ಮಕ್ಕಳು ಕೇವಲ ಮೊಬೈಲ್‍ಗಳಲ್ಲಿನ ತಮ್ಮ ಸಮಯ ವ್ಯರ್ಥ ಮಾಡುತ್ತಿದ್ದಾರೆ

1 year ago

ರಂಗಭೂಮಿ ಮುಂದಿನ ಪೀಳಿಗೆಗೆ ವಿಸ್ತರಿಸಲಿ: ಡಾ.ಡಿ.ಎಚ್ ಹೂಗಾರ

ಧಾರವಾಡ: ಇಂದಿನ ಆಧುನಿಕತೆಯ ಭರಾಟೆಯಲ್ಲಿ ಮೊಬೈಲ್‍ಗಳಿಗೆ ಸೀಮಿತವಾಗಿರುವ ಮಕ್ಕಳಿಗೆ ಭಾರತೀಯ ಕಲೆ, ಸಂಸ್ಕೃತಿ ಹಾಗೂ ಪರಂಪರೆಗಳ ಕುರಿತು ಅರಿವು ಮೂಡಿಸುವ ಕಾರ್ಯವನ್ನು ರಂಗಾಯಣ ಮಾಡುವ ಮೂಲಕ ಮುಂದಿನ ಪೀಳಿಗೆಗೂ ರಂಗಭೂಮಿ ಚಟುವಟಿಕೆಗಳನ್ನು ವಿಸ್ತರಿಸಬೇಕು ಎಂದು ಧಾರವಾಡ ತಹಶೀಲ್ದಾರ್ ಡಾ.ಡಿ.ಎಚ್ ಹೂಗಾರ ಹೇಳಿದರು.

ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ “ರಾಷ್ಟ್ರೀಯ ಐಕ್ಯತಾ ಸಪ್ತಾಹ-2024” ಸಾಂಸ್ಕೃತಿಕ ಏಕತಾ ದಿನದ ಅಂಗವಾಗಿ ರಂಗಾಯಣ ಧಾರವಾಡ ಆಯೋಜಿಸಿದ್ದ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.

ಮಕ್ಕಳು ಕೇವಲ ಮೊಬೈಲ್‍ಗಳಲ್ಲಿನ ರೀಲ್ಸ್ ಹಾಗೂ ಗೇಮ್‍ಗಳಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಅಂತಹ ಮಕ್ಕಳಿಗೆ ನಾಟಕಗಳನ್ನು ತೋರಿಸುವುದರ ಮೂಲಕ ಅವರಲ್ಲಿರುವ ಕಲೆಯನ್ನು ಗುರುತಿಸುವ ಕಾರ್ಯವನ್ನು ಮಾಡಬೇಕು ಎಂದು ಕರೆ ನೀಡಿದರು.

ಜನರಿಗೆ ಸಾಮಾಜಿಕ, ರಾಜಕೀಯ ಸೇರಿದಂತೆ ಪ್ರಚಲಿತ ವಿಷಯಗಳ ಕುರಿತು ಅರಿವನ್ನು ಮೂಡಿಸುವ ಉತ್ತಮ ಸಂದೇಶಗಳನ್ನು ಹೊಂದಿರುವ ನಾಟಕಗಳನ್ನು ರಂಗಾಯಣವು ಯಶಸ್ವಿಯಾಗಿ ಮಾಡುತ್ತಿದೆ. ಪ್ರಚಾರ ಕಡಿಮೆಯಿದ್ದರು ಸಹ ರಂಗಾಯಣಗಳು ಸರ್ಕಾರದ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದರ ಮೂಲಕ ರಂಗಭೂಮಿಯನ್ನು ಬೆಳಸಿಕೊಂಡು ಬರುತ್ತಿದೆ ಎಂದರು.

ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಹಿರಿಯ ರಂಗಭೂಮಿ ಕಲಾವಿದ ಸದಾಶಿವ ಜನಗೌಡರ ಉಪಸ್ಥಿತರಿದ್ದರು.

ರಂಗಾಯಣದ ಆಡಳಿತಾಧಿಕಾರಿಗಳಾದ ಶಶಿಕಲಾ ಹುಡೇದ ಅವರು ಸ್ವಾಗತಿಸಿದರು. ಸ್ಮಿತಾ ಅಂಗಡಿ ನಿರೂಪಿಸಿದರು. ನಂತರ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾಣೇಹಳ್ಳಿ ಇವರು ರಚಿಸಿ, ಜಗದೀಶ ಆರ್ ಜಾಣಿ ಸಂಗೀತ, ವಿನ್ಯಾಸ, ನಿರ್ದೇಶಿಸಿ, ರಾಮಚಂದ್ರ ಶೇರಿಕಾರ ಪರಿಕರ ಮಾಡಿರುವ ಮೋಳಿಗೆ ಮಾರಯ್ಯ ನಾಟಕವನ್ನು ಸಿರಿಗೇರಿ ಧಾತ್ರಿ ರಂಗಸಂಸ್ಥೆ(ರಿ) ತಂಡ ಪ್ರಸ್ತುತಪಡಿಸಿದರು.

Leave a Reply