ಬೆಂಗಳೂರು: ರಾಜ್ಯದಲ್ಲಿನ ಎಲ್ಲಾ ಅಂಗಡಿ ವಾಣಿಜ್ಯ ಮುಂಗಟ್ಟು ಕಚೇರಿಗಳ ನಾಮಫಲಕದಲ್ಲಿ ಶೇಕಡ 60ರಷ್ಟು ಕನ್ನಡ ಕಡ್ಡಾಯ ಮಾಡಿರುವ ರಾಜ್ಯ ಸರ್ಕಾರ ಗಡಿ ಜಿಲ್ಲೆಗಳಲ್ಲಿ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾ ಆಡಳಿತಕ್ಕೆ ತಾಕಿತು ಮಾಡಿದೆ.
ಬೆಳಗಾವಿಯ ಖಾನಾಪುರ, ನಿಪ್ಪಾಣಿ ಮತ್ತು ಚಿಕ್ಕೋಡಿ ತಾಲೂಕುಗಳಲ್ಲಿ ಮರಾಠಿ ನಾಮ ಫಲಕಗಳು ಅತ್ಯಂತ ಹೆಚ್ಚಾಗಿದ್ದು ಅವುಗಳನ್ನೆಲ್ಲ ತೆರವುಗೊಳಿಸಿ ಶೇಕಡ 60ರಷ್ಟು ಕನ್ನಡ ಭಾಷೆ ಒಳಗೊಂಡ ನಾಮ ಫಲಕ ಹಾಕಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಕನ್ನಡ ನಾಮಫಲಕ ಅಳವಡಿಕೆ ಸಂಬಂಧ ಆಗಿರುವ ಪ್ರಗತಿಯನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳು ಪ್ರತಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಮಾರ್ಚ್ 12ರ ಒಳಗೆ ತಮಗೆ ವರದಿ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಕನ್ನಡ ನಾಮಫಲಕ ಅಳವಡಿಕೆ ಸಂಬಂಧ ಜಾರಿಗೊಳಿಸಿರುವ ಸಮಗ್ರ ಭಾಷಾ ಅಭಿವೃದ್ಧಿ ಕಾಯಿದೆ ಜಾರಿ ಕುರಿತಂತೆ ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಗಡಿ ಜಿಲ್ಲೆಗಳಾದ ಬೆಳಗಾವಿ, ಬಳ್ಳಾರಿ, ಕೋಲಾರ, ರಾಯಚೂರು, ಬೀದರ್, ಚಿಕ್ಕಬಳ್ಳಾಪುರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ನಾಮಫಲಕ ಅಳವಡಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ನೂತನ ಕಾಯ್ದೆ ಅನ್ವಯ ನಾಮಫಲಕ ಅಳವಡಿಸಲು ಮಾರ್ಚ್ 15 ರವರೆಗೆ ಗಡುವು ನೀಡಲಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಈ ಬಗ್ಗೆ ವಿಶೇಷ ಕ್ರಮ ಕೈಗೊಳ್ಳಬೇಕು. ಕನ್ನಡ ನಾಮಫಲಕ ಅಳವಡಿಸಲು ಜಾಗೃತಿ ಮೂಡಿಸಬೇಕು ಸರ್ಕಾರದ ಮನವಿಗೆ ಸ್ಪಂದಿಸದ ಅಂಗಡಿ ಮತ್ತು ವಾಣಿಜ್ಯ ಸಮುಚ್ಚಯಗಳ ವಿರುದ್ಧ ನೂತನ ಕಾಯಿದೆ ಅನ್ವಯ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.




