ಸರ್ಕಾರ ಸಾರಾಯಿ ಕುಡಿಸಲು ಮುಂದಾಗಿರುವುದು ದೊಡ್ಡ ದುರಂತ: ಬಸವರಾಜ ಬೊಮ್ಮಾಯಿ

3 years ago

#bigtragedy #liquor #BasavarajaBommai

ಬೆಂಗಳೂರು: ಬರಗಾಲದಲ್ಲಿ ರಾಜ್ಯದ ಜನತೆಗೆ ನೀರು ಕೊಡದಿರುವ ಸರ್ಕಾರ ಸಾರಾಯಿ ಕುಡಿಸಲು ಮುಂದಾಗಿರುವುದು ದೊಡ್ಡ ದುರಂತ. ಇದು ಸಾರಾಯಿ ಗ್ಯಾರೆಂಟಿ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯ ಸರ್ಕಾರ ಪಂಚಾಯಿತಿ ಮಟ್ಟದಲ್ಲಿ ಮದ್ಯದಂಗಡಿ ತೆರೆಯಲು ಮುಂದಾಗಿರುವುದು ಸರ್ಕಾರದ ನೈತಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಒಂದೆಡೆ ಗ್ಯಾರಂಟಿ ಹೆಸರಲ್ಲಿ ಮಹಿಳೆಯರಿಗೆ 2000 ರೂ. ನೀಡುವುದಾಗಿ ಹೇಳುವ ಸರ್ಕಾರ ಅದೇ ಹಣವನ್ನು ಅವರ ಗಂಡಂದಿರಿಂದ ವಸೂಲಿ ಮಾಡಲು ಮದ್ಯ ಮಾರಾಟದ ಮಾರ್ಗ ಹುಡುಕಿಕೊಂಡಂತಿದೆ. ಹೆಂಡತಿಯ ದುಡ್ಡು ಗಂಡಂದಿರಿಂದ ಪಡೆಯುವ ಮನಿ ರಿಟರ್ನ್ ಪಾಲಿಸಿ ಹಾಕಿಕೊಂಡ ಹಾಗಿದೆ ಎಂದು ಕಿಡಿಕಾರಿದ್ದಾರೆ.

ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಸರ್ಕಾರಿ ಮದ್ಯದಂಗಡಿ ತೆರೆಯುತ್ತಿರುವುದಾಗಿ ಅಬಕಾರಿ ಸಚಿವರು ಹೇಳಿರುವುದು ಹಾಸ್ಯಾಸ್ಪದವಾಗಿದೆ. ಅಕ್ರಮ ತಡೆಯಲಾಗದಿದ್ದರೆ ನಿಮ್ಮ ಇಲಾಖೆ ಮಾಡುವುದಾದರೂ ಏನು? ಎಂದು ಪ್ರಶ್ನಿಸಿದ್ದಾರೆ.

ಗ್ಯಾರಂಟಿ ಯೋಜನೆಯಲ್ಲಿ ಮನೆ ಯಜಮಾನಿ ಹುಡುಕುವ ಹೆಸರಲ್ಲಿ ಅತ್ತೆ ಸೊಸೆ ನಡುವೆ ಜಗಳ ಹಚ್ಚಿರುವ ಸರ್ಕಾರ ಇನ್ನು ಸಾರಾಯಿ ಕುಡಿಯಲು ಹಣಕ್ಕಾಗಿ ಗಂಡ ಹೆಂಡಿರ ನಡುವೆ ಜಗಳ ಹಚ್ಚಲು ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply