ಕರ್ನಾಟಕ ರಾಜ್ಯದಲ್ಲಿ ಕಾವೇರಿ ಜಲ ವಿವಾದ ಅಥವಾ ಕೃಷ್ಣ ನದಿ ನೀರಿನ ವಿವಾದಗಳು ಬಂದಾಗಲೆಲ್ಲ ಹಲವಾರು ದಶಕಗಳ ಹಿಂದೆ ಸರ್ವ ಪಕ್ಷದ ಸಭೆಯ ಅಭಿಪ್ರಾಯ ಮತ್ತು ಸಲಹೆಗಳಿಗಿಂತ ಕಾನೂನು ತಜ್ಞರು ಮತ್ತು ನೀರಾವರಿ ತಜ್ಞರ ಅಭಿಪ್ರಾಯದ ಆಧಾರದ ಮೇಲೆ ನಮ್ಮ ರಾಜ್ಯ ಸರ್ಕಾರದ ನಿಲುವನ್ನು ಕೇಂದ್ರ ಸರ್ಕಾರಕ್ಕೆ ಮತ್ತು ನ್ಯಾಯಾಲಯಗಳಿಗೆ ಅಫಿಡಿವಿಟ್ ಸಲ್ಲಿಸುವ ಸಂದರ್ಭದಲ್ಲಿ ಪ್ರಮುಖವಾಗಿ ಪರಿಗಣಿಸಲ್ಪಡುತ್ತಿದ್ದರು.
ಈಗ ಕಾವೇರಿ ನದಿ ನೀರಿನ ಹಂಚಿಕೆಯ ವಿಚಾರ ಮತ್ತೆ ವಿವಾದವಾಗಿ ಕೂತಿದೆ. ತಮಿಳುನಾಡು ಸರ್ಕಾರ ಮಾನವೀಯತೆಯನ್ನು ಮರೆತು ನ್ಯಾಯಾಲಯದ ಮೂಲಕ ಮತ್ತು ನೀರಾವರಿ ನಿರ್ವಹಣಾ ಪ್ರಾಧಿಕಾರದ ಮೂಲಕ ತನ್ನ ನೀರಿನ ಹಕ್ಕನ್ನು ಪ್ರತಿಪಾದಿಸುತ್ತಿದೆ. ಸರ್ಕಾರದ ನಿಲುವೇನಿರಬೇಕು ಎಂಬ ವಿಚಾರದಲ್ಲಿ ಎರಡು ಬಾರಿ ವಿರೋಧ ಪಕ್ಷದ ನಾಯಕರುಗಳ ಸಭೆಯನ್ನು ರಾಜ್ಯ ಸರ್ಕಾರ ಕರೆದಿತ್ತು. ಮೊದಲನೇ ಸಭೆಗೆ ಬಹುತೇಕ ನಾಯಕರುಗಳು ಆಗಮಿಸಿ ತಮ್ಮ ಅಭಿಪ್ರಾಯವನ್ನು ತಿಳಿಸಿರುತ್ತಾರೆ. ಎರಡನೇ ಬಾರಿ ಕರೆದ ಸರ್ವಪಕ್ಷ ಸಭೆಗೆ ಬಿ.ಜೆ.ಪಿ., ಮತ್ತು ಜೆ.ಡಿ.ಎಸ್, ಪಕ್ಷದ ಪ್ರಮುಖ ನಾಯಕರುಗಳು ಗೈರುಹಾಜರಾಗುವುದರ ಮೂಲಕ ಇಲ್ಲಿಯೂ ಸಹ ರಾಜಕೀಯದ ಮಾತುಗಳನ್ನಾಡುವ ಹಂತವನ್ನು ತಲುಪಿರುತ್ತಾರೆ.
ಮಳೆ ಸಕಾಲದಲ್ಲಿ ಬರದೆ ಅಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಕುಸಿದಿರುವುದರಿಂದ ಹಂಚಿಕೆಯಲ್ಲಿ ಕರ್ನಾಟಕ ರಾಜ್ಯಕ್ಕೆ ತೊಂದರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟವಾದಂತಹ ಮತ್ತು ವೈಜ್ಞಾನಿಕವಾದಂತಹ ಚಿಂತನೆಯ ಆಧಾರದ ಮೇಲೆ ಸಲಹೆಗಳನ್ನು ನೀಡಬಲ್ಲ ತಜ್ಞರುಗಳ ಕೊರತೆ ಎದ್ದು ಕಾಣುತ್ತಿದೆ.
ನೀರಾವರಿ ತಜ್ಞರಾಗಿದ್ದ ಅನೇಕ ಮಹನೀಯರು ಇಂದು ನಮ್ಮೊಂದಿಗಿಲ್ಲ. ವಿಶೇಷವಾಗಿ ಬಾಳೇಕುಂದ್ರಿ ಮತ್ತು ಹೆಚ್.ಎನ್. ನಂಜೇಗೌಡರು ಇಲ್ಲದಿರುವುದು ಇಂತಹ ಸಂದರ್ಭದಲ್ಲಿ ದೊಡ್ಡ ಕೊರತೆಯಾಗಿರುತ್ತದೆ. ಕಾವೇರಿ ನದಿ ನೀರಿನ ವಿವಾದಗಳು ಬಂದ ಸಂದರ್ಭದಲ್ಲಿ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರವಿದ್ದರೂ ಹೆಚ್.ಎನ್. ನಂಜೇಗೌಡರ ಸಕಾಲಿಕವಾದ ನೀರಾವರಿ ವಿಚಾರದಲ್ಲಿನ ಅವರ ಆಳವಾದ ಅಧ್ಯಯನದ ಪರಿಣಾಮವಾಗಿ ನಮಗೆ ಸಲಹೆಗಳು ದೊರೆಯುತ್ತಿತ್ತು. ಮನವಿ ಪತ್ರಗಳನ್ನು ಮತ್ತು ನ್ಯಾಯಾಲಯಕ್ಕೆ ಸಲ್ಲಿಸುವ ದಾಖಲೆಗಳಲ್ಲಿಯೂ ಸರಿಯಾದಂತಹ ಅಂಶಗಳನ್ನು ಸಾಧ್ಯವಾಗಿರುತ್ತಿತ್ತು. ಹಾವನೂರುರವರಂತಹ, ಲಕ್ಷ್ಮೀಸಾಗರ್ ರವರಂತಹ ಕಾನೂನಿನ ಜ್ಞಾನವುಳ್ಳ ಸಚಿವರುಗಳು ಯಾವುದೇ ಸರ್ಕಾರದ ಸಂಪುಟದಲ್ಲೂ ಇರಬೇಕಾಗುತ್ತದೆ. ಅದೇ ರೀತಿಯಲ್ಲಿ ಕಡಿದಾಳ ಮಂಜಪ್ಪ, ಹುಚ್ಚು ಮಾಸ್ತಿಗೌಡರಂತಹ ಕಂದಾಯ ಇಲಾಖೆಯ ವ್ಯವಸ್ಥೆಯನ್ನು ಬಲ್ಲಂತವರು ಬೇಕಾಗುತ್ತದೆ.
ವಿಶೇಷವಾಗಿ ಹೆಚ್.ಎನ್. ನಂಜೇಗೌಡರು. ಅರಸಿಕೆರೆಯ ಶಾಸಕರಾಗಿ ಹಾಸನ ಲೋಕಸಭಾ ಕ್ಷೇತ್ರದ ಸದಸ್ಯರಾಗಿ, ಅರಸುರವರ ಸಂಪುಟದಲ್ಲಿ ಸಚಿವರಾಗಿ ಅಂತಿಮವಾಗಿ ಬಸವನಗುಡಿ ಕ್ಷೇತ್ರದ ಶಾಸಕರಾಗಿ ಸದನದಲ್ಲಿ ಶ್ರೇಷ್ಠ ಸಂಸದೀಯ ಪಟು ಎನಿಸಿಕೊಳ್ಳುವುದರ ಜೊತೆಗೆ ನೀರಾವರಿ ತಜ್ಞರೆಂಬ ಅಭಿಮಾನದ ಮಾತಿಗೆ ಪಾತ್ರರಾಗಿದ್ದರು. ಅವರು ರಾಜಕೀಯಕ್ಕೆ ಬಂದ ಆರಂಭದ ದಿನಗಳಲ್ಲಿಯೇ ಅವರ ರಾಜಕೀಯ ಗುರುಗಳಿಂದ ರಾಜ್ಯದ ನದಿಗಳ ಮಾಹಿತಿ, ಆಣೆಕಟ್ಟುಗಳು, ನೀರಾವರಿ ಯೋಜನೆಗಳು, ಅಂತರ್ ರಾಜ್ಯದ ನದಿ ನೀರಿನ ಸಮಸ್ಯೆಗಳು ಇವುಗಳ ಬಗ್ಗೆ ಅರಿತುಕೊಂಡಿದ್ದರು. ಒಬ್ಬ ನುರಿತ ಉಪಾಧ್ಯಾಯರಂತೆ ನೀರಾವರಿ ವಿಚಾರದಲ್ಲಿ ಎಲ್ಲರಿಗೂ ತಿಳಿಸಿಕೊಡುತ್ತಿದ್ದರು.
ಇಂತಹ ಸಂದರ್ಭದಲ್ಲಿ ಸಭೆಗಳನ್ನು ನಡೆಸಿ ವಿಚಾರ ಸಂಕಿರಣಗಳನ್ನು ಏರ್ಪಡಿಸಿ ತಮ್ಮ ಬರಹಗಳ ಮೂಲಕ, ತಮ್ಮ ಭಾಷಣಗಳ ಮೂಲಕ ರಾಜ್ಯದ ಜನರಿಗೆ ವಾಸ್ತವ ಸಂಗತಿಯನ್ನು ತಿಳಿಸಿಕೊಟ್ಟು ಸರ್ಕಾರಕ್ಕೆ ಅನುಸರಿಸಬೇಕಾದ ಮಾರ್ಗವನ್ನು ತೋರಿಸಿಕೊಡುತ್ತಿದ್ದರು. ಈ ವಿಚಾರದಲ್ಲಿ ಅವರು ಸದನದಲ್ಲಿ ಆಡಿರುವ ಮಾತುಗಳು, ಅವರ ಲೇಖನಗಳು, ಪತ್ರಿಕಾ ಹೇಳಿಕೆಗಳು ಇವುಗಳನ್ನು ಸಂಗ್ರಹಿಸಿ ಪುಸ್ತಕದ ರೂಪದಲ್ಲಿ ಪ್ರಕಟಿಸಿದರೆ ಎಲ್ಲ ಸಂದರ್ಭಕ್ಕೂ ಸಮಸ್ಯೆಗಳ ಪರಿಹಾರಕ್ಕೆ ಒಂದಷ್ಟು ಮಾಹಿತಿಗಳು, ಮಾರ್ಗೋಪಾಯಗಳು ತಿಳಿಯುತ್ತವೆ.
– ಕೆ.ಎಸ್.ನಾಗರಾಜ್, ಬೆಂಗಳೂರು




