ನೊಂದವರ ನಾಯಕರಾಗಲು ಹೃದಯವಂತಿಕೆ ಬೇಕೆ ಹೊರತು ಜಾತಿಯಲ್ಲ

3 years ago

#heart #caste #leader #suffering #ksnagaraj

ಇತ್ತೀಚಿನ ದಶಕಗಳಲ್ಲಿ ದಲಿತರ ದುಃಖ ದುಮ್ಮಾನಗಳಿಗೆ ಸ್ಪಂದಿಸಲು ದಲಿತರು ಚುಕ್ಕಾಣಿ ಹಿಡಿಯಬೇಕೆಂಬ ಮಾತು ಹಿಂದುಳಿದ ವರ್ಗದವರ ನೋವಿಗೆ ಸ್ಪಂದಿಸಲು ಹಿಂದುಳಿವ ವರ್ಗದವರೆ ಸರ್ಕಾರದ ನೇತೃತ್ವ ವಹಿಸಬೇಕೆಂಬ ಮಾತುಗಳು ಪದೇ ಪದೇ ಹೇಳುತ್ತಲೇ ಇರುತ್ತಾರೆ.

ದಲಿತರ ಅಥವಾ ಹಿಂದುಳಿದ ವರ್ಗದವರ ಜೊತೆಗೆ ಶೋಷಿತರ ನೋವಿಗೆ ಸ್ಪಂದಿಸಿ ಅವರಿಗೆ ಗೌರವದ ಬದುಕನ್ನು ಕಟ್ಟಿಕೊಡಲು ಜಾತಿಯ ನಾಯಕರಿಗಿಂತ ಹೃದಯವಂತಿಕೆವುಳ್ಳ ನಾಯಕರಷ್ಟೇ ಬೇಕು.

ದಲಿತರಲ್ಲದ ಗಾಂಧೀಜಿ ದಲಿತರಿಗಾಗಿ ಶ್ರಮಿಸಿದರು. ಸಂವಿಧಾನದ ಮೂಲಕ ಅಂಬೇಡ್ಕರ್ ಎಲ್ಲಾ ಶೋಷಿತರ ಹಿತವನ್ನು ಕಾಯ್ದರು. ಮೇಲ್ವರ್ಗದ ಸಮಾಜಕ್ಕೆ ಸೇರಿದ ರಾಜಾರಾಮ್ ಮೋಹನ್‌ರಾಯ್, ದಯಾನಂದ ಸರಸ್ವತಿ, ವಿವೇಕಾನಂದರು ಎಲ್ಲಾ ವರ್ಗದವರ ಶೋಷಣೆಗಳ ವಿರುದ್ಧ ಮಾತನಾಡಿ ಸ್ವಾಭಿಮಾನದ ಬದುಕಿಗೆ ಮುನ್ನುಡಿಯನ್ನು ಬರೆದರು.

ದೇಶದ ರಾಜಕಾರಣದಲ್ಲಿ ನೆಹರೂ ಪ್ರಧಾನಿಯಾಗಿ ಬ್ರಾಹ್ಮಣ ನಾಯಕರಾಗಲಿಲ್ಲ. ಬದಲಿಗೆ ವೈಜ್ಞಾನಿಕ ಚಿಂತನೆಗಳೊಂದಿಗೆ ಮೌಡ್ಯಗಳ ವಿರುದ್ಧ ಸಮಾಜವನ್ನು ನಿರ್ಮಿಸುವ ಸಲುವಾಗಿ ವಿದ್ಯೆ ನೀಡುವ ಕಾಯಕ ಮಾಡಿದರು. ಅದೇ ರೀತಿಯಲ್ಲಿ ಈ ದೇಶದ ಚುಕ್ಕಾಣಿ ಹಿಡಿದ ಅನೇಕ ನಾಯಕರು ಯಾವುದೇ ವರ್ಗದ, ಸಮಾಜದ ಪ್ರತಿನಿಧಿಗಳಾದ ಎಲ್ಲಾ ಪ್ರತಿನಿಧಿಗಳಾದರು. ಜೊತೆ ಜೊತೆಗೆ ಎಲ್ಲಾ ವರ್ಗದ ಜನರಿಗೂ ನಾಯಕತ್ವವನ್ನು ನೀಡಿದರು.

ಶ್ರೀ ರಾಮಕೃಷ್ಣ ಹೆಗಡೆರವರು ಲಿಂಗಾಯಿತರಲ್ಲದಿದ್ದರೂ ಆ ವರ್ಗದ ಜನರ ಪ್ರೀತಿಗೆ ಪಾತ್ರರಾಗಿದ್ದರು. ಕ್ಷತ್ರಿಯ ಸಮಾಜಕ್ಕೆ ಸೇರಿದ ಅರಸುರವರು ಹಿಂದುಳಿದ ವರ್ಗದವರ ಹಿತವನ್ನು ಕಾಯ್ದರು. ಅದೇ ರೀತಿಯಲ್ಲಿ ಕುದ್ಮುಲ್ ರಂಗರಾಯರು ಬ್ರಾಹ್ಮಣ ಸಮಾಜಕ್ಕೆ ಸೇರಿದವರಾದರೂ ದಲಿತರ ಏಳಿಗೆಗಾಗಿ ತಮ್ಮ ಬದುಕನ್ನು ಸವೆಸಿದರು. ದಲಿತರಲ್ಲದಿದ್ದರೂ ಜ್ಯೋತಿ ಫುಲೆ ಮತ್ತು ಸಾವಿತ್ರಿ ಫುಲೆರವರು ನೊಂದವರ ಹಿತಕ್ಕಾಗಿ ದುಡಿದರು. ಅನೇಕ ನಾಯಕರುಗಳು ದಲಿತರ ಸಮಾಜಕ್ಕೆ ಸೇರಿದವರಾಗಿದ್ದರೂ ತಮ್ಮ ಮನೆಯ ಒಳಗೆ ಹರಕಲು ಬಟ್ಟೆಯ ಕಾಲಿಗೆ ಚಪ್ಪಲಿ ಇಲ್ಲದ ಸಾಮಾನ್ಯ ಜನರನ್ನು ಮನೆಯ ಒಳಗೆ ಸೇರಿಸುವುದಿರಲಿ ಮೈ ಮುಟ್ಟಿ ಮಾತನಾಡಿಸುವುದಿಲ್ಲ. ಅದೇ ರೀತಿಯಲ್ಲಿ ಅನೇಕ ಹಿಂದುಳಿದ ವರ್ಗದ ನಾಯಕರು, ರಾಜಕೀಯ ಸ್ಥಾನಮಾನಕ್ಕಾಗಿ ಆ ಹೆಸರುಗಳನ್ನು ಬಳಸುತ್ತಾರೆ ಹೊರತು ಆ ವರ್ಗದ ಜನರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಅರಿಯುವ ಸಲುವಾಗಿ ಆ ವರ್ಗದ ಜನರು ವಾಸಿಸುವ ಕಾಲೋನಿಗಳ ಕಡೆ ನೋಡಿರುವುದಿಲ್ಲ.

ಬಸವಣ್ಣನವರು ಮೇಲ್ಪಾತಿಗೆ ಸೇರಿದವರಾದರೂ ಸಮಸಮಾಜಕ್ಕಾಗಿ ಅನೇಕ ಸವಾಲುಗಳನ್ನು ಎದುರಿಸಿದರು. ಹೀಗಾಗಿ ಅಧಿಕಾರ ಯಾವ ವರ್ಗದ ಜನರ ಕೈಯಲ್ಲಿದೆ ಎನ್ನುವುದಕ್ಕಿಂತ ನೊಂದವರ, ದಮನಿತರ, ಶೋಷಣೆಗೆ ಗುರಿಯಾದವರ, ಪರವಾಗಿ ಮನಪೂರ್ವಕವಾಗಿ ಸೇವೆ ಸಲ್ಲಿಸುವ ವಿಶಾಲ ಹೃದಯವಂತಿಕೆ ಇರಬೇಕೆ ಹೊರತು ಯಾವ ಜಾತಿ, ಯಾವ ಪಂಗಡವೆಂಬ ಮಾತುಗಳೆಲ್ಲವೂ ಕೇವಲ ರಾಜಕೀಯದ ಹೇಳಿಕೆಗಳಾಗುತ್ತದೆ.

ಇಂದಿಗೂ ಶುದ್ಧ ಕುಡಿಯುವ ನೀರಿಲ್ಲದೆ ಕೇರಿಗಳಲ್ಲಿ ಬದುಕುತ್ತಿರುವ ಜನರ ಬಗ್ಗೆ ಕಣ್ಣೀರು ಸುರಿಸಿರುವ ನಾಯಕರೆಷ್ಟು ಮಂದಿ ಇದ್ದಾರೆ. ಸೌಕರ್ಯ, ಸೌಲಭ್ಯಗಳಿಲ್ಲದೆ ಗೂಡಿನಂತಿರುವ ಮನೆಗಳಲ್ಲಿ ಬದುಕುತ್ತಿರುವ ಜನರ ಬಗ್ಗೆ ಅದೆಷ್ಟು ಜನ ಪರಿಸ್ಥಿತಿಯನ್ನು ಕಂಡು ಪರಿಹಾರ ನೀಡಿರುತ್ತಾರೆ. ಎಲ್ಲವೂ ತೋರಿಕೆಯ ಮಾತುಗಳಷ್ಟೆ ಹೃದಯವಂತಿಕೆ ಎಂಬುದೊಂದಿದ್ದರೆ ಯಾವ ಜಾತಿಯವರಾದರೇನು?

– ಕೆ.ಎಸ್‌. ನಾಗರಾಜ್‌, ಬೆಂಗಳೂರು

Leave a Reply