ಕರ್ನಾಟಕದಲ್ಲಿ ಮೈತ್ರಿ ರಾಜಕಾರಣ ಯಶಸ್ವಿಯಾಗಿಲ್ಲ

3 years ago

#Alliance #politics #successful #Karnataka #jds #bjp

1947 ರಿಂದ 1983ರ ತನಕ ಬಹುತೇಕ ಕಾಂಗ್ರೆಸ್ ಪಕ್ಷದ ಹಿಡಿತದಲ್ಲೇ ಇದ್ದ ಕರ್ನಾಟಕ ರಾಜ್ಯದ ಆಡಳಿತ ವ್ಯವಸ್ಥೆ 1983ರಲ್ಲಿ ಕಾಂಗ್ರೆಸೇತರ ಸರ್ಕಾರ ರಚನೆಯಾಯಿತು. ಜನತಾ ಪಕ್ಷ, ಕ್ರಾಂತಿರಂಗ, ಬಿ.ಜೆ.ಪಿ. ಕಮ್ಯುನಿಸ್ಟ್, ರೈತ ಸಂಘ, ಪಕ್ಷೇತರರು ಹೀಗೆ ಎಲ್ಲರನ್ನು ಒಳಗೊಂಡ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಎರಡು ವರ್ಷದ ಒಳಗಾಗಿ ಹತ್ತು ಹಲವರು ಭಿನ್ನಾಭಿಪ್ರಾಯಗಳು ಬಂದವು. ಬಂಗಾರಪ್ಪನವರು ಇದರಿಂದ ಹೊರ ಬಂದರು.

ತದನಂತರ 1984ರಲ್ಲಿ ವಿಧಾನಸಭೆಯನ್ನು ವಿಸರ್ಜಿಸುವುದರ ಮೂಲಕ ಶ್ರೀ ರಾಮಕೃಷ್ಣ ಹೆಗಡೆರವರು ಮೈತ್ರಿ ಸರ್ಕಾರಕ್ಕೆ ಮಂಗಳ ಹಾಡಿದರು. ತದನಂತರ 2004ರಲ್ಲಿ ಧರ್ಮಸಿಂಗ್‌ರವರ ನೇತೃತ್ವದಲ್ಲಿ ಜನತಾದಳದ ಬೆಂಬಲದೊಂದಿಗೆ ಸರ್ಕಾರ ರಚನೆಯಾಯಿತು. 20 ತಿಂಗಳ ಅವಧಿಯಲ್ಲಿ ಭಿನ್ನಾಭಿಪ್ರಾಯದಿಂದ ಇದು ಪತನವಾಯಿತು. ಮತ್ತೆ ಕುಮಾರಸ್ವಾಮಿ ಮತ್ತು ಯಡಿಯೂರಪ್ಪರವರ ಸರ್ಕಾರ ಬಿ.ಜೆ.ಪಿ., ಜನತಾ ದಳದ ಮೈತ್ರಿ ಸರ್ಕಾರ ಸ್ಥಾಪನೆಯಾಗಿ ಮಾತಿನಂತೆ ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರವಾಗದ ಕಾರಣದಿಂದ ವಿಧಾನಸಭೆ ವಿಸರ್ಜನೆಯಾಯಿತು.

2018ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಮತ್ತು ಜನತಾದಳ ಸರ್ಕಾರ ರಚನೆ ಮಾಡಿ ಕುಮಾರಸ್ವಾಮಿರವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು. 14 ತಿಂಗಳ ಅವಧಿಯಲ್ಲಿ ರಾಜಕೀಯವಾಗಿ ಹಲವಾರು ಸಮಸ್ಯೆಗಳು ಕಾಣಿಸಿಕೊಂಡು 17 ಜನ ಶಾಸಕರ ಪಕ್ಷಾಂತರದೊಂದಿಗೆ ಸರ್ಕಾರ ಪತನವಾಯಿತು.

ಇನ್ನು 1999ರಲ್ಲಿ ಸಂಯುಕ್ತ ಜನತಾ ದಳ ಮತ್ತು ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಹೊಂದಾಣಿಕೆಯೊಂದಿಗೆ ಸ್ಪರ್ಧೆ ಮಾಡಿತ್ತು. ಚುನಾವಣೆಯ ನಂತರ ಮತ್ತೆ ಭಿನ್ನಾಭಿಪ್ರಾಯಗಳು ಬಂದು ಮೈತ್ರಿ ಮುರಿದು ಬಿದ್ದಿತ್ತು. 1998ರಲ್ಲಿ ಬಿ.ಜೆ.ಪಿ. ಮತ್ತು ಲೋಕಶಕ್ತಿ ಮೈತ್ರಿಯಾಯಿತು. 1999ರ ಲೋಕಸಭಾ ಚುನಾವಣೆಯಲ್ಲಿ ಈ ಮೈತ್ರಿ ಮಾಯವಾಗಿ ಸಂಯುಕ್ತ ಜನತಾ ದಳ ಮತ್ತು ಬಿ.ಜೆ.ಪಿ ಮೈತ್ರಿಯಾಗಿ ಶ್ರೀನಿವಾಸ ಪ್ರಸಾದರು ಕೇಂದ್ರದಲ್ಲಿ ಸಚಿವರಾದರು. ಮುಂದಿನ ಕೆಲವೇ ವರ್ಷಗಳಲ್ಲಿ ಭಿನ್ನಾಭಿಪ್ರಾಯಗಳು ಬಂದು ನಾನೊಂದು ತೀರ ನೀನೊಂದು ತೀರ ಎನ್ನುವಂತಾಯಿತು.

1977ರಲ್ಲಿ ಅಸ್ತಿತ್ವಕ್ಕೆ ಬಂದ ಜನತಾ ಪಕ್ಷ ರಾಷ್ಟ್ರಮಟ್ಟದಲ್ಲಿ 1980ರ ಲೋಕಸಭಾ ಚುನಾವಣೆಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು. ಕರ್ನಾಟಕದಲ್ಲಿ 1983ರಲ್ಲಿ ಸರ್ಕಾರವನ್ನು ರಚಿಸಿತು. 1988ರಲ್ಲಿ ಜನತಾ ಪಕ್ಷ ಮತ್ತು ಇತರೆ ಪಕ್ಷಗಳು ವಿಲೀನಗೊಂಡು ವಿ.ಪಿ.ಸಿಂಗ್‌ ನೇತೃತ್ವದಲ್ಲಿ ಜನತಾ ದಳ ಎಂದು ರಚನೆಯಾಯಿತು. ಈ ಸಂದರ್ಭದಲ್ಲಿ ದೇವೇಗೌಡರು ಇದರಿಂದ ಹೊರಬಂದು ಜನತಾ ಪಕ್ಷವನ್ನು ಕಾಯ್ದುಕೊಂಡರು. ಮತ್ತೆ 1992ರಲ್ಲಿ ಜನತಾ ದಳದೊಂದಿಗೆ ದೇವೆಗೌಡರ ಪಕ್ಷ ವಿಲೀನವಾಯಿತು. 1999ರಲ್ಲಿ ಜಾರ್ಜ್‌ ಫರ್ನಾಂಡಿಸ್‌ರವರ ಮೇಲಿನ ಪ್ರೀತಿಯಿಂದ ಸಮಾಜವಾದಿ ನಾಯಕರಾದ ಜೆ.ಎಚ್. ಪಟೇಲ್‌ರವರು ಬಿ.ಜೆ.ಪಿಯೊಂದಿಗೆ ಮೈತ್ರಿ ಮಾಡಿಕೊಂಡರು. ಕೋಮುವಾದಿಗಳೊಂದಿಗೆ ಕೈ ಜೋಡಿಸಿದ ಕಾರಣಕ್ಕೆ ದೇವೇಗೌಡರು ಜಾತ್ಯಾತೀತ ಜನತಾ ದಳವನ್ನು ಸ್ಥಾಪಿಸಿದರು. 1996ರಲ್ಲಿ ಶ್ರೀ ರಾಮಕೃಷ್ಣ ಹೆಗಡೆರವರನ್ನು ಜನತಾ ದಳದಿಂದ ಉಚ್ಚಾಟಿಸಿದ ನಂತರ ರಾಜ್ಯದಲ್ಲಿ ಜನತಾ ದಳದ ಪರಿಸ್ಥಿತಿ ಚೇತರಿಕೆಯಾಗಲಿಲ್ಲ. ಪ್ರಗತಿಪರ ಜನತಾ ದಳ, ಸಂಯುಕ್ತ ಜನತಾ ದಳ ಎಂಬ ಅನೇಕ ಸಂಘಟನೆಗಳನ್ನು ಕಟ್ಟಿದರೂ ಯಾವುದು ಫಲ ನೀಡಲಿಲ್ಲ.

ಉತ್ತರ ಕರ್ನಾಟಕದಲ್ಲಿ ಇದರ ಅಸ್ತಿತ್ವ ದಿನದಿಂದ ದಿನಕ್ಕೆ ಕುಂಟಿತವಾಯಿತು. 2006ರಲ್ಲಿ ಸಿದ್ದರಾಮಯ್ಯನವರನ್ನು ಪಕ್ಷದಿಂದ ಉಚ್ಚಾಟಿಸಿದ ಹಿನ್ನೆಲೆಯಲ್ಲಿ ಜಾತ್ಯಾತೀತ ಜನತಾದಳ ಮತ್ತಷ್ಟು ಕ್ಷೀಣಿಸಿತು. 39 ಸ್ಥಾನಗಳನ್ನು ಒಂದು ಬಾರಿ ಗಳಿಸಿದ್ದು ಬಿಟ್ಟರೆ ತದನಂತರ ಇದರ ಸ್ಥಾನವು ಕುಸಿಯ ತೊಡಗಿತು.

2023ರಲ್ಲಿ 19 ಸ್ಥಾನಗಳಿಗೆ ಕುಸಿದ ನಂತರ ಅನಿವಾರ್ಯವಾಗಿ ರಾಜಕೀಯ ಅಸ್ತಿತ್ವವನ್ನು ಕಾಯ್ದುಕೊಳ್ಳುವ ಸಲುವಾಗಿ ಯಾವ ಸಿದ್ಧಾಂತವನ್ನು ವಿರೋಧಿಸುತ್ತಾ 1996ರಲ್ಲಿ ದೇಶದ ಪ್ರಧಾನಿಯಾದರೋ ಅವರು ಇಂದು ವಿರೋಧಿಸಿದ ಸಿದ್ಧಾಂತವನ್ನು ಪ್ರತಿಪಾದಿಸುವವರೊಂದಿಗೆ ಜೋಡಿಸಬೇಕಾಗಿದೆ.

1983, 1985 ಮತ್ತು 1994ರಲ್ಲಿ ದೇವೇಗೌಡರು, ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ ಮತ್ತು ಜೆ.ಹೆಚ್. ಪಟೇಲರ ಒಗ್ಗಟ್ಟಿನ ನಾಯಕೃತದಲ್ಲಿ ವೈಭವದಿಂದ ಮೆರೆದ ಜನತಾ ದಳವೆಂಬ ರಾಜಕೀಯ ಸಂಸ್ಕೃತಿ ತನ್ನ ಬೇರುಗಳನ್ನು ಕಳೆದುಕೊಳ್ಳುತ್ತಿರುವುದು ಕಾಣಬಹುದಾಗಿದೆ.

– ಕೆ.ಎಸ್‌. ನಾಗರಾಜ್‌, ಬೆಂಗಳೂರು

Leave a Reply