ಬೆಳಗಾವಿ: ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ತೀವ್ರ ವಿರೋಧ ಹಾಗೂ ಗದ್ದಲದ ನಡುವೆಯೇ ವಿಧಾನ ಸಭೆಯಲ್ಲಿ ‘ಕರ್ನಾಟಕ ದ್ವೇಷಭಾಷಣ ಮತ್ತು ದ್ವೇಷಾಪರಾಧಗಳ ಪ್ರತಿಬಂಧಕ ಮಸೂದೆ-2025’ಕ್ಕೆ ಧ್ವನಿ ಮತದ ಅನುಮೋದನೆ ಸಿಕ್ಕಿದೆ.
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
- ದಶಕ ಮೀರಿದ ಕಾನೂನು ಹಾದಿ ಮತ್ತು ಉತ್ತರವಿಲ್ಲದ ಪ್ರಶ್ನೆಗಳು
- ಪರಿಸರವನ್ನೂ ಉಳಿಸಬೇಕು, ಮಲೆನಾಡಿನ ರೈತರ ಬದುಕನ್ನೂ ಉಳಿಸಬೇಕು: ಮಧು ಬಂಗಾರಪ್ಪ
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
ಅನುಮೋದನೆ ನೀಡುವಂತೆ ಕೋರಿ ಮಸೂದೆ ಮಂಡಿಸಿ ಮಾತನಾಡಿದ ಗೃಹ ಮಂತ್ರಿ ಡಾ. ಜಿ ಪರಮೇಶ್ವರ್ ಇಂಥ ಕಾನೂನಿನ ಅಗತ್ಯವನ್ನು ವಿವರಿಸಿದರು ಆದರೆ ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತು.
ಮಸೂದೆಗೆ ವಿರೋಧ ವ್ಯಕ್ತಪಡಿಸಿ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತನಾಡುತ್ತಿದ್ದಾಗ ಮಧ್ಯಪ್ರವೇಶಿಸಿದ ಸಚಿವ ಬೈರತಿ ಸುರೇಶ್, ‘ಕರಾವಳಿಗೆ ಬೆಂಕಿ ಹಚ್ಚಿದ್ದೀರ. ಇಲ್ಲಿಯೂ ಬೆಂಕಿ ಹಚ್ಚುತ್ತಿದ್ದೀರ’ ಎಂದು ಬಿಜೆಪಿ ಸದಸ್ಯರನ್ನು ಉದ್ದೇಶಿಸಿ ನೀಡಿದ ಹೇಳಿಕೆಯು ಗದ್ದಲಕ್ಕೆ ಕಾರಣವಾಯಿತು.
ಕರಾವಳಿ ಭಾಗದಿಂದ ಆರಿಸಿ ಬಂದ ಬಿಜೆಪಿ ಎಲ್ಲ ಸದಸ್ಯರು ಬೈರತಿ ಸುರೇಶ್ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಅವರು ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಮಧ್ಯೆ ಗದ್ದಲ ಉಂಟಾಗಿ ಕೋಲಾಹಲವೇ ಸೃಷ್ಟಿಯಾಯಿತು.
ಸಚಿವ ಬೈರತಿ ಸುರೇಶ್ ಹೇಳಿದ ಮಾತನ್ನು ಕಡತದಿಂದ ವಾಪಸ್ ತೆಗೆಯುತ್ತೇನೆ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಬಿಜೆಪಿ ಸದಸ್ಯರನ್ನು ಮನವೊಲಿಸಲು ಮುಂದಾದರು. ಆದರೆ, ತೀವ್ರ ಆಕ್ರೋಶಗೊಂಡ ಬಿಜೆಪಿಯ ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ರಾಜೇಶ್ ನಾಯಕ್, ಚನ್ನಬಸಪ್ಪ ಮುಂತಾದವರು ಸಭಾಧ್ಯಕ್ಷರ ಪೀಠದ ಮುಂದೆ ಬಂದು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದೇ ವೇಳೆ ಅಶೋಕ ಅವರು ಮಸೂದೆಯ ಪ್ರತಿಯನ್ನು ಹರಿದು, ಎಸೆದರು.
ಈ ಮಧ್ಯೆಯೇ ಸಚಿವ ಪರಮೇಶ್ವರ ಅವರು ಮಸೂದೆಗೆ ಸದನದ ಅನುಮೋದನೆ ನೀಡುವಂತೆ ಮನವಿ ಮಾಡಿದರು ನಂತರ ಸಭಾಧ್ಯಕ್ಷರು ಧ್ವನಿ ಮತದ ಮೂಲಕ ಮಸೂದೆಗೆ ಅನುಮೋದನೆ ದೊರಕಿದೆ ಎಂದು ಪ್ರಕಟಿಸಿದರು.



