ಕಲ್ಯಾಣ ಕೆಡುವ ಹಾದಿ ಓದಲೇ ಬೇಕಾದ ಪುಸ್ತಕ. ವಿ ಬಾಲಸುಬ್ರಹ್ಮಣ್ಯಂ ಐಎಎಸ್ ಅಧಿಕಾರಿಯೊಬ್ಬರ ಪ್ರಾಮಾಣಿಕತೆ, ಕೆಲಸಗಾರಿಕೆ, ಕಾರ್ಯಸಾಧು ಎಲ್ಲವುಗಳನ್ನು ಹೂಬಾಹೂಬಗೊಳಿಸಿದ ಅಕ್ಷರಯಾನ. ಅದೆಷ್ಟು ಕುತೂಹಲಕಾರಿ ಮಾಹಿತಿಗಳನ್ನು ನೀಡಿದ್ದಾರೆಂದರೆ ಹಿಡಿದ ಪುಸ್ತಕ ಕೆಳಗಿಡದಂತೆ ಒಂದೆ ಪಟ್ಟಿಗೆ ಓದಿಸಿಕೊಂಡು ಹೋಗುತ್ತದೆ. ಅಧಿಕಾರಶಾಹಿಯ ದೌರ್ಬಲ್ಯ, ರಾಜಕಾರಣಿಗಳ ನೀಚತನ, ಭ್ರಷ್ಟತೆಯ ಪರಾಕಾಷ್ಠೆ, ಜನಸಾಮಾನ್ಯರ ಸಂಕಟ ಹೀಗೆ ಎಲ್ಲವುಗಳನ್ನು ಭಟ್ಟಿ ಇಳಿಸಿದ ಕಲೆ ನಿಜಕ್ಕೂ ಅದ್ಭುತ.
ಪ್ರಾಮಾಣಿಕ ಅಧಿಕಾರಿಯೊಬ್ಬ ಎಂಥಹ ಪರಿಸ್ಥಿತಿಯಲ್ಲಿಯೂ ಭ್ರಷ್ಟ ವ್ಯವಸ್ಥೆಯೊಂದಿಗೆ ಕೈ ಜೋಡಿಸಲು ಸಾಧ್ಯವಿಲ್ಲ ಎಂಬ ಸಂದೇಶವೊಂದು ಇಲ್ಲಿದೆ. ಪ್ರಾಮಾಣಿಕತೆಯೊಂದಿಗೆ ಪ್ರಖರ ಜಾಣತನ, ಮಾಡುವ ಕೆಲಸದ ಮೇಲಿನ ಶ್ರದ್ಧೆ, ಆಳವಾದ ಓದಿನ ಬಲ, ಭೌತಿಕ ದಾಹಗಳಿಲ್ಲದ ನಿಸ್ಪೃಹ ವ್ಯಕ್ತಿತ್ವ ಅವರನ್ನು ಧೈರ್ಯಶಾಲಿ ಅಧಿಕಾರಿಯಾಗಿಸಿದ್ದು ಪ್ರತಿ ಅಕ್ಷರಗಳಲ್ಲಿಯೂ ಮಿಡಿಯುತ್ತಿದೆ.
ಹಾಗೆ ನೋಡಿದರೆ ಇದು ಆತ್ಮಚರಿತ್ರೆಗಿಂತ ಹೆಚ್ಚಾಗಿ ಕರ್ನಾಟಕದ ಕಳೆದ ದಶಕಗಳ ಆಡಳಿತಾತ್ಮಕ ಚರಿತ್ರೆಯಾಗಿ ಗಮನ ಸೆಳೆಯುತ್ತದೆ. ಸ್ವಾತಂತ್ರೋತ್ತರ ಕರ್ನಾಟಕ ಒಳಗೊಂಡಂತೆ ಭಾರತದ ರಾಜಕಾರಣ ತುಳಿದಿರುವ ಪ್ರಪಾತದ ದಾರಿಯನ್ನು ಈ ಕೃತಿ ಎತ್ತಿ ತೋರಿಸಿದೆ. ಎಷ್ಟು ಅಧಿಕಾರಿಗಳು,ರಾಜಕಾರಣಿಗಳು ಇಲ್ಲಿ ಬೆತ್ತಲಾಗಿದ್ದಾರೆ ಎಂದರೆ ಅವರೆಲ್ಲರಿಗೂ ತುಂಡು ಬಟ್ಟೆಯಾದರೂ ಹೊದಿಸುವಷ್ಟು ಸಾಮರ್ಥವಿಲ್ಲದೆ ನಾಡು ಬಡವಾಗಿದೆ. ಸುಬ್ರಮಣ್ಯಂ ಎಂಥ ಪರಿಸ್ಥಿತಿಯಲ್ಲಿ ಬಗ್ಗಿಲ್ಲ ಮತ್ತೂ ಮುರಿದೂ ಹೋಗಿಲ್ಲ ಎಂಬುದೇ ಬಹಳ ಮುಖ್ಯವಾಗಿ ಗಮನಿಸಬೇಕು.

ದಕ್ಷ ಅಧಿಕಾರಿಯೊಬ್ಬನನ್ನು ಎಂದಿಗೂ ಹತ್ತಿಕ್ಕಲಾಗದು ಎಂಬುದಕ್ಕೆ ಈ ಅಧಿಕಾರಿ ಜೀವಂತ ಸಾಕ್ಷಿ. ವ್ಯವಸ್ಥೆ ಅವರನ್ನು ಹಣಿಯಲು ನೋಡಿದಷ್ಟು ಅವರು ಪುಟಿದೆದ್ದಿದ್ದಾರೆ. ಎಂಥ ಕಳಪೆ ಕ್ಷೇತ್ರಗಳಿಗೆ ವರ್ಗಾವಣೆ ಮಾಡಿದರೂ ಅದನ್ನು ಎಲ್ಲರೂ ತಿರುಗಿ ನೋಡುವಂತೆ ಮಾಡಿರುವ ಅವರ ಒಳನೋಟ ಮತ್ತು ಕಾರ್ಯದಕ್ಷತೆಗೆ ಅವರೆ ಸಾಟಿ. ಕೊಲ್ಲುವೆನೆಂಬ ಭಾಷೆ ದೇವನದಾದರೆ ಗೆಲ್ಲುವೆನೆಂಬ ಭಾಷೆ ಭಕ್ತನದು ಎಂಬುದನ್ನು ಅಕ್ಷರಶಃ ಸಾಧಿಸಿ ತೋರಿಸಿದ್ದಾರೆ. ಸಿಲ್ಕ್ ಬೋರ್ಡ್ ನಲ್ಲಿ ಮಾಡಿದ ಕೆಲಸ ಇರಬಹುದು, ದೆಹಲಿ ಕರ್ನಾಟಕ ಭವನ ನಿರ್ವಹಿಸಿದ ಕಾರ್ಯವೈಖರಿ ಇರಬಹುದು, ಕಲಬುರಗಿ ಬೀದರ್ ಗಳಲ್ಲಿ ಬರ ನಿರ್ವಹಣೆ ಮಾಡಿದ್ದೆ ಇರಬಹುದು; ಇವೆಲ್ಲವು ಅವರ ಕಾರ್ಯಕ್ಷಮತೆಯನ್ನು ರುಜುವಾತುಗೊಳಿಸುತ್ತವೆ. ರಾಜಕಾರಣಿಗಳನ್ನು ನಿಭಾಯಿಸಿದ್ದಂತೂ ಲಾಜವಾಬ್. ಬಸವರಾಜೇಶ್ವರಿ, ಬಂಗಾರಪ್ಪ, ಗುಂಡೂರಾವ್, ಜೆ ಎಚ್ ಪಟೇಲರನ್ನು ಅನಾವರಣಗೊಳಿಸಿದ್ದು ಅವರ ಪ್ರಚಂಡ ಧೈರ್ಯವನ್ನು ದಿಗ್ದರ್ಶಿಸುತ್ತದೆ.
ತೀಕ್ಷ್ಣಮತಿ, ಸ್ವಯಂ ಸಂಪನ್ನ ಅಧಿಕಾರಿಗಳು ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ನಾಡವರ ಬದುಕಿನ ಕಾವಲುಗಾರರಾಗುತ್ತಾರೆ ಎಂಬುದಕ್ಕೆ ಜೀತದಾಳುಗಳನ್ನು ಅವರು ಗೂಂಡಾ ಕಾಂಟ್ರಾಕ್ಟ್ ರ ಕೈಯಿಂದ ಉಳಿಸಿದ್ದೇ ಸಾಕ್ಷಿಯಾಗಿದೆ. ಕರ್ನಾಟಕದ ಜಾತಿ ವ್ಯವಸ್ಥೆಯ ಮಿತಿ ಮತ್ತು ಅನಾಹುತಗಳು ಅರಿಯಲು ಸದರಿ ಪುಸ್ತಕ ಒಳ್ಳೆಯ ಆಕರ. ವರ್ತಮಾನದ ಬಗೆಗೆ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಸಮಾಜಶಾಸ್ತ್ರಜ್ಞರು, ಯಶಸ್ವಿ ರಾಜಕಾರಣ ಮಾಡಬೇಕೆಂಬ ಪುಢಾರಿಗಳು, ಜನಪರವಾಗಿ ಆಡಳಿತ ನೀಡಬೇಕೆಂಬ ಅಧಿಕಾರಿಗಳು ಈ ಪುಸ್ತಕವನ್ನು ಓದಲೇಬೇಕು. ಅದರಲ್ಲಿಯೂ ಕರ್ನಾಟಕದಲ್ಲಿ ಆಗಿ ಹೋದ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳ ಸಂತಾನವಿದೆಯಲ್ಲ ಅವರಂತೂ ತಪ್ಪದೇ ಓದಬೇಕು. ಅವರ ಹಿರಿಯರು ಮಾಡಿದ ಜನಯಜ್ಞಗಳ ಧೂಮ ಸ್ವಲ್ಪವಾದರೂ ತಟ್ಟೀತು.
ಸುಬ್ರಮಣ್ಯಂ ಅವರ ಶೈಲಿ ಬಗೆಗೆ ಒಂದು ಮಾತು ಹೇಳಲೆಬೇಕು. ಪರಿಣಾಮಕಾರಿ ವ್ಯಂಗ್ಯೋಕ್ತಿಗಳ ಸರಮಾಲೆ ಇಲ್ಲಿದೆ. ದಟ್ಟ ಐರನಿ ಕೃತಿಯನ್ನು ಆಕರ್ಷಕಗೊಳಿಸಿದೆ. ಬಳಸುವ ಕಟಕೋಕ್ತಿ, ವಿಷಯದ ನೇರವಾದ ಮಂಡನೆ, ಘಟನೆಯೊಂದರೆ ಬಗೆಗೆ ನೀಡುವ ಹಿನ್ನೆಲೆ, ವಿಷಯದ ಆಳವಾದ ಪರಿಜ್ಞಾನ ಇತ್ಯಾದಿಗಳು ಅವರ ಶೈಲಿಯನ್ನು ಸಮೃದ್ಧಗೊಳಿಸಿವೆ. ಮಾರ್ಕ್ಸ್, ಲೆನಿನ್, ಎಂಗೆಲ್ಸ್ ಅಷ್ಟೇ ಅಲ್ಲ ಕನ್ನಡದ ಕುವೆಂಪು, ಕಾರಂತ ಮಾತ್ರವಲ್ಲ ಆಂಗ್ಲ ಕವಿ ಷೇಕ್ಸ್ಪಿಯರ್, ಷೆಲ್ಲಿ ಮುಂತಾದವರನ್ನು ಓದಿಕೊಂಡದ್ದು ಬರವಣಿಗೆ ಉದ್ದಕ್ಕೂ ಸಾತ್ ನೀಡಿದೆ.
ಸಾರ್ಥಕ ಕೃತಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇದು ಆತ್ಮಚರಿತ್ರೆಗಿಂತ ಹೆಚ್ಚಾಗಿ ಅವರ ವರ್ಕ್ ಡೈರಿ ಯಾನೇ ಸೇವಾ ವರದಿಯಂತೆ ಮೂಡಿಬಂದಿದೆ. ಯಶಸ್ವಿ ವರ್ಕ್ ಡೈರಿ ಹೊರತು ವ್ಯಕ್ತಿಯೊಬ್ಬರ ಒಳತೋಟಿಯನ್ನೂ ಅನಾವರಣಗೊಳಿಸುವ ಆತ್ಮಚರಿತ್ರೆ ಆಗಿ ಪಾಕಗೊಂಡಿಲ್ಲ.
ಅವರ ಬಾಲ್ಯ, ಪರಿಸರ,ಖಾಸಗಿತನ ಇತ್ಯಾದಿಗಳು ತೀರ ಲಘುವಾಗಿವೆ. ಅವರ ಈ ಸಾಧನೆಯಲ್ಲಿ ಅವರ ಕುಟುಂಬದ ಯೋಗದಾನ ಕಿಂಚತ್ತಾದರೂ ಇರಲಿಕ್ಕಿಲ್ಲವೆ? ಖಾಸಗಿ ವಿವರಗಳು ಜನರಿಗೆ ಏಕೆ ಬೇಕು ಎಂಬ ಗ್ರಹಿಕೆ ಲೇಖಕರದಾಗಿರಬಹುದು. ಆದರೆ ಅವರು ಮೇಲಿಂದ ಮೇಲೆ ವರ್ಗಾವಣೆಗೊಂಡು ಹೈರಾಣಾಗುತ್ತಿರುವಾಗ ಸಾತ್ ನೀಡಿದ ಅವರ ಪತ್ನಿಯ ಚೂರಾದರೂ ಪಾತ್ರ ಇದ್ದಿರಲಿಕ್ಕಿಲ್ಲವೆ? ಮನೆವಾಳ್ತೆ ನಿಭಾಯಿಸಿದ ಅವಳ ಗೈರು ಹಾಜರಿ, ಕನಿಷ್ಠ ಪಕ್ಷ ಅವಳ ಹೆಸರು ಕಾಣಿಸಿಕೊಳ್ಳದಷ್ಟು ಪುರುಷ ಪಾರಮ್ಯ ಮೇಲುಗೈ ಸಾಧಿಸಿದೆ ಅನಿಸುತ್ತದೆ.
ಒಬ್ಬ ಯಶಸ್ವಿ ಅಧಿಕಾರಿ ಕುಟುಂಬ ದೇಶ ಎರಡನ್ನೂ ಪರಸ್ಪರ ಡಿಕ್ಕಿ ಹೊಡೆಯದಂತೆ ನಿಭಾಯಿಸಬಲ್ಲನು ಎಂಬುದನ್ನು ತೋರಿಸಲಾದರೂ ಕೆಲವು ವಿವರಗಳನ್ನು ನೀಡಬಹುದಿತ್ತು. ಅಧಿಕಾರಿಗಳ ಆತ್ಮರತಿ ಎಷ್ಟೋ ಸಲ ಮನುಷ್ಯ ಸಹಜ ಮಿತಿಗಳನ್ನು ಮರೆಮಾಚುತ್ತದೆ. ಮನುಷ್ಯರು ಮಿತಿಗಳಿಲ್ಲದ ಶಕ್ತಿಮಾನಗಳಲ್ಲ. ಆತ್ಮಚರಿತ್ರೆಯ ಮುಖ್ಯಗುಣವೆಂದರೆ ವಸ್ತುನಿಷ್ಠತೆ. ಮರೆಯಿಲ್ಲದೆ ತನ್ನನ್ನು ತಾನು ಸಾದರಪಡಿಸಿಕೊಳ್ಳುವ ನಮ್ರತೆ, ಅದೊಂದು ಬಗೆಯ ಶೋಧಿಸಿಕೊಳ್ಳುವ ಜೀವನ ಮೀಮಾಂಸೆ. ಜೀವನ ಚರಿತ್ರೆಗಿಂತ ಆತ್ವಚರಿತ್ರೆ ಭಿನ್ನವಾಗುವುದೇ ಈ ಕಾರಣಕ್ಕಾಗಿ.
ನಿಸ್ಪೃಹ ಆತ್ಮಚರಿತ್ರೆಗಳು ಸಮಾಜ ನಡೆಯ ಮೈಲಿಗಲ್ಲುಗಳು. ಸಹೃದಯ ಮತ್ತು ಕವಿ ಇಬ್ಬರ ಭಾವವೀರೇಚನದ ಟೂಲ್ಸ್ ಗಳು. ಅಷ್ಟಕ್ಕೂ ಕೆಲವೊಬ್ಬರಿಗೆ ತಮ್ಮ ಖಾಸಗಿ ವಿವರಗಳನ್ನು ಸಾರ್ವಜನಿಕಗೊಳಿಸುವ ಇಚ್ಛೆ ಇರುವುದಿಲ್ಲ. ಅದು ಅವರ ಸ್ವಾತಂತ್ರ್ಯ. ಆದರೆ ಅದು ಆತ್ಮಚರಿತ್ರೆ ಎಂಬ ಸಾಹಿತ್ಯಕ ರೂಪಕ್ಕೆ ಲಗತ್ತಾಗದು.
ಎಷ್ಟೋ ಸಲ ಸೃಜನಶೀಲ ಕೃತಿಗಳಲ್ಲಿ ಅರಿವಿರದಂತೆ ಕವಿ ಬಿಂಬಿತವಾಗಿರುತ್ತಾನೆ. ಪ್ರಜ್ಞಾಪೂರ್ವಕ ಗದ್ಯದಲ್ಲಿ ಲೇಖಕ ಜಾಣತನದಿಂದ ತಪ್ಪಿಸಿಕೊಂಡು ಬಿಡಬಹುದು. ಇದೇ ಸಾಹಿತ್ಯ ಕೃತಿಗಳ ಶಕ್ತಿ ಮತ್ತು ಮಿತಿ ಎಂದೂ ಹೇಳಬಹುದೇನೋ?
ಒಟ್ಟಾರೆ ಕಲ್ಯಾಣ ಕೆಡುವ ಹಾದಿ ಸಮಕಾಲೀನ ಸಂದರ್ಭದ ದಿಟ್ಟ ಬರವಣಿಗೆ. ನಾಡ ರಾಜಕೀಯ ಆಡಳಿತಾತ್ಮಕ ಚರಿತ್ರೆಗೆ ಸಂದ ಮೌಲಿಕ ಕೃತಿ.
- ಡಾ. ಮೀನಾಕ್ಷಿ ಬಾಳಿ
ಪುಸ್ತಕಕ್ಕಾಗಿ:
ಲಡಾಯಿ ಪ್ರಕಾಶನ
9480286844
ಮತ್ತು
ರಾಜ್ಯದ ಪ್ರಮುಖ ಪುಸ್ತಕದಂಗಡಿ ಮಳಿಗೆಗಳಲ್ಲಿ ಲಭ್ಯ




