
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಫಲಿತಾಂಶದಲ್ಲಿ ಅಚ್ಚರಿಯ ರಾಜಕೀಯ ಬೆಳವಣಿಗೆಯೊಂದು ರಾಜ್ಯದಷ್ಟೇ ಅಲ್ಲ, ದೇಶದ ಗಮನ ಸೆಳೆದಿದೆ. ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಮೊದಲ ಬಾರಿಗೆ ಭಾರೀ ಸಂಚಲನ ಮೂಡಿಸಿದ್ದು, ತಿರುಪತ್ತೂರ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಡಿಎಂಕೆ ಸರ್ಕಾರದ ಪ್ರಭಾವಿ ಸಚಿವ ಕೆ.ಆರ್. ಪೆರಿಯಕರುಪ್ಪನ್ ಕೇವಲ ಒಂದೇ ಒಂದು ಮತದ ಅಂತರದಿಂದ ಸೋಲು ಅನುಭವಿಸಿದ್ದಾರೆ.
ಟಿವಿಕೆ ಅಭ್ಯರ್ಥಿ ಶೀನಿವಾಸ ಸೇತುಪತಿ ಅವರು 83,375 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಸಚಿವ ಕೆ.ಆರ್. ಪೆರಿಯಕರುಪ್ಪನ್ ಅವರಿಗೆ 83,374 ಮತಗಳು ಲಭಿಸಿವೆ. ಕೇವಲ ಒಂದು ಮತದ ಅಂತರದ ಈ ಫಲಿತಾಂಶ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕೊನೆಯ ಕ್ಷಣದವರೆಗೂ ರೋಚಕ ಕದನ
ಮತ ಎಣಿಕೆಯ ಆರಂಭದಿಂದಲೇ ತಿರುಪತ್ತೂರ್ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಕಂಡುಬಂದಿತ್ತು. ಕೆಲ ಹಂತಗಳಲ್ಲಿ ಸಚಿವ ಪೆರಿಯಕರುಪ್ಪನ್ ಸುಮಾರು 30 ಮತಗಳ ಮುನ್ನಡೆ ಸಾಧಿಸಿ ಗೆಲುವಿನ ವಿಶ್ವಾಸದಲ್ಲಿದ್ದರು. ಆದರೆ ಅಂತಿಮ ಸುತ್ತಿನ ಮತ ಎಣಿಕೆಯಲ್ಲಿ ಟಿವಿಕೆ ಅಭ್ಯರ್ಥಿ ಶೀನಿವಾಸ ಸೇತುಪತಿ ಅಚ್ಚರಿ ತಿರುವು ನೀಡಿ ಸಚಿವರನ್ನು ಹಿಂದಿಕ್ಕಿದರು.
ಮಸ್ಕತ್‌ನಿಂದ ಬಂದು ಹಾಕಿದ ‘ಆ ಒಂದು ಮತ’?
ಈ ರೋಚಕ ಗೆಲುವಿನ ಹಿಂದೆ ವಿಜಯ್ ಅಭಿಮಾನಿಯೊಬ್ಬರ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಸ್ಕತ್‌ನಲ್ಲಿ ಉದ್ಯೋಗದಲ್ಲಿದ್ದ ದಳಪತಿ ವಿಜಯ್ ಅವರ ಕಟ್ಟಾ ಅಭಿಮಾನಿಯೊಬ್ಬರು, ಟಿವಿಕೆ ಪಕ್ಷಕ್ಕೆ ಮತ ಚಲಾಯಿಸಲು ವಿಶೇಷವಾಗಿ ವಿಮಾನ ಟಿಕೆಟ್ ಬುಕ್ ಮಾಡಿಕೊಂಡು ತಿರುಪತ್ತೂರ್‌ಗೆ ಆಗಮಿಸಿ ಮತ ಹಾಕಿದ್ದರು ಎನ್ನಲಾಗಿದೆ.
ಇದೀಗ ಅಭ್ಯರ್ಥಿಯ ಗೆಲುವಿನ ಅಂತರ ಕೇವಲ ಒಂದು ಮತವಾಗಿರುವ ಹಿನ್ನೆಲೆಯಲ್ಲಿ, “ಮಸ್ಕತ್‌ನಿಂದ ಬಂದು ಹಾಕಿದ ಅದೇ ಒಂದು ಮತ ಟಿವಿಕೆ ಅಭ್ಯರ್ಥಿಯ ಗೆಲುವಿಗೆ ಕಾರಣವಾಯಿತೇ?” ಎಂಬ ಚರ್ಚೆ ಜೋರಾಗಿದೆ.
ಪ್ರಜಾಪ್ರಭುತ್ವದ ಶಕ್ತಿಗೆ ಜೀವಂತ ಉದಾಹರಣೆ
ಒಂದೇ ಒಂದು ಮತ ಚುನಾವಣೆಯ ದಿಕ್ಕನ್ನೇ ಬದಲಾಯಿಸಬಲ್ಲದು ಎಂಬುದಕ್ಕೆ ತಿರುಪತ್ತೂರ್ ಕ್ಷೇತ್ರದ ಈ ಫಲಿತಾಂಶ ಜೀವಂತ ಸಾಕ್ಷಿಯಾಗಿದೆ. ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಈ ಗೆಲುವು ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.




