KRS ಪಕ್ಷದ ಪ್ರಣಾಳಿಕಾ ಅಂಶಗಳು

3 years ago

KRS ಅನ್ನುವಂತಹ ಒಂದು ರಾಜಕೀಯ ಚಳವಳಿ ಕರ್ನಾಟಕದಲ್ಲಿ ಮೂರುವರೆ ವರ್ಷಗಳ ಮುಂಚೆ ಆರಂಭವಾಗಿ (ಇದರ ಮೂಲ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ (ರಿ) – 2016) ನಿರಂತರವಾಗಿ ಬೆಳೆಯುತ್ತಾ ಒಂದು ರಾಜಕೀಯ ಕ್ರಾಂತಿಯಾಗಿ ಹೊರಹೊಮ್ಮುತ್ತಿದೆ.

ರಾಜಕೀಯ ಅಂದರೆ ಚುನಾವಣೆ, ಚುನಾವಣೆಗಳಲ್ಲಿ ಸ್ಪರ್ಧೆ, ಗೆಲುವು, ಸೋಲು ಇತ್ಯಾದಿ. ಒಂದು ರಾಜಕೀಯ ಪಕ್ಷದ ಚುನಾವಣೆಗಳಲ್ಲಿನ ಗೆಲುವು, ಆ ರಾಜಕೀಯ ಪಕ್ಷದ ಬ್ರಾಂಡ್, ಧ್ಯೇಯ ಉದ್ದೇಶ ಎಷ್ಟು ಜನರನ್ನು ತಲುಪಿದೆ, ಮನಮುಟ್ಟಿದೆ ಅನ್ನುವುದರಿಂದ ಹಿಡಿದು ಆ ರಾಜಕೀಯ ಪಕ್ಷದ ಪ್ರಣಾಳಿಕಾ ಅಂಶಗಳು ಮತ್ತು ಆ ಅಂಶಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ನುಡಿದಂತೆ ನಡೆಯುವ ಸಾಧ್ಯತೆಗಳ ಮೇಲೆ ನಿಂತಿದೆ.

ಈ ಲೇಖನದಲ್ಲಿ ನಾವು KRS ಪಕ್ಷದ ಪ್ರಣಾಳಿಕಾ ಅಂಶಗಳು
1) ಎಷ್ಟು ಪರಿಣಾಮಕಾರಿಯಾಗಿ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ ಮತ್ತು
2) ಅಧಿಕಾರಕ್ಕೆ ಬಂದ ಮೇಲೆ ಆ ಅಂಶಗಳನ್ನು ಜಾರಿಗೊಳಿಸುವ ಇಚ್ಚಾಶಕ್ತಿ ಪಕ್ಷದಲ್ಲಿ ಇದೆಯೇ ಎಂದು ವಿಶ್ಲೇಷಿಸೋಣ,

1) ಮೊದಲನೆಯದಾಗಿ KRS ಪಕ್ಷದ ಪ್ರಣಾಳಿಕಾ ಅಂಶಗಳು ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಿ ಜೀವನವನ್ನು ಸುಲಭಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಯಾಕೆಂದರೆ

ಪ್ರಣಾಳಿಕಾ ಅಂಶ 1
ಲಂಚ ಮತು ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದರಿಂದ ಸರ್ಕಾರದ ಬೊಕ್ಕಸದಲ್ಲಿ ಉಳಿಯುವ ಹೆಚ್ಚುವರಿ ಹಣದಿಂದ ಸಂಪೂರ್ಣ ಹದೆಗೆಟ್ಟಿರುವ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಬಹುದು (ಒಳ್ಳೆಯ ಬಾಳಿಕೆ ಬರುವ ರಸ್ತೆ, ಚರಂಡಿಗಳು, ಸಾರಿಗೆ ವ್ಯವಸ್ಥೆ, ಬಡವರಿಗೆ, ಅಸಹಾಯಕರಿಗೆ ವಸತಿ, ಸೌಲಭ್ಯಗಳು, ಉಚಿತ ಗುಣಮಟ್ಟದ ಆಸ್ಪತ್ರೆಗಳು ಇತ್ಯಾದಿ)

ಪ್ರಣಾಳಿಕಾ ಅಂಶ 2
ತಂತ್ರಜ್ಞಾನದ ಬಳಕೆಯಿಂದ (E-Governance) ನಾಗರಿಕರ ಸಮಯದ ಉಳಿತಾಯ, ಸೇವೆ ಪಡೆಯಲು ಅನುಕೂಲತೆ, ದರಗಳ ಮತ್ತು ತೆರಿಗೆಗಳ ಇಳಿಕೆ, ನೆಮ್ಮದಿ ಇತ್ಯಾದಿ.

ಪ್ರಣಾಳಿಕಾ ಅಂಶ 3
ಮದ್ಯ ನಿಷೇಧದಿಂದ ಗ್ರಾಮೀಣ ಮಹಿಳೆಯರ ಬದುಕಿನಲ್ಲಿ ಆಶಾಕಿರಣ ಹುಟ್ಟಲಿದೆ. ಅವರ ಗಂಡಂದಿರು ಮದ್ಯವ್ಯಸನದಿಂದ ಮುಕ್ತರಾಗಿ ಮನೆಯಲ್ಲಿ ನೆಮ್ಮದಿ ನೆಲೆಸಲಿದೆ ಮತ್ತು ಹಣ ಉಳಿತಾಯ ಆಗಿ ಅವರ ಜೀವನ ಮಟ್ಟ ಸುಧಾರಿಸಲಿದೆ.

ಪ್ರಣಾಳಿಕಾ ಅಂಶ 4
ಅತ್ಯುತ್ತಮ ಗುಣಮಟ್ಟದ ಉಚಿತ ಸರ್ಕಾರಿ ಶಿಕ್ಷಣದಿಂದ ಪ್ರತಿಯೊಬ್ಬ ಮಗುವಿಗೂ ತನ್ನ ಮೂಲಭೂತ ಹಕ್ಕು ಶಿಕ್ಷಣ ದೊರೆಯಲಿದೆ. ಇದರಿಂದ ಖಾಸಗಿ ಶಿಕ್ಷಣ ಸಂಸ್ತೆಗಳ ಮಾಫಿಯಾ ಮುರಿದು ಜನರ ಬಳಿ ಹಣ ಉಳಿತಾಯವಾಗಲಿದೆ. ಒಳ್ಳೆಯ ಶಿಕ್ಷಣ ಪಡೆದ ಮಕ್ಕಳು ತಮ್ಮ ಜೀವನವನ್ನು ತಾವೇ ರೂಪಿಸಿಕೊಂಡು ತಮ್ಮ ಕುಟುಂಬಕ್ಕೆ ಆಧಾರವಾಗಿ ಬಡತನ ನಿರ್ಮೂಲನೆಯಾಗಲಿದೆ.

ಪ್ರಣಾಳಿಕಾ ಅಂಶ 4
ಸ್ವಾವಲಂಬಿ ಹಳ್ಳಿಗಳು – ಗ್ರಾಮ ಸ್ವರಾಜ್ಯ – ಸಾಲಮುಕ್ತ ರೈತ. ಇದರಿಂದ ನಗರಗಳ ಮೇಲೆ ಒತ್ತಡ ಕಡಿಮೆಯಾಗಿ, ರೈತರಿಗೆ ತಮ್ಮ ಉತ್ಪನ್ನಗಳಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ ಸಿಕ್ಕಿ ವೆಚ್ಚಗಳು ಕಡಿಮೆಯಾಗಿ ಅವರ ಲಾಭ ಹೆಚ್ಚಲಿದೆ. ಇದು ಹಳ್ಳಿಗಳಲ್ಲಿ ಜನರ ಜೀವನ ಮಟ್ಟ ಸುಧಾರಣೆಯಾಗಿ ನೆಮ್ಮದಿಯ ಬದುಕು ನೀಡಲಿದೆ. ಈ ನೆಮ್ಮದಿಯ ಬದುಕಿನ ಕಾರಣಕ್ಕೆ ಜನರಲ್ಲಿ ಸಾಹಿತ್ಯ, ಕಲೆ, ಸಂಸ್ಕೃತಿಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿ ಒಟ್ಟಾರೆಯಾಗಿ ಕನ್ನಡ ಸಂಸ್ಕೃತಿ ಬೆಳೆಯಲಿದೆ.

ಪ್ರಣಾಳಿಕಾ ಅಂಶ 5
ಸರ್ಕಾರದ ಖಾಲಿ ಇರುವ 3 ಲಕ್ಷ ಹುದ್ದೆಗಳನ್ನು ಪಾರದರ್ಶಕವಾಗಿ ಭರ್ತಿ ಮಾಡುವುದರಿಂದ ಮತ್ತು ಕರ್ನಾಟಕದ ಉದ್ಯೋಗಳಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗುವುದರಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ನಿರುದ್ಯೋಗಿ ಪದವೀಧರರಿಗೆ ಮಾಸಾಶನ ಸಿಗುವುದರಿಂದ ಉದ್ಯೋಗಗಳ ಹುಡುಕಾಟದಲ್ಲಿ ಹಣ ಸಂಪನ್ಮೂಲಕ್ಕೆ ಅವರ ಕುಟುಂಬಗಳ ಮೇಲೆ ಅವಲಂಬನೆ ಕಡಿಮೆಯಾಗಲಿದೆ.

2) ಎರಡನೆಯದಾಗಿ ಈ ಮೇಲಿನ ಎಲ್ಲಾ ಸಾಧ್ಯತೆಗಳು ಇರುವುದು ಮುಖ್ಯವಾಗಿ KRS ಪಕ್ಷ ನುಡಿದಂತೆ ನಡೆದರೆ ಮಾತ್ರ. ಈ ಪಕ್ಷ ನುಡಿದಂತೆ ನಡೆಯುವ ಪಕ್ಷ ಅನ್ನುವುದಕ್ಕೆ ಈ ಕೆಳಗಿನ ಉದಾಹರಣೆಗಳೇ ಸಾಕ್ಷಿ.

1) ಪಕ್ಷ ಹೇಳುತ್ತಿರುವಂತೆ ಯಾವುದೇ ಚುನಾವಣಾ ಅಕ್ರಮಗಳನ್ನು ಮಾಡದೇ ಚುನಾವಣೆ ನಡೆಸಿ ಗೆಲ್ಲಲು ಪ್ರಯತ್ನಿಸುತ್ತೇವೆ ಎಂದು. ಅದೇ ರೀತಿ ಬೇರೆ ಪಕ್ಷಗಳು ಕುಕ್ಕರ್, ಕುಪ್ಪಸ, ಹಣ, ಹೆಂಡ ಇತ್ಯಾದಿಗಳನ್ನು ಮತದಾರರಿಗೆ ನೀಡಿ ಅವರ ಮತಗಳನ್ನು ಕೊಂಡುಕೊಳ್ಳಲು ಪ್ರಯತ್ನಿಸಿದರೂ KRS ಪಕ್ಷ ಪ್ರಾಮಾಣಿಕ ಮಾರ್ಗದಲ್ಲಿ ಮಾತ್ರ ಚುನಾವಣೆಗಳನ್ನು ಎದುರಿಸಿ ಗೆಲ್ಲಬೇಕೆಂದು ಪಣತೊಟ್ಟು ನುಡಿದಂತೆ ನಡೆಯುತ್ತಿದೆ. ಇದು ಸಾಧ್ಯ ಇರುವುದು ಒಂದು ಆತ್ಮಬಲ ಇರುವ ಸೈನಿಕರಿರುವ ಪಕ್ಷಕ್ಕೆ ಮಾತ್ರ.

2) ನಗರಗಳಲ್ಲಿ ಪ್ಲೆಕ್ಸ್ ಗಳನ್ನು ನಿಷೇಧ ಮಾಡಿದ್ದರೂ ಬೇರೆ ಎಲ್ಲಾ ಪಕ್ಷಗಳು ಈ ಕಾನೂನನ್ನು ಮುರಿದು ಎಲ್ಲಾ ಕಡೆ ತಮ್ಮ ಅಭ್ಯರ್ಥಿಗಳ, ಆಕಾಂಕ್ಷಿಗಳ ಪ್ರಚಾರಗಳನ್ನು ಪ್ಲೆಕ್ಸ್ ಗಳನ್ನು ಹಾಕಿ ಮಾಡುತ್ತಿರುವುದು.

ಆದರೆ KRS ಪಕ್ಷ ಮಾತ್ರ ಕಾನೂನನ್ನು ಪಾಲಿಸುತ್ತಾ ಕಾನೂನಿನ ಅಡಿಯಲ್ಲಿ ಇರುವ ಅವಕಾಶಗಳನ್ನು ಮಾತ್ರ ಬಳಸಿ ತನ್ನ ಅಭ್ಯರ್ಥಿಗಳ ಪ್ರಚಾರ ಮಾಡುತ್ತಿದೆ. ಇದರಿಂದ ಪಕ್ಷದ ಪ್ರಚಾರಕ್ಕೆ ಹಿನ್ನಡೆಯಾದರೂ ಪರವಾಗಿಲ್ಲ ನಾವು ಕಾನೂನಿನ ಅಡಿಯಲ್ಲಿ ಕೆಲಸ ಮಾಡುತ್ತೇವೆ ಎಂದು ಧೈರ್ಯ ತೋರಿಸಿ ಅಷ್ಟು ಒತ್ತಡಗಳ ನಡುವೆಯೂ ನುಡಿದಂತೆ ನಡೆಯುತ್ತಿದೆ. ಇದು ಸಾಧ್ಯವಿರುವುದು ಆತ್ಮಬಲ ಇರುವ ಸೈನಿಕರ ಪಕ್ಷಕ್ಕೆ ಮಾತ್ರ.

3) ಜನರ ಪರವಾಗಿ ಹೋರಾಟಗಳನ್ನು ಮಾಡುವ ಸಮಯದಲ್ಲಿ ಭ್ರಷ್ಟ ಅಧಿಕಾರಿಗಳು ಮತ್ತು ಪೊಲೀಸರು ಸೈನಿಕರ ವಿರುದ್ಧ ಎಷ್ಟೇ ಅವಾಚ್ಯ ಶಬ್ದಗಳನ್ನು ಬಳಸಿದರೂ, ಯಾವುದೇ ಸುಳ್ಳು ಕೇಸುಗಳನ್ನು ಹಾಕಿದರೂ ಅದನ್ನು ತಾಳ್ಮೆ ಕಳೆದುಕೊಳ್ಳದೇ ಸಂಯಮದಿಂದ ಕಾನೂನಿನ ಅಡಿಯಲ್ಲಿ ಇರುವ ಅವಕಾಶಗಳ ಮೂಲಕವೇ ಹೋರಾಡಿ, ಪ್ರಾಮಾಣಿಕತೆ ಮತ್ತು ಅಹಿಂಸೆಯಿಂದ ಜಯಗಳಿಸಬಹುದು ಎಂದು ತೋರಿಸಿ ನುಡಿದಂತೆ ನಡೆಯುತ್ತಿದೆ. ಇದು ಒಂದು ಆತ್ಮಬಲ ಇರುವ ಸೈನಿಕರಿರುವ ಪಕ್ಷಕ್ಕೆ ಮಾತ್ರ ಸಾಧ್ಯ.

4) ಪಕ್ಷಕ್ಕೆ ಸಿಕ್ಕಿರುವ ಜನಪ್ರಿಯತೆಯಿಂದ ಪಕ್ಷಕ್ಕೆ ಹಲವಾರು ರೀತಿಯ ಭ್ರಷ್ಟರು ಹಣದ ಬಲವನ್ನು ನೀಡುತ್ತೇವೆ ಎಂದು ಬಂದರೂ ಅದಕ್ಕೆ ಯಾವುದೇ ರೀತಿಯ ಮನ್ನಣೆ ನೀಡದೇ, ಪಕ್ಷದ ಧ್ಯೇಯ ಉದ್ದೇಶಗಳಿಗೆ ಧಕ್ಕೆಯಾಗದಂತೆ ನೋಡಿಕೊಂಡು ಹಣ ಸಂಪನ್ಮೂಲದ ಕೊರತೆ ಇದ್ದರೂ ಅದನ್ನು ಕಷ್ಟ ಪಟ್ಟು ನಿಭಾಯಿಸಿ ಮುಂದುವರೆಯುತ್ತಿರುವುದು KRS ಪಕ್ಷ.

5) KRS ಪಕ್ಷದ ಸೈನಿಕರು ಪ್ರತಿಯೊಂದು ಕಾರ್ಯಕ್ರಮಕ್ಕೂ ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಭಾಗವಹಿಸುತ್ತಿದ್ದಾರೆ. ಜನಸಾಮಾನ್ಯರು ಪ್ರತಿದಿನ ಪಕ್ಷಕ್ಕೆ ದೇಣಿಗೆಯನ್ನು ನೀಡುತ್ತಿದ್ದಾರೆ, ಸದಸ್ಯರಾಗುತ್ತಿದ್ದಾರೆ. ತನ್ನ ಕೆಲಸದಿಂದ ಮತ್ತು ನುಡಿದಂತೆ ನಡೆಯುತ್ತಿರುವುದರಿಂದ ಜನಸಾಮಾನ್ಯರ ಹೃದಯ ಮುಟ್ಟಿರುವುದೇ ಇದಕ್ಕೆ ಕಾರಣ.

ಬನ್ನಿ, ಬಂಧುಗಳೇ ಈ ಬಾರಿ ಒಂದು ರಾಜಕೀಯ ಕ್ರಾಂತಿಯಾಗಿ ಹೊರಹೊಮ್ಮುತ್ತಿರುವ ಜನಸಾಮಾನ್ಯರ ಸಂಕಷ್ಟಗಳಿಗೆ ಪರಿಹಾರ ನೀಡುವಂತಹ ಪ್ರಣಾಳಿಕೆ ಹೊಂದಿರುವ, ನುಡಿದಂತೆ ನಡೆಯುತ್ತಿರುವ KRS ಪಕ್ಷಕ್ಕೆ ಈ ಮುಂಬರುವ ಚುನಾವಣೆಯಲ್ಲಿ ಬೆಂಬಲ ನೀಡಿ ಜಯಶಾಲಿಯನ್ನಾಗಿ ಮಾಡೋಣ.

-ರಘುಪತಿ ಭಟ್, ರಾಜ್ಯ ಜಂಟಿ ಕಾರ್ಯದರ್ಶಿ
KRS ಪಕ್ಷ

Leave a Reply