ತಂತ್ರಜ್ಞಾನ ರೈತರನ್ನೂ ಒಳಗೊಂಡು ಎಲ್ಲರನ್ನೂ ಸಬಲೀಕರಣಗೊಳಿಸುತ್ತದೆ

2 years ago

#Technology #empowers #everyone #including #farmers #Bangalore #Teck #Mela

ಬೆಂಗಳೂರು: ಕೃಷಿಯಲ್ಲೂ ಆಧುನಿಕತೆ ಮೈಗೂಡಿಸಿಕೊಂಡು, ಐಒಟಿ, ಎಐ ಬಳಸಿದರೆ ನಿಖರ ಗೊಬ್ಬರ ಬಳಕೆ, ನೀರಿನ ಸಮರ್ಪಕ ಬಳಕೆಯ ಮೂಲಕ ಅತಿಹೆಚ್ಚಿನ ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯ ಎಂದು ಫಾರ್ಮ್ ಆಂಡ್ ಫೀಲ್ಡ್, ಕ್ರಾಪ್ ಆಂಡ್ ಡಿಜಿಟಲ್ ಸಲ್ಯುಷನ್ಸ್ ಮುಖ್ಯಸ್ಥ ಸಾಗರ್ ಹೇಳಿದರು.

“ಬೆಂಗಳೂರು ಟೆಕ್ ಮೇಳ- 2023″ದಲ್ಲಿ “ಸುಸ್ಥಿರ ಭವಿಷ್ಯಕ್ಕಾಗಿ ಟೆಕ್ ಬೆಂಬಲ”ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಎಂದಾಕ್ಷಣ ಕಾರ್ಪೊರೇಟ್ ಕಪಿಮುಷ್ಟಿಯೊಳಗೆ ರೈತರು ಸಿಲುಕಿದಂತಾಗುವುದಿಲ್ಲ. ಸಣ್ಣ ರೈತರಿಗೂ ಇದರ ಅಳವಡಿಕೆ ಸಾಧ್ಯ. ತಂತ್ರಜ್ಞಾನ ಎಲ್ಲರನ್ನೂ ಸಬಲೀಕರಣಗೊಳಿಸುತ್ತದೆ. ಬೀಜ ಬಿತ್ತನೆಗೆ ಮುನ್ನ ಅದರ ಗುಣಮಟ್ಟ ನಿರ್ಣಯಿಸಬೇಕು ಎಂದು ಕರೆ ನೀಡಿದರು.

ಬೀಜ ಹಾಗೂ ಮಣ್ಣಿನ ಹೊಂದಾಣಿಕೆಯ ಪರೀಕ್ಷೆಯಾಗಬೇಕು. ಬೆಳೆಗೆ ಅಗತ್ಯವಾಗಿರುವ ನಿಖರ ಪೋಷಕಾಂಶ ಹಾಗೂ ನೀರಿನ ಪ್ರಮಾಣದ ಲೆಕ್ಕಾಚಾರ ನಡೆಯಬೇಕು. ಕೊನೆಗೆ ಇಳುವರಿಯ ಗುಣಮಟ್ಟವನ್ನೂ ಅಳೆಯುವಂತಾಗಬೇಕು. ಇವೆಲ್ಲವೂ ಭಾರತದಲ್ಲಿ ಸಾಧ್ಯವಾಗಿ ಕೃಷಿಯ ಗುಣಮಟ್ಟ ಹೆಚ್ಚುವ ದಿನ ದೂರವಿಲ್ಲ ಎಂದರು.

ನಮ್ಮ ದೇಶದಲ್ಲಿ ಕೈಗಾರಿಕೆ ಹಾಗೂ ನಗರ ಬಳಕೆಗೆ ವಿನಿಯೋಗವಾಗುತ್ತಿರುವುದು ಶೇ.20ರಷ್ಟು ಮಾತ್ರ. ಈ ನೀರಿನ ಪೋಲು, ತ್ಯಾಜ್ಯ ಸಂಸ್ಕರಣೆ ಕುರಿತು ತುಂಬಾ ಗಮನಹರಿಸಲಾಗುತ್ತಿದೆ. ಆದರೆ ಶೇ.80ರಷ್ಟು ನೀರು ಬಳಸುವ ಕೃಷಿಯ ಕುರಿತು ಚಿಂತನೆ ನಡೆದಿಲ್ಲ. ಕೃಷಿಯಲ್ಲಿ ಪ್ರಶಸ್ತ ನೀರಿನ ಬಳಕೆ ಹಾಗೂ ಕೃಷಿಗೆ ಉಪಯುಕ್ತವಾಗಿರುವ ನೈಟ್ರೋಜನ್ಯುಕ್ತ ತ್ಯಾಜ್ಯ ನೀರಿನ ಬಳಕೆ ಹೇಗೆ ಸಾಧ್ಯ ಎಂಬ ಕುರಿತು ನಾವು ಆಲೋಚಿಸಬೇಕಿದೆ ಎಂದರು.

ವೋಲಿಯಾ ವಾಟರ್ ಟೆಕ್ನಾಲಜೀಸ್ನ ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಒಷೇನಿಯಾದ ಪ್ರಾದೇಶಿಕ ಸಿಐಒ ಸಂತೋಷ್ ಸುಬ್ರಮಣಿಯನ್ ಮಾತನಾಡಿ, ನೀರಿನ ಮಿತ ಬಳಕೆಯಂತಹ ಜವಾಬ್ದಾರಿಯುತ ನಡವಳಿಕೆಗೆ ತಂತ್ರಜ್ಞಾನದ ಅಗತ್ಯವಿದೆ. ಶೇ.80ರಷ್ಟು ತ್ಯಾಜ್ಯ ನೀರು ಸಂಸ್ಕರಣೆಯಾಗದೆ ಜಲಮೂಲವನ್ನು ಸೇರುತ್ತಿದೆ. ನೀರಿನ ನಿರ್ವಹಣೆ ಹಾಗೂ ಮರುಬಳಕೆಗಾಗಿ ಡೇಟಾ ಸಂಗ್ರಹಣೆ ಆಗಬೇಕು. ಐಒಟಿ, ಡಿಜಿಟಲ್ ಟ್ವಿನ್ ಅನ್ನು ಜಲೋದ್ಯಮಕ್ಕೆ ಬಳಸಬಹುದಾಗಿದೆ ಎಂದರು.

ಜ್ಯೂರಿಚ್ ಯುನಿವರ್ಸಿಟಿಯ ಇನ್ಫರ್ಮ್ಯಾಟಿಕ್ಸ್ ವಿಭಾಗದ ಪ್ರೊ.ಕ್ಲಾಡಿಯಾ ಜೆ ಟೆಸ್ಸಾನ್ ಮಾತನಾಡಿ, ನಿತ್ಯಜೀವನದಲ್ಲಿ ತಂತ್ರಜ್ಞಾನದ ಅಳವಡಿಸುವ ಬಗ್ಗೆ ಎಲ್ಲರೂ ಒಟ್ಟಾಗಿ ಸಮಗ್ರ ಚಿಂತನೆ ನಡೆಸಬೇಕು. ಬ್ಲಾಕ್ಚೈನ್ ತಂತ್ರಜ್ಞಾನದ ಮೂಲಕ ಸುರಕ್ಷಿತ ಡೇಟಾ ಶೇಖರಣೆ ಮಾಡಬಹುದಾಗಿದೆ. ಬಳಿಕ ಅದರ ನಿರಂತರ ಮೇಲ್ವಿಚಾರಣೆಯನ್ನೂ ನಡೆಸಬೇಕು ಎಂದು ಹೇಳಿದರು.

ಇನ್ಫೋಸಿಸ್ನ ಕ್ಲೈಮೇಟ್ ಆಕ್ಷನ್ ಮುಖ್ಯಸ್ಥ ಗುರುಪ್ರಕಾಶ್ ಶಾಸ್ತ್ರಿ ಸಂವಾದ ನಡೆಸಿಕೊಟ್ಟರು.

Leave a Reply