ಮಾಹಿತಿ ತಂತ್ರಜ್ಞಾನ – ಬಂಡವಾಳ ಹೂಡಿಕೆಯಲ್ಲೂ ಕರ್ನಾಟಕ ಮುಂಚೂಣಿ: ಸಿದ್ದರಾಮಯ್ಯ

2 years ago

#Karnataka #informationtechnology #capital #investment #Siddaramaiah

ಬೆಂಗಳೂರು: ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸೇರಿದಂತೆ ತಾಂತ್ರಿಕ ವಲಯದಲ್ಲಿ ಜಾಗತಿಕ ಆಶೋತ್ತರಗಳನ್ನು ತಲುಪಲು ಪೂರಕ ವಾತಾವರಣ ನಿರ್ಮಾಣ, ವೇಗ ವರ್ಧಕ ಸಂಶೋಧನೆಗಳು, ನವೋದ್ಯಮಗಳಿಗೆ ಬೆಂಬಲ, ಪ್ರತಿಭೆಗಳಿಗೆ ಪ್ರೋತ್ಸಾಹ ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು ಐ.ಟಿ.ಮೇಳ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 5500ಕ್ಕೂ ಹೆಚ್ಚು ಐಟಿ ಕಂಪನಿಗಳು ಬಂದಿವೆ. 750ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳಿವೆ. ದೇಶದ ರಫ್ತು ವಹಿವಾಟಿನಲ್ಲಿ 85 ಬಿಲಿಯನ್ ಡಾಲರ್ ಕೊಡುಗೆಯನ್ನು ರಾಜ್ಯ ನೀಡುತ್ತಿದೆ ಎಂದರು.

ವಿಶ್ವದ ಗಂಭೀರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಂತಹ ಅನ್ವೇಷಣೆಗಳಿಗೆ, ಹೊಸ ಆಲೋಚನೆಗಳು ಮತ್ತು ಆಶೋತ್ತರಗಳಿಗೆ ಬೆಂಗಳೂರು ಮುಂದಾಳಾಗಿರುತ್ತದೆ. ಜಾಗತಿಕ ನವೋದ್ಯಮ ಪೂರಕ ಪರಿಸರದ ಸೂಚ್ಯಂಕದಲ್ಲಿ 8ನೇ ಸ್ಥಾನದಲ್ಲಿದೆ ಎಂದರು.

ಮಾಹಿತಿ ತಂತ್ರಜ್ಞಾನದಲ್ಲಷ್ಟೇ ಅಲ್ಲದೆ ಬಂಡವಾಳ ಹೂಡಿಕೆಯಲ್ಲೂ ಕರ್ನಾಟಕ ಮುಂಚೂಣಿಯಲ್ಲಿದೆ. ಕಳೆದ ಮೂರು ವರ್ಷಗಳಿಂದ ನೀತಿ ಆಯೋಗ ಸಿದ್ದಪಡಿಸುತ್ತಿರುವ ಸೂಚ್ಯಂಕದಲ್ಲಿ ನಿರಂತರವಾಗಿ ಮೇಲ್ಪಂಕ್ತಿಯನ್ನು ಕಾಯ್ದುಕೊಂಡು ಬಂಡವಾಳ ಹೂಡಿಕೆ, ಪ್ರತಿಭೆ ಮತ್ತು ಅವಕಾಶಗಳು ಕೊನೆಯ ಭಾಗದವರೆಗೂ ಉತ್ತಮ ಸೌಲಭ್ಯಗಳನ್ನು ತಲುಪಿಸುವುದು ಹಾಗೂ ಸಂಶೋಧನಾ ಆಧಾರಿತ ವ್ಯಾಪಾರೋದ್ಯಮಗಳಿಗೆ ಅನಿಯಮಿತವಾದಂತಹ ಬೆಂಬಲ ನೀಡಲಾಗುತ್ತಿದೆ ಎಂದರು.

ಏಕಗವಾಕ್ಷಿ ಅನುಮೋದನೆ, ಕೇಂದ್ರಿತ ತಪಾಸಣಾ ವ್ಯವಸ್ಥೆ, ಭೂ ಮಂಜೂರಾತಿ ವ್ಯವಸ್ಥೆ ಸೇರಿದಂತೆ ಹಲವು ಕೈಗಾರಿಕಾಸ್ನೇಹಿ ಕ್ರಮಗಳು ಚಾಲ್ತಿಯಲ್ಲಿವೆ. 1997ರಲ್ಲೇ ಮೊದಲ ಬಾರಿಗೆ ಮಾಹಿತಿ ತಂತ್ರಜ್ಞಾನ ನೀತಿಯನ್ನು ರೂಪಿಸಲಾಗಿತ್ತು. ಮಾಹಿತಿ ತಂತ್ರಜ್ಞಾನ ಕ್ಷೇತ್ರ ಇಂದು ಜಿಡಿಪಿಯಲ್ಲಿ ಶೇ.25ರಷ್ಟು ಪಾಲು ಹೊಂದಿದೆ. ಜೈವಿಕ ತಂತ್ರಜ್ಞಾನಕ್ಕೂ 2001ರಲ್ಲೇ ನೀತಿ ರೂಪಿಸಲಾಗಿತ್ತು. 2015ರಲ್ಲಿ ನವೋದ್ಯಮ ನೀತಿ ರಚಿಸುವ ಮೂಲಕ ದೇಶದ ಎಲ್ಲಾ ರಾಜ್ಯಗಳಿಗೂ ಮಾದರಿಯಾಗಿದೆ ಎಂದರು.

ಅನಿಮೇಷನ್, ವಿಷ್ಯುಲ್ ಎಫೆಕ್ಟ್, ಗೇಮಿಂಗ್, ಕಾಮಿಕ್ಸ್ಗಳಿಗೆ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ನೀತಿಯೊಂದನ್ನು ಕೂಡ ರೂಪಿಸಲಾಗಿದೆ. ಉದ್ಯಮ, ಕೈಗಾರಿಕೆ ಹಾಗೂ ಶಿಕ್ಷಣ ಸಂಸ್ಥೆಗಳ ನಡುವೆ ಪರಸ್ಪರ ಸಹಯೋಗದ ಮೂಲಕ ಮಾನವ ಸಂಪನ್ಮೂಲ ಅಭಿವೃದ್ಧಿ, ಸಂಶೋಧನೆಗಳಿಗೆ ನೆರವು ನೀಡಲಾಗುತ್ತಿದೆ ಎಂದರು.

ಹಲವಾರು ಸವಾಲುಗಳಿಗೆ ಡಿಜಿಟಿಲ್ ಅಭಿಯಾನ ಪರಿಹಾರ ಒದಗಿಸಲಿದೆ. ಪ್ರತಿಯೊಬ್ಬರಿಗೂ ತಂತ್ರಜ್ಞಾನದ ಸೌಲಭ್ಯ ಕಲ್ಪಿಸುವುದು ನಮ್ಮ ಗುರಿ. ದತ್ತಾಂಶ ಮತ್ತು ವಿಶ್ಲೇಷಣೆಯ ಪ್ರಯೋಜನಗಳನ್ನು ಆಡಳಿತಾತ್ಮವಾಗಿ ಬಳಸಿಕೊಳ್ಳುವುದು, ಬೆಂಗಳೂರು ಹೊರತಾಗಿ ಇತರೆ ನಗರಗಳ ಅಭಿವೃದ್ಧಿಗಳಿಗೆ ಆದ್ಯತೆ ನೀಡುವುದು ನಮ್ಮಗ ಗುರಿಯಾಗಿದೆ ಎಂದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಿಂದ 12 ಲಕ್ಷ ವೃತ್ತಿಪರ ಉದ್ಯೋಗ ಅವಕಾಶಗಳು ದೊರೆತಿವೆ. ಪರೋಕ್ಷವಾಗಿ 31 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ದೇಶದ ಸಾಫ್ಟ್ ವೇರ್ ರಫ್ತಿನಲ್ಲಿ ಶೇ.40ರಷ್ಟು ಪಾಲು ಹೊಂದಿವೆ. ಜಾಗತಿಕ ಮಾಹಿತಿ ತಂತ್ರಜ್ಞಾನ ಕೇಂದ್ರ ಸ್ಥಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಬೆಂಗಳೂರು ದೇಶದ ಸಿಲಿಕಾನ್ ವ್ಯಾಲಿ ಎನಿಸಿಕೊಂಡಿದೆ. ಜಾಗತಿಕವಾಗಿ ತಂತ್ರಜ್ಞಾನ ಮತ್ತು ಸಂಶೋಧನೆಗಳಲ್ಲಿ ಆದ್ಯ ಸ್ಥಾನ ಪಡೆದಿದೆ ಎಂದರು.

Leave a Reply