ಚಿತ್ರದುರ್ಗ: ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಮತ್ತು ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಕೇರಿ ಅವರನ್ನು ಭೇಟಿ ಮಾಡಿ ಕತ್ತೆಹೊಳೆ ಅರಣ್ಯ ಭೂಮಿಯಲ್ಲಿ ಜೀವನ ಕಂಡುಕೊಂಡಿರುವ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬೇಡಿ ಎಂದು ಮನವಿ ಮಾಡಿಕೊಳ್ಳಲಾಯಿತು.
ಚಿತ್ರದುರ್ಗ ಜಿಲ್ಲೆಯಲ್ಲಿರುವ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಜಾತಿಯ ಜನ ಸೇರಿ ಬುಡಕಟ್ಟುಗಳು ಹೆಚ್ಚಾಗಿ ವಾಸವಾಗಿದ್ದಾರೆ. ತಲಾತಲಾಂತರಗಳಿಂದ ಅರಣ್ಯ ಹಾಗೂ ಬಗರ್ ಹುಕುಂ ಸಾಗುವಳಿ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬರಲಾಗಿದ್ದು, ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಸಾವಿರಾರು ಜನರಿಗೆ ಭೂಮಿ ಸಿಗದಂತಹ ವಾತಾವರಣ ನಿರ್ಮಾಣವಾಗಿದೆ. ಇದನ್ನು ಸರಿಪಡಿಸುವಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು.
ಹಿರಿಯೂರು ತಾಲ್ಲೂಕು ಕತ್ತೆಹೊಳೆ, ಚಳ್ಳಕೆರೆ, ಹೊಳಲ್ಕೆರೆ ತಾಲ್ಲೂಕಿನ ಬಗರ್ ಹುಕುಂ ಸಾಗುವಳಿದಾರರು ಹಕ್ಕು ಪತ್ರಕ್ಕಾಗಿ ಹಲವಾರು ವರ್ಷಗಳಿಂದ ಹೋರಾಟ ಮಾಡಿದ್ದಾರೆ. ಜಿಲ್ಲಾಡಾಳಿತದ ಕಡೆಯಿಂದ ಇದುವರೆಗೆ ಸ್ಪಂದನೆ ಸಿಗಲಿಲ್ಲ ಎಂದು ಹೋರಾಟಗಾರರು ಅರೋಪಿಸಿದರು.
ರಾಜ್ಯ ಸರ್ಕಾರ ಭೂ ರಹಿತರಿಗೆ ಭೂಮಿ ಹಕ್ಕು ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಾಖೀತು ಮಾಡಿದ್ದು, ಜನರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಹಕ್ಕು ಪತ್ರ ವಿತರಿಸಬೇಕೆಂದು ಡಿ.ಸಿಗೆ ಮನವಿ ಮಾಡಿದರು.
ಈ ವೇಳೆ ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ರಾಜ್ಯ ಸಂಚಾಲಕ ಕೆ.ಬಿ.ರೂಪನಾಯ್ಕ ಮಾತನಾಡಿ, ಕಳೆದ ಇಪ್ಪತ್ತು ಹೆಚ್ಚು ವರ್ಷಗಳಿಂದ ಭೂಮಿಗಾಗಿ ಹೋರಾಟ ಮಾಡಲಾಗಿದ್ದು ಸಾಗುವಳಿ ಪತ್ರ ನೀಡುವ ಹೊಣೆಗಾರಿಕೆ ಜಿಲ್ಲಾಡಾಳಿತದಾಗಿದೆ ಎಂದರು.
ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆಯ ಅಧ್ಯಕ್ಷ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ, ಸಾಗುವಳಿ ಭೂಮಿಯ ಹಕ್ಕು ಪತ್ರ ಪಡೆಯುವುದು ಸಾಗುವಳಿದಾರ ಹೊಣೆಗಾರಿಕೆ. ಜಿಲ್ಲಾಡಳಿತ ತ್ವರಿತವಾಗಿ ಹಕ್ಕು ಪತ್ರಗಳನ್ನು ನೀಡಬೇಕೆಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಕರ್ನಾಟಕ ಭೂ ಹಕ್ಕುದಾರ ವೇದಿಕೆಯ ತಾಲ್ಲೂಕು ಅಧ್ಯಕ್ಷ ಜಯಣ್ಣ, ಉಪಾಧ್ಯಕ್ಷೆ ಶಶಿಕಲಾ ಹನುಮಂತಪ್ಪ, ಮೂರ್ತಿನಾಯ್ಕ, ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿರ್ಮೂಲನ ವೇದಿಕೆ ಅಧ್ಯಕ್ಷ ಉಮೇಶ್ ವಿವಿಸಾಗರ್ ಮೊದಲದವರು ಹಾಜರಿದ್ದರು.




