ದೆಹಲಿ: ನೆನೆಗುದಿಗೆ ಬಿದ್ದಿರುವ ಮಹದಾಯಿ, ಕೃಷ್ಣಾ ಮೇಲ್ದಂಡೆ, ಭದ್ರಾ ಮತ್ತು ಮೇಕೆದಾಟು ಯೋಜನೆ ಕಾಮಗಾರಿಗೆ ಅಗತ್ಯ ಅರ್ಥಿಕ ನೆರವು ನೀಡುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.
ದೆಹಲಿ ಪ್ರವಾಸದಲ್ಲಿರುವ ಶಿವಕುಮಾರ್ ಕೇಂದ್ರ ಸಚಿವರಿಗೆ ಮನವಿ ಪತ್ರಸಲ್ಲಿಸಿ, ಕರ್ನಾಟಕದೊಂದಿಗೆ ಅವಿನಾವಭಾವ ಸಂಬಂಧ ಹೊಂದಿರುವ ತಾವು ರಾಜ್ಯದ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.
ಮಹದಾಯಿ ನೀರು ವಿವಾದ ಕುರಿತು ನ್ಯಾಯಾಧೀಕರಣ 2018ರಲ್ಲಿ ತನ್ನ ಆದೇಶ ನೀಡಿದೆ. ಈ ಆದೇಶದಲ್ಲಿ ಕಳಸಾ ನಾಲೆಗೆ 1.72 ಟಿಎಂಸಿ ಹಾಗೂ ಬಂಡೂರಿ ನಾಲೆ ಯೋಜನೆಗೆ 2.18 ಟಿಎಂಸಿ ಕುಡಿಯುವ ನೀರನ್ನು ನಿಗದಿ ಮಾಡಿದೆ. ಈ ಕಳಸಾ ಬಂಡೂರಿ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗ ಸ್ವೀಕರಿಸಿದೆ. ಸದ್ಯ ಈ ಯೋಜನೆಗೆ ಪರಿಸರ ಇಲಾಖೆಯ ಅನುಮತಿ ಬಾಕಿ ಇದ್ದು, ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಕೊಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯು ಉತ್ತರ ಕರ್ನಾಟಕದ ಜೀವನಾಡಿಯಾಗಿದೆ. ಕೃಷ್ಣಾ ನೀರು ವಿವಾದ ನ್ಯಾಯಧಿಕರಣ-2 2010ರಲ್ಲಿ ತೀರ್ಪನ್ನು ಪ್ರಕಟಿಸಿದ್ದು ಕರ್ನಾಟಕ ರಾಜ್ಯಕ್ಕೆ 173 ಟಿಎಂಸಿ ನೀರು ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ. ಈ ಪ್ರಮಾಣದ ನೀರಿನ ಪೈಕಿ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಮೂಲಕ 130 ಟಿಎಂಸಿ ನೀರಿನ ಬಳಕೆಗೆ ನೆರವಾಗಲಿದೆ. ಇದರಿಂದ ವಿಜಯಪುರ, ಬಾಗಲಕೋಟೆ, ಕಲಬುರ್ಗಿ, ರಾಯಚೂರು, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಯ 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಿದೆ. ಈ ಯೋಜನೆಗೆ 16,900 ಕೋಟಿ ವೆಚ್ಚವಾಗಲಿದೆ. ನ್ಯಾಯಾಧಿಕರಣದ ಆದೇಶವಾಗಿ ದಶಕವೇ ಕಳೆದರೂ ಈ ಯೋಜನೆಗೆ ಗೆಜೆಟ್ ನೋಟಿಫಿಕೇಶನ್ ಆಗಿಲ್ಲ. ಇದರಿಂದಾಗಿ ಉತ್ತರ ಕರ್ನಾಟಕ ಭಾಗದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಕೇಂದ್ರ ಜಲಶಕ್ತಿ ಸಚಿವಾಲಯದ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಸಲ್ಲಿಸಿದರು.
ಬೆಂಗಳೂರು ಸಂಚಾರ ದಟ್ಟಣೆ ಸಮಸ್ಯೆ ಎದುರಿಸುತ್ತಿದ್ದು, ಈ ಸಮಸ್ಯೆ ಬಗೆಹರಿಸಲು 60 ಕಿ.ಮೀ ಉದ್ದದ ನಗರ ಸುರಂಗ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇದಕ್ಕೆ ಒಟ್ಟು 30 ಸಾವಿರ ಕೋಟಿ ವೆಚ್ಚ ತಗುಲುವ ಅಂದಾಜು ಮಾಡಲಾಗಿದೆ. ಈ ಯೋಜನೆಗಳು ರಾಷ್ಟ್ರೀಯ ಹೆದ್ದಾರಿ 7 ಮತ್ತು 4ರ ಸಂಪರ್ಕ ಸಾಧಿಸುವ ಹಿನ್ನೆಲೆಯಲ್ಲಿ ಈ ಯೋಜನೆ ಜಾರಿಗೆ ಕೇಂದ್ರ ಬಜೆಟ್ ನಲ್ಲಿ ರಾಜ್ಯ ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅನುದಾನ ಮೀಸಲಿಡಬೇಕು ಎಂದು ಮನವಿ ಮಾಡಿದರು.




