ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಂದ ಪಿಹೆಚ್‌ಡಿ ಫೆಲೋಶಿಪ್‌ಗೆ ಅರ್ಜಿ ಆಹ್ವಾನ

2 months ago

ಶಿವಮೊಗ್ಗ: 2026-27ನೇ ಸಾಲಿಗೆ ವಿಶ್ವವಿದ್ಯಾಲಯಗಳಲ್ಲಿ ಪಿಹೆಚ್‌ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಂದ ಫೆಲೋಶಿಪ್ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯ ಸರ್ಕಾರದ ಅಲ್ಪಸಂಖ್ಯಾತ ಕಲ್ಯಾಣ ನಿರ್ದೇಶನಾಲಯದ ಸೂಚನೆಯಂತೆ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಪಾರ್ಸಿ, ಬೌದ್ಧ ಹಾಗೂ ಸಿಖ್ ಸಮುದಾಯಕ್ಕೆ ಸೇರಿದ ಅರ್ಹ ಪೂರ್ಣಕಾಲಿಕ ಪಿಹೆಚ್‌ಡಿ ಸಂಶೋಧನಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಆಸಕ್ತ ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್ https://sevasindhu.karnataka.gov.in/…/DepartmentServices ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿದ್ದು, ಆನ್‌ಲೈನ್ ಅರ್ಜಿ ಪ್ರತಿ ಹಾಗೂ ಅಗತ್ಯ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಶಿವಮೊಗ್ಗದ ದುರ್ಗಿಗುಡಿ, 5ನೇ ಪ್ಯಾರಲಲ್ ರಸ್ತೆಯ ಸತ್ಯಶ್ರೀ ಆರ್ಕೇಡ್ 1ನೇ ಮಹಡಿಯಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕಚೇರಿಗೆ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನಾಂಕವಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು ಹಾಗೂ ಸರ್ಕಾರದಿಂದ ಶಾಸನಬದ್ಧ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿರಬೇಕು. ಅಭ್ಯರ್ಥಿಯ ಗರಿಷ್ಠ ವಯೋಮಿತಿ 35 ವರ್ಷ ಮೀರಬಾರದು ಹಾಗೂ ಪೋಷಕರ ಅಥವಾ ಪಾಲಕರ ವಾರ್ಷಿಕ ಆದಾಯ ರೂ. 8.00 ಲಕ್ಷಗಳ ಮಿತಿಯೊಳಗಿರಬೇಕು. ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಅಭ್ಯರ್ಥಿಗಳು ಈ ಫೆಲೋಶಿಪ್‌ಗೆ ಅರ್ಹರಿರುವುದಿಲ್ಲ. ಜೊತೆಗೆ ಯೋಜನೆಯ ಧನಸಹಾಯ ಪಡೆಯಲು ಅಭ್ಯರ್ಥಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಹಾಗೂ ಎನ್ ಪಿ ಸಿ ಐ ಮ್ಯಾಪಿಂಗ್ ಸಕ್ರಿಯಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಯೋಜನೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ದೂರವಾಣಿ ಸಂಖ್ಯೆ 08182-220206 ಅನ್ನು ಸಂಪರ್ಕಿಸಬಹುದು.

Leave a Reply