ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ಸಾವು

3 years ago

ಬೆಂಗಳೂರು: ಬೆಂಗಳೂರಿನ ಎಚ್‌ಬಿಆರ್ ಬಡಾವಣೆಯ ಹೆಣ್ಣೂರು ಕ್ರಾಸ್‌ ಬಳಿ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್‌ ಕುಸಿದು ತಾಯಿ ತೇಜಸ್ವಿನಿ (23) ಎರಡೂವರೆ ವರ್ಷದ ಮಗು ವಿಹಾನ್ ಮೃತಪಟ್ಟಿದ್ದಾರೆ.

ನಾಗವಾರ – ಗೊಟ್ಟಿಗೆರೆ ಮಾರ್ಗದಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿತ್ತು ಇಲ್ಲಿ ಪಿಲ್ಲರ್ ಗೆ ಅಳವಡಿಸಿದ್ದ ಕಬ್ಬಿಣದ ಸಲಾಕೆಗಳು ಏಕಾಏಕಿ ಚಲಿಸುತ್ತಿದ್ದ ಆ್ಯಕ್ಟಿವ್ ಹೋಂಡಾ ಸ್ಕೂಟರ್ ಮೇಲೆ ಉರುಳಿಬಿದ್ದ ಪರಿಣಾಮ ತಾಯಿ-ಮಗು ಮೃತಪಟ್ಟರೆ ಮೃತರ ಪತಿ ಲೋಹಿತ್ ಕುಮಾರ್ ಮತ್ತು ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂಲತಃ ಧಾರವಾಡ ಜಿಲ್ಲೆಯ ತೇಜಸ್ವಿನಿ ಮತ್ತು ಲೋಹಿತ್ ಕುಮಾರ್ ಮಾನ್ಯತಾ ಟೆಕ್‍ಪಾರ್ಕ್‍ನಲ್ಲಿರುವ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ದಂಪತಿಗೆ ಅವಳಿಜವಳಿ ಮಕ್ಕಳಿದ್ದರು. ಪ್ರತಿದಿನ ದಂಪತಿ ಕೆಲಸಕ್ಕೆ ಹೋಗುವ ಮುನ್ನ ನಾಗವಾರದಲ್ಲಿರುವ ಪ್ಲೇ ಹೋಂಗೆ ಮಕ್ಕಳನ್ನು ಬಿಡುತ್ತಿದ್ದರು.

ಅದರಂತೆ ಇಂದು ಬೆಳಗ್ಗೆ 9.40ರ ಸುಮಾರಿನಲ್ಲಿ ಮಕ್ಕಳನ್ನು ಕರೆದುಕೊಂಡು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ನಾಗವಾರದ ಬಳಿ ಮೆಟ್ರೋ ಪಿಲ್ಲರ್‍ನ ಸರಳುಗಳು ಏಕಾಏಕಿ ಇವರ ಮೇಲೆ ಉರುಳಿ ಬಿದ್ದ ಪರಿಣಾಮ ನಾಲ್ವರು ಗಾಯಗೊಂಡರು.

ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿ ನಾಲ್ವರನ್ನು ಸಮೀಪದ ಆಲ್ಟಿಯಸ್ ಆಸ್ಪತ್ರೆಗೆ ದಾಖಲಿಸಿದರು. ಗಂಭೀರವಾಗಿ ಗಾಯಗೊಂಡಿದ್ದ ತಾಯಿ-ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮತ್ತೊಂದು ಮಗು ಹಾಗೂ ಪತಿ ಲೋಹಿತ್ ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಮೆಟ್ರೋ ಸಿಬ್ಬಂದಿಗಳು, ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ದೌಡಾಯಿಸಿ ಪರಿಶೀಲಿಸಿದರು.

ಪ್ರಸ್ತುತ ಗೋವಿಂದರಾಜಪುರ ಪೊಲೀಸರು ನಮ್ಮ ಮೆಟ್ರೋದ ಎಂಜಿನಿಯರ್ ಕಾಮಗಾರಿ ನಡೆಸುತ್ತಿದ್ದ ಸಂಸ್ಥೆ ಹಾಗೂ ಕಾರ್ಮಿಕರ ಉಸ್ತುವಾರಿ ವಹಿಸಿಕೊಂಡಿದ್ದವರು ಸೇರಿದಂತೆ ಹಲವರು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Leave a Reply