ಚಾಮರಾಜನಗರ: ಸಾಲ ಮಾಡಿ ಅದ್ಧೂರಿ ಮದುವೆ ಮಾಡುವುದು ಒಳ್ಳೆಯದಲ್ಲ. ವ್ಯವಸಾಯಕ್ಕೆಂದು ಸಾಲ ಮಾಡಿ ಮದುವೆ ಮಾಡುವುದನ್ನು ನಿಲ್ಲಿಸಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ದೇವಸ್ಥಾನದ ರಂಗಮಂದಿರದಲ್ಲಿ ಆಯೋಜಿಸಿದ್ದ ಸಾಮೂಹಿಕ ಸರಳ ವಿವಾಹದಲ್ಲಿ ಮುಖ್ಯಮಂತ್ರಿ Siddaramaiah ಪಾಲ್ಗೊಂಡು ನವ ದಂಪತಿಗಳಿಗೆ ಶುಭ ಹಾರೈಸಿ ಮಾತನಾಡಿದ ಅವರು, ಬಡವರು ಮತ್ತು ಮಧ್ಯಮ ವರ್ಗದವರ ಪಾಲಿಗೆ ಅದ್ಧೂರಿ ಮದುವೆಗಳು ಬಹಳ ದೊಡ್ಡ ಹೊರೆಯಾಗುತ್ತವೆ. ಜೀವನ ಪರ್ಯಂತ ಸಾಲ ತೀರಿಸುತ್ತಾ ಕೂರಬೇಕಾಗುತ್ತದೆ. ಆದ್ದರಿಂದ ಸರಳ ಮತ್ತು ಸಾಮೂಹಿಕ ವಿವಾಹಗಳು ಹೆಚ್ಚೆಚ್ಚು ನಡೆಯಬೇಕು ಎಂದು ಹೇಳಿದರು.
ಮಹದೇಶ್ವರನ ಬೆಟ್ಟ ಅಧ್ಯಾತ್ಮಿಕ ಮಹತ್ವ ಇರುವ ಪುಣ್ಯ ಸ್ಥಳ. ಶೂದ್ರರು, ಶ್ರಮಿಕರು, ಬಡವರು, ಎಲ್ಲಾ ಜಾತಿಯವರ ಅಧ್ಯಾತ್ಮಿಕ ಕೇಂದ್ರವಾಗಿದೆ. ಈ ಕಾರಣಕ್ಕೇ ನನಗೆ ಈ ಕ್ಷೇತ್ರದ ಬಗ್ಗೆ ಹೆಚ್ಚು ಶ್ರದ್ದೆ ಮತ್ತು ಗೌರವ ಇದೆ ಎಂದು ಹೇಳಿದರು.
ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಮಲೈ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಈಗ ಪ್ರಾಧಿಕಾರದ ಆದಾಯವೂ ಹೆಚ್ಚಾಗಿದೆ. ಶಕ್ತಿ ಯೋಜನೆಯ ಪರಿಣಾಮ ಭಕ್ತರು, ಅದರಲ್ಲೂ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮಲೈ ಮಾದೇಶ್ವರನ ದರ್ಶನ ಪಡೆಯುತ್ತಿದ್ದಾರೆ ಎಂದರು.
ಮಲೈ ಮಹದೇಶ್ವರ ಬೆಟ್ಟದಲ್ಲಿರುವ ರಾಷ್ಟ್ರಪತಿ ಭವನದ ಹೆಸರು ಬದಲಾಗಿದೆ. ಇನ್ನು ಮುಂದೆ ಇದು ತಪೋಭವನ. ಮಾದೇಶ್ವರ ತಪಸ್ಸು ಮಾಡಿದ ಶಕ್ತಿ ಕೇಂದ್ರ ಇದು. ಆದ್ದರಿಂದ ಇದನ್ನು ನಾವು ತಪೋಭವನ ಎಂದು ಕರೆಯಬೇಕು. ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾ ಸ್ವಾಮಿಗಳ ಸಲಹೆಯಂತೆ ತಪೋಭವನ ಎಂದು ಬದಲಾಯಿಸಿದ್ದೇವೆ ಎಂದರು.
ಮುಂದಿನ ಐದು ವರ್ಷದಲ್ಲಿ ಮಲೈ ಮಹದೇಶ್ವರ ಪುಣ್ಯಕ್ಷೇತ್ರದ ಚಿತ್ರಣವನ್ನೇ ಬದಲಾಯಿಸುತ್ತೇವೆ. ಅಧಿಕಾರಿಗಳು ಇಲ್ಲಿನ ಕುಡಿಯುವ ನೀರು ಮತ್ತು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಪಟ್ಟದ ಗುರುಸ್ವಾಮಿಗಳು, ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು, ಶಾಸಕರಾದ ಎಂ.ಆರ್.ಮಂಜುನಾಥ್, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿ ಜಿಲ್ಲೆಯ ಶಾಸಕರು ಮತ್ತು ನಾಯಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.




