾಗಬೇಕು ಮತ್ತು ಬಾಲ್ಯ ವಿವಾಹ ಹಾಗೂ ಪೋಕ್ಸೋ ಪ್ರಕರಣಗಲು ಸಹ ವರದಿಯಾಗಬಾರದು. ಬಾಲ್ಯ ವಿವಾಹವಾಗುವುದರಿಂದ ತಾಯಿ ಮರಣ ಪ್ರಮಾಣವು ಹೆಚ್ಚಲಿದೆ. ಜಿಲ್ಲೆಯಲ್ಲಿ ತಾಯಿ ಮರಣ ದರ ಹೆಚ್ಚಿದೆ. ಈ ಎಲ್ಲಾ ಕಾರಣಗಳಿಂದ ದಾವಣಗೆರೆ ಜಿಲ್ಲೆ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಿದ್ದರೂ ಸಹ ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ 26 ನೇ ಸ್ಥಾನದಲ್ಲಿದೆ, ಇದು ಬೇಸರದ ಸಂಗತಿಯಾಗಿದೆ ಎಂದರು.
ಬಾಲ ಗರ್ಭಿಣಿಯರನ್ನು ತಡೆಗಟ್ಟಲು ಬಾಲ್ಯವಿವಾಹಗಳನ್ನು ಸಂಪೂರ್ಣವಾಗಿ ತಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ತಹಶೀಲ್ದಾರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಶಿಶು ಅಭಿವೃದ್ದಿ ಅಧಿಕಾರಿಗಳು ಪ್ರತಿ ತಿಂಗಳು ಸಭೆಗಳನ್ನು ನಡೆಸುವ ಮೂಲಕ ಬಾಲ್ಯವಿವಾಹಗಳನ್ನು ತಡೆಗಟ್ಟಲು ಕ್ರಮವಹಿಸಬೇಕೆಂದು ಸೂಚನೆ ನೀಡಿ ಶಾಲೆಬಿಟ್ಟ ಮಕ್ಕಳ ಮೇಲೆ ಸಂಪೂರ್ಣ ನಿಗಾವಹಿಸಲು ಡಿಡಿಪಿಐಗೆ ಸೂಚಿಸಿದರು.
ಅಧಿಕಾರಿಗಳ ನಡೆ ತರಗತಿಗಳ ಕಡೆ: ಜಿಲ್ಲೆಯಲ್ಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿನ ಫಲಿತಾಂಶ ಕಡಿಮೆಯಾಗಿರುವ ಕಾರಣ ಮುಂದಿನ ದಿನಗಳಲ್ಲಿ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಹ ವಿದ್ಯಾರ್ಥಿಗಳಂತೆ ಪಾಠ ಕೇಳುವ ಕೆಲಸವನ್ನು ಮಾಡಲು ಸೂಚನೆ ನೀಡಲಾಗಿದ್ದು ಖುದ್ದು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರು ಸೇರಿದಂತೆ ಹಿರಿಯ ಅಧಿಕಾರಿಗಳು ಸಹ ವಿದ್ಯಾರ್ಥಿಗಳಂತೆ ಪಾಠ ಕೇಳಲು ಶಾಲೆ ಮತ್ತು ಕಾಲೇಜುಗಳಿಗೆ ತೆರಳಲಿದ್ದಾರೆ. ಈ ತಿಂಗಳ ಅಂತ್ಯದ ವೇಳೆಗೆ ಈ ಕೆಲಸವನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ವಿಜ್ಞಾನ ವಿಷಯದಲ್ಲಿ ಫಲಿತಾಂಶ ಉತ್ತಮವಾಗಿದೆ. ಆದರೆ ಕನ್ನಡ, ಹಿಂದಿ ಸೇರಿದಂತೆ ಸರಳವಾದ ವಿಷಯಗಳಲ್ಲಿಯೇ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದಾರೆ. ಒಂದೇ ವಿಷಯದಲ್ಲಿ ಅನೇಕ ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದರಿಂದ ಇದನ್ನು ಸುಧಾರಣೆ ಮಾಡಿದಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶ ಸಿಗಲಿದೆ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಮಹಾವೀರ್ ಮ.ಕರಣ್ಣನವರ್, ಹೆಚ್ಚುವರಿ ರಕ್ಷಣಾಧಿಕಾರಿ ಮಂಜುನಾಥ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಮತ ಹೊಸಗೌಡರ್, ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ಅವಿನಾಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.




