ರಾಜ್ಯಪಾಲರು ದ್ವೇಷಭಾಷಣ ಪ್ರತಿಬಂಧಕ ಮಸೂದೆಗೆ ಸಹಿ ಹಾಕಬಾರದು: ಆರ್‌.ಅಶೋಕ

3 months ago

ಬೆಂಗಳೂರು: ದ್ವೇಷಭಾಷಣ ಪ್ರತಿಬಂಧಕ ಮಸೂದೆಗೆ ಸಹಿ ಹಾಕಬಾರದು, ಕೋಗಿಲು ಕ್ರಾಸ್‌ನಲ್ಲಿ ಒತ್ತುವರಿದಾರರಿಗೆ ಹಾಗೂ ಬಾಂಗ್ಲಾ ಪ್ರಜೆಗಳಿಗೆ ಮನೆ ನೀಡದಂತೆ ಕ್ರಮ ವಹಿಸಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ರಾಜಭವನದಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದೆ ಜಂಗಲ್‌ ರಾಜ್‌ ಆಗಿರುವುದರ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಹಾಗೆಯೇ ಕರ್ನಾಟಕವನ್ನು ಗೂಂಡಾ ರಾಜ್ಯದಿಂದ ಕಾಪಾಡಿ ಎಂದು ಮನವಿ ಮಾಡಿದ್ದೇವೆ. ಮಸೂದೆ ರಚಿಸಲು ಮಾತ್ರ ಅಧಿವೇಶನವನ್ನು ಕರೆಯಬೇಕಿದೆ. ಆದರೆ ಕಾಂಗ್ರೆಸ್‌ ಸರ್ಕಾರ ದ್ವೇಷಭಾಷಣ ಪ್ರತಿಬಂಧಕ ಮಸೂದೆಯ ಬಗ್ಗೆ ಚರ್ಚೆಗೆ ಅವಕಾಶ ನೀಡಿಲ್ಲ ಎಂದರು.

ಕಣ್ಣು ಮಿಟುಕಿಸಿದರೆ, ಕೈ ತೋರಿಸಿದರೆ ಬಂಧನ ಮಾಡುವಂತಹ ಕಾನೂನು ತರಲಾಗಿದೆ. 1975 ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ತಂದ ತುರ್ತು ಪರಿಸ್ಥಿತಿಯಂತೆಯೇ, ಸಿಎಂ ಸಿದ್ದರಾಮಯ್ಯ ತುರ್ತು ಪರಿಸ್ಥಿತಿಯನ್ನು ಹೇರುತ್ತಿದ್ದಾರೆ. ಆದ್ದರಿಂದ ಇದಕ್ಕೆ ಸಹಿ ಹಾಕಬಾರದು ಎಂದು ಮನವಿ ಮಾಡಲಾಗಿದೆ ಎಂದರು. 

ಈ ಕಾನೂನು ಜಾರಿಯಾದರೆ ಪ್ರತಿಪಕ್ಷಗಳ ಶಾಸಕರನ್ನು ಪೊಲೀಸರು ಸುಲಭವಾಗಿ ಬಂಧಿಸುತ್ತಾರೆ. ಸರ್ಕಾರದ ಸೂಚನೆ ಮೇರೆಗೆ ಯಾರ ಮೇಲೆ ಬೇಕಾದರೂ ಪೊಲೀಸರು ಪ್ರಕರಣ ದಾಖಲಿಸಬಹುದು. ಇದು ಕಾಂಗ್ರೆಸ್‌ ಕುತಂತ್ರದ ಮಸೂದೆ ಹಾಗೂ ವಾಕ್‌ ಸ್ವಾತಂತ್ರ್ಯ ಕಸಿಯುವ ಮಸೂದೆ ಎಂದು ಮನವರಿಕೆ ಮಾಡಲಾಗಿದೆ. ಬಳ್ಳಾರಿಯಲ್ಲಿ ಕಾಂಗ್ರೆಸ್‌ ಪಕ್ಷದವರಿಂದ ಕಾರ್ಯಕರ್ತನ ಕೊಲೆಯಾಗಿದೆ. ಇದರ ಹಿಂದೆ ಇದ್ದವರನ್ನು ಬಂಧಿಸದೆ ಜನಾರ್ದನ ರೆಡ್ಡಿಯವರ ಮೇಲೆ ಆರೋಪ ಹೊರಿಸಲಾಗಿದೆ ಎಂದರು.

ಸತ್ಯ ಸಂಗತಿ ಹೊರ ಬರಲು ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ರಾಜ್ಯಪಾಲರಿಗೆ ಕೋರಲಾಗಿದೆ. ಬಳ್ಳಾರಿಯಲ್ಲಿ ಜನವರಿ 17 ರಂದು ಸಮಾವೇಶ ನಡೆಸಿ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಖಂಡಿಸಲಿದ್ದೇವೆ ಎಂದು ತಿಳಿಸಿದರು.

ಕೋಗಿಲು ಅಕ್ರಮ ನಿವಾಸಿಗಳ ಕುರಿತು ಶಾಸಕ ವಿಶ್ವನಾಥ್‌ ಅವರ ನೇತೃತ್ವದ ಸತ್ಯಶೋಧನಾ ಸಮಿತಿ ವರದಿ ನೀಡಿದೆ. 36 ಲಕ್ಷ ಜನ ಲಕ್ಷಾಂತರ ರೂಪಾಯಿ ಪಾವತಿ ಮಾಡಿ ಮನೆ ಪಡೆಯಲು ಕಾಯುತ್ತಿದ್ದಾರೆ. ಕೇರಳದಲ್ಲಿ ಕೋಗಿಲೆ ಕೂಗಿದೆ ಎಂದಾಕ್ಷಣ, ರಾಜ್ಯದ ಕಾಗೆಗಳು ಬಾಯಿ ಮುಚ್ಚಿಕೊಂಡಿವೆ. ಕೇರಳ ಸರ್ಕಾರ ಕರ್ನಾಟಕವನ್ನು ಆಳುತ್ತಿದೆಯೇ? ವೇಣುಗೋಪಾಲ್‌ ಹಾಗೂ ಅಲ್ಲಿನ ಸಿಎಂ ಮಾತನ್ನು ಇಲ್ಲಿನ ಸಿಎಂ ಕೇಳುತ್ತಿದ್ದಾರಾ? ಎಂದು ಪ್ರಶ್ನಿಸಿದರು.

ಇಲ್ಲಿನ ಸರ್ಕಾರ ಕೇರಳದ ಕೈಗೊಂಬೆಯಾಗಬಾರದು. ಕೇರಳದಲ್ಲಿ ಮಾತೃಭಾಷಾ ನಿಯಮವನ್ನು ಉಲ್ಲಂಘನೆ ಮಾಡಿದ್ದರೂ ಅದನ್ನು ಸಿಎಂ ಪ್ರಶ್ನೆ ಮಾಡಿಲ್ಲ. ಕಾಸರಗೋಡಿನ ಕನ್ನಡಿಗರ ಮೇಲೆ ಕೇರಳ ಸರ್ಕಾರ ದೌರ್ಜನ್ಯ ಮಾಡುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಒಂದು ಪತ್ರ ಬರೆದು ಸುಮ್ಮನಾಗಿದ್ದಾರೆ ಎಂದರು.

ಆದಷ್ಟು ಬೇಗ ಜಿಬಿಎ ಚುನಾವಣೆ ನಡೆಯಬೇಕು. ಬೆಂಗಳೂರಿನಲ್ಲಿ ಬಿದ್ದಿರುವ ಗುಂಡಿಗಳು, ಕಸದ ರಾಶಿ, ಕಾನೂನು ಸುವ್ಯವಸ್ಥೆ ಹಾಳಾಗಿರುವುದನ್ನು ನೋಡಿದರೆ ಕಾಂಗ್ರೆಸ್‌ ಚುನಾವಣೆಯಲ್ಲಿ ನೆಲ ಕಚ್ಚುವುದು ಖಚಿತವಾಗಿದೆ. ಮೈತ್ರಿಗೆ ಸಂಬಂಧಿಸಿದಂತೆ ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದರು.

Leave a Reply