ಕನ್ನಡಿಗರು ಹಿಂದಿನ ಘಟನೆಗಳನ್ನು ಮರೆಯುವಷ್ಟು ಮೂರ್ಖರಲ್ಲ

3 years ago

ಪ್ರಾಮಾಣಿಕತೆಯ ಚಕ್ರವರ್ತಿಗಳಂತೆ ಮಾತನಾಡಬೇಡಿ

ಚುನಾವಣೆಗಳು ರಾಜ್ಯದಲ್ಲಿ ಸಮೀಪಿಸುತ್ತಿದ್ದಂತೆ ಬಿ.ಜೆ.ಪಿ.ಯ ನಾಯಕರು ಪ್ರಾಮಾಣಿಕತೆ, ಸಂಸ್ಕೃತಿ, ಸಂಸ್ಕಾರ ಇಂತಹ ಮಾತುಗಳ ಬಗ್ಗೆ ಅಬ್ಬರದ ಧ್ವನಿಯಲ್ಲಿ ಆರ್ಭಟಿಸುತ್ತಿದ್ದಾರೆ. ಜನ ಹಿಂದಿನ ಘಟನೆಗಳನ್ನು ಮರೆಯುವಷ್ಟು ಮೂರ್ಖರಲ್ಲ.

2008 ರಿಂದ 2013ರ ಅವಧಿಯಲ್ಲಿ ಭ್ರಷ್ಟಾಚಾರದ ಪ್ರಕರಣಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯೇ ಸೆರೆಮನೆ ವಾಸವನ್ನು ಅನುಭವಿಸಿದ್ದು, ಹಲವಾರು ಮಂತ್ರಿಗಳು ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿದಿದ್ದು ಯಾರು ಮರೆತಿಲ್ಲ.

ಬಳ್ಳಾರಿಯ ಗಣಿಯ ಕಥೆ ಯಾರ ನೆನಪಿನಿಂದ ಮಾಸಿಲ್ಲ. ಇನ್ನು ಮಂತ್ರಿಗಳ ಅತ್ಯಾಚಾರದ ಪ್ರಕರಣಗಳು, ಅಸಭ್ಯ ನಡವಳಿಕೆಯ ಘಟನೆಗಳು ಹಸಿ ಹಸಿಯಾಗಿದೆ. ಇದರ ನಡುವೆಯೂ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಸರ್ಕಾರವನ್ನು ರಚಿಸುವ ಸಲುವಾಗಿ ಆಪರೇಷನ್ ಕಮಲದಂತಹ ಕೀಳು ಮಟ್ಟದ ರಾಜಕಾರಣಕ್ಕಾಗಿ ಶಾಸಕರ ಖರೀದಿಗೆ ಹಣವನ್ನು ಸುರಿದಿದ್ದು, ಬಾಂಬೆಯಲ್ಲಿ ಅವರನ್ನು ಇರಿಸಿ, ಅವರ ಬದುಕಿನೊಂದಿಗೆ ಆಟವಾಡಿದ್ದು, ಎಲ್ಲರಿಗೂ ನೆನಪಿದೆ.

ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಪ್ರಕರಣದಲ್ಲಿ ಆದಂತಹ ಘೋರ ಭ್ರಷ್ಟಾಚಾರ, ಡ್ರಗ್ಸ್ ಹಗರಣಗಳು, ಬಿಟ್ ಕಾಯಿನ್ ಪ್ರಕರಣಗಳು, ಸ್ಯಾಂಟ್ರೋ ರವಿಯ ಕಥೆ. ಇದಲ್ಲದೆ 40% ಕಮೀಷನಿನ ಕರಾಳ ಕಥೆಗಳು, ಗುತ್ತಿಗೆದಾರರ ಆರೋಪ, ಸ್ವ ಪಕ್ಷದ ಶಾಸಕರಿಂದ ಕೇಳಿಬಂದಂತಹ ಮಾತುಗಳು, ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣ, ಶಾಸಕರೊಬ್ಬರ ಪುತ್ರ ಲೋಕಾಯುಕ್ತರ ಬಲೆಗೆ ಬಿದ್ದು, ಹತ್ತಾರು ಕೋಟಿ ರೂಪಾಯಿಗಳನ್ನು ಕಮಿಷನ್ ರೂಪದಲ್ಲಿ ಸಂಗ್ರಹಿಸಿದ ನೋಟುಗಳ ಪ್ರದರ್ಶನ ಇವೆಲ್ಲವನ್ನೂ ಮರೆಮಾಚುತ್ತಾ ತಾವು ಪ್ರಾಮಾಣಿಕರು, ಸತ್ಯವಂತರು ಎಂದು ಹೇಳುವುದನ್ನು ಕೇಳಿದರೆ ನಗು ಬರುತ್ತದೆ.

ಚುನಾವಣಾ ಬಾಂಡ್‌ಗಳ ಮೂಲಕ ಕಳೆದ ಎಂಟು ವರ್ಷದ ಅವಧಿಯಲ್ಲಿ ಕಾರ್ಪೋರೇಟ್ ಸಂಸ್ಥೆಗಳಿಂದ ಸಾವಿರಾರು ಕೋಟಿ ರೂಪಾಯಿಗಳ ದೇಣಿಗೆಯನ್ನು ಪಡೆದು ಅವರಿಗಾಗಿ ಹತ್ತಾರು ಲಕ್ಷ ರೂಪಾಯಿಗಳ ಸಾಲವನ್ನು ಮನ್ನಾ ಮಾಡಿದ್ದು ಜನತೆಗೆ ತಿಳಿದಿದೆ.

ಅದಾನಿಯ ಷೇರುಗಳು ಮಾರುಕಟ್ಟೆಯಲ್ಲಿ ಪತನವಾಗಿ ದೇಶದ ಎಲ್.ಐ.ಸಿ. ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಲ್ಲಿ ಹೂಡಿರುವ ಬಂಡಾವಳದ ಕಥೆಯೂ ಜನರಿಗೆ ತಿಳಿದಿದೆ. ಇಂತಹ ವಿಚಾರಗಳ ಬಗ್ಗೆ ಒಮ್ಮೆಯೂ ಮಾತನಾಡುವುದಿಲ್ಲ, ಅತ್ಯಾಚಾರದ ಪ್ರಕರಣಗಳು ನಡೆದಾಗ ಮೌನವೇ ಇವರ ಉತ್ತರವಾಗಿರುತ್ತದೆ.

ಚುನಾವಣೆಯ ಸಮಯದಲ್ಲಿ ಉತ್ತರ ಭಾರತದ ನಾಯಕರು ಕರ್ನಾಟಕದ ನೆಲದಲ್ಲಿ ನಿಂತು ಅಬ್ಬರಿಸಿದರೆ ಅದನ್ನು ನಂಬಿ ಬೆಂಬಲಿಸುವಂತಹ ಮುಗ್ಧರು ಕನ್ನಡಿಗರಲ್ಲ. ಕನ್ನಡಿಗರಿಗೆ ನಮ್ಮ ಅವಶ್ಯಕತೆಗಳನ್ನು ಪೂರೈಸಬಲ್ಲ, ನಮ್ಮನ್ನು ನಾವೇ ನಿಯಂತ್ರಿಸಿಕೊಳ್ಳಬಲ್ಲಂತಹ ನಮ್ಮವರಿಂದಲೇ ಆಳಿಸಿಕೊಳ್ಳಬೇಕಾದ ಆಸೆ ಇರುವುದರಿಂದ ಉತ್ತರ ಭಾರತದ ನಾಯಕರುಗಳ ಅಬ್ಬರದ ಮಾತುಗಳು ಅವರ ಅಭಿಮಾನಿಗಳ ಮನಸ್ಸುಗಳನ್ನಷ್ಟೇ ಸಂತೋಷಗೊಳಿಸುತ್ತದೆ.

– ಕೆ.ಎಸ್‌. ನಾಗರಾಜ್, ಬೆಂಗಳೂರು

Leave a Reply