ಬೆಳ ಬೆಳಗ್ಗೆ ಮನೆ ಮುಂದೆ ಗಿಳಿಶಾಸ್ತ್ರ ಹೇಳುವ ಚಂದಮಾಮ ಹಾಜರಾದರು. ನಾನು ನನ್ನ ಶಾಸ್ತ್ರ ಹೇಳು ಬರ್ರಿ ಅಂದೆ. ಆಯ್ತು ಬಾರಪ್ಪ ದೊರೆಯೆ ಮುಖದಲ್ಲಿ ‘ರಾಜಕಳೆ’ ಕಾಣತೈತಿ. ಕಷ್ಟಗಳೆಲ್ಲಾ ಹೆದರಿ ಓಡಿಹೋಗ್ಯಾವ ಅಂತ ಮಾತಿಗೆ ಶುರುಮಾಡಿದರು.
31 ರೂಪಾಯಿ ಕಾಣಿಕೆ ಇಡರಿ ಅಂದ. ನಾನು ಮನೆ ಕಟ್ಟೆಮೇಲೆ ಆತನ ಎದುರು ವಿಧೇಯ ವಿದ್ಯಾರ್ಥಿಯಂತೆ ಚಕ್ಳಬಕ್ಳ ಹಾಕಿ ಕೂತೆ. 31 ರೂಪಾಯಿ ಕಾಣಿಕೆ ಇಟ್ಟೆ. ನನ್ನ ಹೆಸರು ಕೇಳಿದರು. ನಾನು ಹೇಳಿದೆ. ರಾಶಿನಕ್ಷತ್ರ ಎಲ್ಲಾನೂ ಪಟಪಟಾಂತ ಹೇಳಿದರು. ನಂತರ ಗಿಣಿಜತೆ ಮಾತಾಡಿ, ಬಾರಯ್ಯಾ. ನಮ್ಮ ಸಾಹೇಬರ ಭವಿಷ್ಯ ಹೇಳು ಅಂದು ಗಿಣಿಪಂಜರದ ಬಾಗಿಲು ತೆರೆದ. ಮೆಲ್ಲಗೆ ಪಂಜರದಿಂದ ಮೂತಿಯ ನೆಲಕ್ಕೂರಿ ಹೊರಬಂದು ಹೊನಪು ವೈಯಾರ ಮಾಡಿ ಆತ ಜೋಡಿಸಿಟ್ಟಿದ್ದ ಪಾಕೆಟ್ ಗಳಲ್ಲಿ ಮೊದಲ ಪಾಕೆಟ್ ತೆಗೆದು ಕೊಟ್ಟಿತು. ಆತ ಆ ಪಾಕೆಟ್ ನೋಡಿದ ತಕ್ಷಣ. ನಿಮಗೆ ದೇವಿ ಬಲ ಇದೆ ಎಂದು ಪಾಕೆಟ್ ಒಳಗೆ ಇಟ್ಟ ಫೋಟೋ ತೆಗೆದರು. ಎರಡು ಲಕ್ಷ್ಮಿ ಸರಸ್ವತಿಯ ಫೋಟೋ, ಶಿವಪಾರ್ವತಿಯ ಫೋಟೋ, ಕೈಲಿಂದ ಸ್ಕೆಚ್ ಮಾಡಿದ ಶಿವಲಿಂಗದ ಫೋಟೋ ತೆಗೆದ. ಇದರ ಮಧ್ಯೆ ಒಂದು ಕೈಲಿ ಮೋಡಿಲಿಪಿಯಲ್ಲಿ ಬರೆದ ಒಂದು ಕಾರ್ಡ್ ತೆಗೆದು ಓದಲು ಶುರುಮಾಡಿದ. ಯಾವ ರೋಗರುಜಿನಿ ಕಾಡಲ್ಲ ಬೇಡಲ್ಲ. ಬಾಳ ಆರೋಗ್ಯವಾಗಿದ್ದೀಯ. ರಾಜಕುಮಾರ, ಯಾರ ಮಾತು ನೀ ಕೇಳಲ್ಲ. ನಾನು ಹೇಳಿದ್ದೇ ಸರಿ ಅಂತೀಯಾ. ಯಾರ ಮುಂದೂ ತಲೆತಗ್ಗಿಸಲ್ಲ. ದೇವಿಯರು ಹಗಲು ರಾತ್ರಿ ನಿನ್ನ ಕಾಯತಾರ.
ನೀ ಕರೆಬಟ್ಟೆ ಹಾಕಬಾರದು, ಭಾನುವಾರ ಮೂಡಗಡಿಗೆ ಪ್ರಯಾಣ ಮಾಡಬಾರದು, ಶುಕ್ರವಾರ ಯಾರಿಗೆ ಸಾಲ ಕೊಡಬೇಡ. ಯಾರಿಂದಲೂ ಸಾಲ ಇಸ್ಕೋಬೇಡ. ನಿನ್ನ ನೋಡಿದರೆ ದೆವ್ವಗಳೆ ಓಡಿ ಹೋಗ್ತಾವ. ಯಾವ ಶನಿಯೂ ನಿನ್ನ ಕಾಡಲಾರ. ದುಡ್ಡಿಲ್ಲಾಂದ್ರ ನಾಗರ ಪಂಚಮಿ, ದುಡ್ಡಿದ್ರ ಪೀರಲಹಬ್ಬ.
ದುಡ್ಡು ಕೂಡಿಡೋ ಗುಣ ಇಲ್ಲ, ನೀರು ಖರ್ಚುಮಾಡಿದಂಗ ಮಾಡೋ ಗುಣಾ ನಿನ್ನದು. ನಿನಗೆ ಯಾರಿಂದಲೂ ಕೇಡಿಲ್ಲ. ನಿನ್ನ ಸ್ನೇಹಿತರಿಂದಲೇ ನಿನಗೆ ಮೋಸ ಆಗಿದೆ. ಫ್ರೆಂಡ್ಸ್ ಗಿಂಡ್ಸ್ ಅಂತೀರಲ್ಲ ಅವರಿಂದಲೆ ನೀವು ಬಾಳ ತೊಂದ್ರಿ ಅನುಭವಿಸೀರಿ.
ಶುಭವಾಗಲಿ, ದೇವಿ ನಿನ್ನಕಡೆ ಇದಾಳ ಬರತೀನಿ ಸ್ವಾಮಿ ಎಂದು ಎದ್ದರು.
ದೊಡ್ಡೋರಿಗೆ ಎದುರಾಡಬೇಡ..
ದೇವ್ರುದಿಂಡ್ರಿಗೆ ಬೈಬೇಡ..
ಹಿರೇರಿಗೆ ತಗ್ಗೀ ಬಗ್ಗೀ ನಡೀಬೇಕು
ಧಾನಧರ್ಮ ಮಾಡಬೇಕು..
ಕೇಳಿದವರಿಗೆ ಇಲ್ಲಾ ಅನಬೇಡ..
ದೇವರು ನಿನಗೆ ಕೊಟ್ಟಾನ..
ಒಳ್ಳೇದಾಗುತ್ತೆ… ರಾಜಕುಮಾರ ಎಂದು ಶಾಸ್ತ್ರ ಮುಗಿಸಿದ.
ನಾನು ಎಲ್ಲವನ್ನೂ ಫೋಟೋ ವೀಡಿಯೋ ಮಾಡಲು ಕೇಳಿದೆ. ಆತ ಒಪ್ಪಲಿಲ್ಲ. ನಾನು ಒತ್ತಾಯ ಮಾಡಲಿಲ್ಲ. ಕೊನೆಗೆ ಆತನೆ ಒಂದು ಗಿಳಿ ಜತೆ ನನ್ನದೊಂದು ಫೋಟೋ ತಕ್ಕೋ ಸಾಕು ಅಂದ.
ಕುಲಬಳಿ ಬಗ್ಗೆ ಮಾತಾಡಿದೆ. ಬಳ್ಳಾರಿಯ ಗುಗ್ಗರಟ್ಟಿಯ ಕಡೆ ನೆಲೆಸಿದ ಕಾಡುಸಿದ್ಧರ ಕುಲದವರು. ಎರಡು ಗಿಣಿಗಳಿದ್ದವು. ಅದರಲ್ಲಿ ಒಂದು ಗಂಡು ಒಂದು ಹೆಣ್ಣು. ನಾನು ಇದೇನು ಎರಡನ್ನು ಬೇರೆ ಬೇರೆ ಮಾಡಿರಲ್ಲ ಅಂದೆ. ಅದಕ್ಕೆ ಆತ ಇಬ್ಬರಿಗೂ ಇನ್ನು ಮದುವೆ ಮಾಡಿಸಿಲ್ಲ. ಅದಕ್ಕೆ ಮದುವೆಗೆ ಮುಂಚೆ ಜತೆಗಿರೋದು ಬೇಡ ಅಂತ ಪಂಜರದಲ್ಲಿ ಅಡ್ಡ ಹಾಕೀನಿ ಅಂದ. ಈ ಗಿಣಿಗಳನ್ನು ಮನುಷ್ಯರಂತೆ ಭಾವಿಸಿ ಮಾತನಾಡಿದ.
ಈ ಗಿಣಿಶಾಸ್ತ್ರ ಸರಿ ತಪ್ಪು ಅನ್ನೋದಕ್ಕಿಂತ, ಕೇಳಿದವರಲ್ಲಿ ತನ್ನ ಬಗೆಗೇ ಒಂದು ಪಾಜಿಟಿವ್ ಆದ ಆತ್ಮವಿಶ್ವಾಸ ಬೆಳೆಸ್ತಾರೆ ಅನ್ನಿಸಿತು. ಇವರು ಬಳಸುವ ಪರಿಭಾಷೆಯೆ ಇದನ್ನು ಹೇಳುತ್ತದೆ. ದನಿ, ಸಾಹೇಬಾ, ರಾಜಕುಮಾರ, ಯಜಮಾನ ಎಂದು ಎಲ್ಲರಿಗೂ ಬಳಸುತ್ತಾರೆ. ಇದು ಕೆಳವರ್ಗ-ಕೆಳಜಾತಿಗಳಲ್ಲಿ ಎಂದೂ ಕೇಳಿರದ ಈ ಹೊಗಳಿಕೆ ಒಂದು ಬಗೆಯ ಆತ್ಮವಿಶ್ವಾಸವನ್ನು ಮೂಡಿಸುತ್ತೆ.
ಅಂತೆಯೇ ಇದರ ಮಿತಿಯೂ ಇದೆ. ಕೆಲವೊಮ್ಮೆ ಇಲ್ಲಸಲ್ಲದ ಕಾಡಾಟ ಅಂತ್ಹೇಳಿ ಭಯ ಹುಟ್ಟಿಸಿ ಹೆಚ್ಚಿನ ಹಣ ಪಡೆಯುವುದು ಇದೆ. ಕೆಲವೊಮ್ಮೆ ಯಥಾಸ್ಥಿತಿಯನ್ನು ಮುಂದುವರಿಸುವ ಕೆಲಸ ಮಾಡುತ್ತಾರೆ. ಹಿರಿಯರ ಮಾತನ್ನು ಮೀರಬೇಡ. ದೇವರು ದಿಂಡ್ರನ್ನು ಪ್ರಶ್ನಿಸಬೇಡ. ಇತ್ಯಾದಿ ಸಾಂಪ್ರದಾಯಿಕ ಅಸಮಾನತೆ ಪ್ರಾಕ್ಟೀಸ್ ಮಾಡುವ ಮೌಲ್ಯಗಳನ್ನು ಭಯ ಭಕ್ತಿಯಿಂದ ಉಳಿಸಲು ಇವರು ನೆರವಾಗುತ್ತಾರೆ.
- ಅರುಣ್ ಜೋಳದಕೂಡ್ಲಿಗಿ, ಜಾನಪದ ವಿದ್ವಾಂಸರು




