ಕ್ಷಿಪ್ರ ಚಿರತೆ ಕಾರ್ಯಪಡೆ ರಚಿಸುವಂತೆ ಈಶ್ವರ ಖಂಡ್ರೆ ಸೂಚನೆ

2 years ago

#IshwarKhandre #instructs #Rapid #Leopard #TaskForce

ಬೆಂಗಳೂರು: ಬೆಂಗಳೂರಿನ ಜನ ದಟ್ಟಣೆಯ ವಸತಿ ಪ್ರದೇಶಗಳಲ್ಲಿ ಪದೇ ಪದೇ ಚಿರತೆಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರಕ್ಕೆ ಪ್ರತ್ಯೇಕ ಕ್ಷಿಪ್ರ ಚಿರತೆ ಕಾರ್ಯಪಡೆ ರಚಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ಈ ಬಾರಿ ಮಳೆ ಅಭಾವ ಸೇರಿದಂತೆ ಹಲವಾರು ಕಾರಣಗಳಿಂದ ಚಿರತೆ ಸೇರಿದಂತೆ ಇತರೆ ವನ್ಯಜೀವಿಗಳು ನೀರು, ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಹೆಚ್ಚಾಗಿ ಬರುತ್ತಿವೆ. ಅದರಲ್ಲೂ ಬೆಂಗಳೂರು ನಗರದ ಹೊರವಲಯದಲ್ಲಿ ಕಾಡು ಮತ್ತು ಬೆಟ್ಟಗುಡ್ಡ ಇರುವ ಪ್ರದೇಶದಲ್ಲಿ ಇತ್ತೀಚೆಗೆ ಚಿರತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಈ ವಿದ್ಯಮಾನ ಬೆಂಗಳೂರಿನ ಜನರಲ್ಲಿ ಆತಂಕ ಮೂಡಿಸಿದೆ. ಇದನ್ನು ನಿವಾರಿಸುವ ಜೊತೆಗೆ, ಚಿರತೆ ಹಾವಳಿ ತಡೆಯಲು ಕೂಡಲೇ ಬೆಂಗಳೂರಿನಲ್ಲಿ ಒಂದು ಕ್ಷಿಪ್ರ ಚಿರತೆ ಕಾರ್ಯಪಡೆ ರಚಿಸುವಂತೆ ಆದೇಶಿಸಿದ್ದಾರೆ.

ಈ ಮೂಲಕ ವನ್ಯಮೃಗಗಳು ನಾಡಿಗೆ ಬಂದರೆ ಕೂಡಲೇ ಸೆರೆ ಹಿಡಿದು ಕಾಡಿಗೆ ಅಥವಾ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವ ಕಾರ್ಯವನ್ನು ತ್ವರಿತವಾಗಿ ಮಾಡುವಂತೆ ಸೂಚನೆ ನೀಡಿದ್ದಾರೆ.

ಈಗಾಗಲೇ ಹಾಲಿ ಇದ್ದ 5  ಆನೆ ಕ್ಷಿಪ್ರ ಕಾರ್ಯಪಡೆಗಳ ಜೊತೆಗೆ ಬೆಂಗಳೂರು (ಬನ್ನೇರುಘಟ್ಟ) ಮತ್ತು ರಾಮನಗರದಲ್ಲಿ ತಲಾ ಒಂದರಂತೆ 2 ಕಾರ್ಯಪಡೆಯನ್ನು ಹೆಚ್ಚುವರಿಯಾಗಿ  ರಚಿಸಲಾಗಿದೆ. ಅದೇ ರೀತಿ ಹೆಚ್ಚು ಕಾಡಿರುವ ಮತ್ತು ಚಿರತೆಗಳು, ಕರಡಿಗಳು ಇರುವ ಬೆಟ್ಟಗುಡ್ಡದ ಪ್ರದೇಶದಲ್ಲಿ ಕನಿಷ್ಠ 3 ಜಿಲ್ಲೆಗೆ ಒಂದರಂತೆ ಕ್ಷಿಪ್ರ ಕಾರ್ಯಪಡೆ ರಚಿಸಿ, ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸಲು ಸೂಚಿಸಿದ್ದಾರೆ.

ಚಿರತೆ ಕಾರ್ಯಪಡೆಯ ಸಿಬ್ಬಂದಿಗೆ ಸೂಕ್ತ ತರಬೇತಿ ಕೊಡಿಸುವಂತೆ ಮತ್ತು ಅಣಕು ಕಾರ್ಯಾಚರಣೆಗಳನ್ನೂ ನಡೆಸಿ ಸಿಬ್ಬಂದಿಯನ್ನು ಸಜ್ಜುಗೊಳಿಸುವಂತೆ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

Leave a Reply