ಕಾವೇರಿ ನೀರಿಗಾಗಿ ಸೆ.29ರಂದು ಕರ್ನಾಟಕ ಬಂದ್: ವಾಟಾಳ್ ನಾಗರಾಜ್

3 years ago

#Karnataka #bandh #Cauvery #water #WatalNagaraj

ಬೆಂಗಳೂರು ಬಂದ್ ನಿಂದ ಯಾವುದೇ ಪ್ರಯೋಜನವಿಲ್ಲ

ಬೆಂಗಳೂರು: ಕಾವೇರಿ ನೀರಿಗಾಗಿ ಮಾಜಿ ಶಾಸಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ರೈತ ಹಾಗೂ ಕನ್ನಡ ಪರ ಹೋರಾಟಗಾರರು, ವಿವಿಧ ಜನಪರ ಸಂಘಟನೆಗಳ ಮುಖಂಡರು ಸಭೆ ನಡೆಸಿ, ನಾಳೆ ಬೆಂಗಳೂರು ಬಂದ್ ನಡೆಸಿದರೆ, ಯಾವುದೇ ಪರಿಣಾಮ ಬೀರುವುದಿಲ್ಲ. ಹಾಗಾಗಿ, ಸೆ.29 ರಂದು ಕರ್ನಾಟಕ ಬಂದ್ ನಡೆಸಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂಬ ತೀರ್ಮಾನ ತೆಗೆದುಕೊಂಡರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವಾಟಾಳ್ ನಾಗರಾಜ್, ಮಂಗಳವಾರ ಬೆಂಗಳೂರು ಬಂದ್ ಕರೆ ನೀಡಿದ್ದು, ಇದರಲ್ಲಿ ರಾಜಕೀಯ ಪಕ್ಷಗಳ ಕೈವಾಡ ಇದೆ. ಹಾಗಾಗಿ, ಯಾವುದೇ ಕಾರಣಕ್ಕೂ ಈ ಬಂದ್ ಬೆಂಬಲ ನೀಡಲ್ಲ. ಆದರೆ, ಇದೇ 29 ರಂದು ಕರ್ನಾಟಕ ಬಂದ್ ನಡೆಸಲಾಗುವುದು ಎಂದು ಹೇಳಿದರು.

ನಾಳೆ ನಡೆಯುವ ಬಂದ್ ಹೋರಾಟದಲ್ಲಿ ಯಾವುದೇ ಕಾರಣಕ್ಕೂ ಪಾಲ್ಗೊಳ್ಳುವುದಿಲ್ಲ. ಏಕೆಂದರೆ ಈ ಬಂದ್ ನಡೆಸುವ ಮುನ್ನ ನಮ್ಮೊಂದಿಗೆ ಯಾವುದೇ ರೀತಿಯ ಚರ್ಚೆ ನಡೆಸಿಲ್ಲ. ಜೊತೆಗೆ ಮಂಗಳವಾರ ಬೆಂಗಳೂರು ಬಂದ್ ಬಿಟ್ಟು ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್ ನಡೆಸಿ ಪರಿಣಾಮಕಾರಿಯಾಗಿ ಒಗ್ಗೂಡಿ ಹೋರಾಟ ನಡೆಸೋಣ ಎಂದು ಮನವಿ ಮಾಡಿಕೊಂಡರು. ನಾಳಿನ ಬಂದ್ ಗೆ ನಾವು ಒಪ್ಪಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ಬಂದ್ ನಡೆಸಿದರೆ ಬರೀ ನಗರ ವಲಯಕ್ಕೆ ಮಾತ್ರ ಈ ಹೋರಾಟ ಸೀಮಿತವಾಗಲಿದೆ. ಆದರೆ ಕಾವೇರಿ ನದಿ ನೀರು ಬೆಂಗಳೂರು ಮಾತ್ರವಲ್ಲದೆ ನಾಲ್ಕೈದು ಜಿಲ್ಲೆಗಳ ವಿಷಯವಾಗಿದೆ. ಜೊತೆಗೆ ಇದು ಇಡೀ ರಾಜ್ಯದ ಮೇಲೆ ಪರಿಣಾಮ ಬೀರುವ ಜಲ ವಿವಾದ ಆಗಿದ್ದು ಇದಕ್ಕೆ ಉತ್ತರ ಕರ್ನಾಟಕ ಭಾಗದ ಜನರು ಸಹ ಬೆಂಬಲ ಸೂಚಿಸಲಿದ್ದಾರೆ. ಹಾಗಾಗಿ ಕರ್ನಾಟಕ ಬಂದ್ ಅಗತ್ಯವಿದ್ದು, ಇದಕ್ಕೆ ಸರಿಸುಮಾರು ಸಾವಿರಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಅಧಿಕೃತವಾಗಿ ಬೆಂಬಲ ನೀಡಿವೆ ಎಂದು ತಿಳಿಸಿದರು.

Leave a Reply