ಮೋದಿಯ ರಂಜಾನ್ ಕಿಟ್ಟಿನ ಹಿಂದೆ ನಿರೀಕ್ಷೆಗೂ ನಿಲುಕದ ನಾನಾ ಲೆಕ್ಕಾಚಾರಗಳಿವೆ ಎನ್ನುತ್ತಿವೆ ಬಿಜೆಪಿ ಮೂಲಗಳು. ಮುಸಲ್ಮಾನರನ್ನು ಗುಸ್ಬೈಟಿಯಾ, ಹೆಚ್ಚುಮಕ್ಕಳನ್ನು ಹೆರುವವರು, ಲವ್ ಜಿಹಾದಿಗಳು, ಟೆರರಿಸ್ಟುಗಳು ಅಂತೆಲ್ಲ ಮೂದಲಿಸುತ್ತಿದ್ದ ಬಿಜೆಪಿಯವರು ಈಗ ಇದ್ದಕ್ಕಿದ್ದಂತೆ ರಂಜಾನ್ಗೆ ಗಿಫ್ಟ್ ಕಿಟ್ ಕೊಡ್ತಾರೆ ಅಂದ್ರೆ; ಅದಕ್ಕೆ, ಮೋದಿಯ ಹೆಸರಿಟ್ಟು `ಸೌಗತ್-ಎ-ಮೋದಿ’ ಎಂದು ಪ್ರಚಾರ ಮಾಡುತ್ತಾರೆಂದರೆ ಸಹಜವಾಗಿಯೇ ಪ್ರಶ್ನೆಗಳು ಮೂಡುತ್ತವೆ. ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುಸ್ಲಿಂ ಮತಗಳನ್ನು ಸೆಳೆಯಲು ಬಿಜೆಪಿ ಇಂಥಾ ಪ್ಲ್ಯಾನ್ ಮಾಡಿದೆ ಅನ್ನೋದು ಹಲವರ ವಾದ. ಬಿಜೆಪಿಗೆ ಬರದೇ ಹೋದರೂ, ತನ್ನ ಮಿತ್ರಪಕ್ಷ ಜೆಡಿಯು ಪಾಲಾಗಲಿ ಎಂದು ಈ ಯೋಜನೆ ರೂಪಿಸಿರಬಹುದು. ಆದರೆ ಒಂದು ಕಲ್ಲಿಗೆ ಒಂದೇ ಹಣ್ಣು ಬೀಳಿಸಬೇಕೆಂಬ ನಿಯಮವೇನೂ ಇಲ್ಲವಲ್ಲ! ಹಾಗಾಗಿ ಬಿಹಾರದ ಎಲೆಕ್ಷನ್ ಹೊರತಾಗಿಯೂ ಇದರ ಹಿಂದೆ ಏನೋ ಉದ್ದೇಶ ಅಡಗಿರಬಹುದೆಂಬ ಗುಮಾನಿ ಮೂಡುತ್ತದೆ. ಆ ಗುಮಾನಿ ಬೊಟ್ಟು ಮಾಡುವ ಸುಳಿವುಗಳನ್ನು ಹಿಂಬಾಲಿಸಿ ಹೊರಟರೆ ಬಿಹಾರಕ್ಕು ಮಿಗಿಲಾದ ಕಾರಣಗಳು ಗೋಚರಿಸುತ್ತವೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಮೊದಲನೆಯದಾಗಿ ಒಂದು ವಿಚಾರ ಸ್ಪಷ್ಟ ಮಾಡಿಕೊಳ್ಳೋಣ. ಒಂದುವೇಳೆ, ಬಿಹಾರ ಚುನಾವಣೆಯೇ ಈ ತಂತ್ರದ ಏಕೈಕ ಅಜೆಂಡಾವಾಗಿದ್ದರೆ, ಅದಕ್ಕೆ ಮೋದಿಯ ಹೆಸರಿಡುತ್ತಿರಲಿಲ್ಲ. ಮಿತ್ರಪಕ್ಷ ಜೆಡಿಯುವಿನ ನಿತೀಶ್ ಕುಮಾರ್ ಮೂಲಕವೋ, ಅಥವಾ ಬಿಜೆಪಿ ಪಕ್ಷದ ಸಂಘಟಿತ ಪ್ರಯತ್ನವಾಗಿಯೋ ಪ್ರಚಾರ ಮಾಡಬಹುದಿತ್ತು. ಯಾಕೆಂದರೆ, ಮೋದಿ ಅದೆಷ್ಟು ಮುಸ್ಲಿಂ ದ್ವೇಷಿ ಎಂದು ಜನಜನಿತವಾಗಿದ್ದಾರೆಂದರೆ, ಅವರೀಗ ಏನೇ ಚಮತ್ಕಾರಗಳನ್ನು ಮಾಡಿದರೂ, ಮುಸ್ಲಿಮರು ನಂಬದಷ್ಟು ದೂರಕ್ಕೆ ಸಾಗಿಯಾಗಿದೆ. ಅಲ್ಲದೇ, `ಹಿಂದೂ ಸಾಮ್ರಾಟ್’ ಎಂದು ಕೇಸರಿ ಕಾರ್ಯಕರ್ತರ ನಡುವೆ ಮೋದಿಗೆ ಸೃಷ್ಟಿಸಲಾಗಿರುವ ಇಮೇಜಿಗೂ ಇದರಿಂದ ಧಕ್ಕೆ ಬರುತ್ತದೆ. ಕೇವಲ ಬಿಹಾರದ ವಿಧಾನಸಭಾ ಚುನಾವಣೆಯ ಸಲುವಾಗಿ ಮೋದಿಯ ಹೆಸರನ್ನು ಹೀಗೆ ಫಣಕ್ಕಿಡುವ ಅನಿವಾರ್ಯತೆ ಕಾಣುವುದಿಲ್ಲ. ಹಾಗಿದ್ದರೆ ಅಸಲೀ ಕಾರಣವೇನು?
ನಿತಿನ್ ಗಡ್ಕರಿ!
ಹೌದು, ಬಿಜೆಪಿಯ ಒಳಗೆ ಆರೆಸ್ಸೆಸ್ನ ಮಟ್ಟದಲ್ಲಿ ಮೋದಿಯನ್ನು ಪ್ರಧಾನಿ ಹುದ್ದೆಯಿಂದ ಬದಲಿಸುವ ಮಾತುಗಳು ಚರ್ಚೆಯಲ್ಲಿವೆಯಂತೆ. ಅದಕ್ಕೆ, ಲೋಕಸಭಾ ಚುನಾವಣೆಯ ಹಿನ್ನಡೆ ಒಂದು ಕಾರಣವಾದರೆ, ಆರೆಸ್ಸೆಸ್ ಪ್ರಭಾವವನ್ನು ಓವರ್‍ಟೇಕ್ ಮಾಡಿ ಮೋದಿ ವರ್ತಿಸಿದ್ದು ಮತ್ತೊಂದು ಕಾರಣ. ಆರೆಸ್ಸೆಸ್ ಮತ್ತು ಮೋದಿ ನಡುವೆ ಎಲ್ಲಾ ತಿಳಿಯಾಗಿರುವಂತೆ ನಮಗೆ ಕಂಡುಬಂದರೂ, ವಾಸ್ತವ ಬೇರೆಯದೇ ಇದೆ. ಆರೆಸ್ಸೆಸ್, ಹಗಲು ಕಂಡ ಬಾವಿಗೆ ರಾತ್ರಿ ಬೀಳುವಷ್ಟು ಮುಠ್ಠಾಳ ಸಂಘಟನೆಯಲ್ಲ. ಶತಾಯಗತಾಯ ಮೋದಿಯನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಬೇಕೆಂಬುದು ಅದರ ಯತ್ನ. ಎರಡು ಮೂರು ತಿಂಗಳ ಹಿಂದೆಯೇ ಇತ್ಯರ್ಥವಾಗಬೇಕಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಈಗಲೂ ಜಟಾಪಟಿ ನಡೆಯುತ್ತಿರುವುದೇ ಇದಕ್ಕೆ ಸಾಕ್ಷಿ. ಮೋದಿ ಈಗ ಯಾವ ಎತ್ತರಕ್ಕೆ ಬೆಳೆದು ನಿಂತಿದ್ದಾರೆಂದರೆ, ಸಲೀಸಾಗಿ ಹುದ್ದೆಯಿಂದ ಕೆಳಗಿಳಿಸುವುದು ಆರೆಸ್ಸೆಸ್ಗೂ ಸಾಧ್ಯವಿಲ್ಲ; ಪಕ್ಷದ ಹಿತದೃಷ್ಟಿಯಿಂದ ಅದು ಸಾಧುವೂ ಅಲ್ಲ. ಹಾಗಾಗಿ ಹಂತಹಂತವಾಗಿ ಮೋದಿಯನ್ನು ಪಕ್ಷದೊಳಗೆ ದುರ್ಬಲಗೊಳಿಸುವ ಯತ್ನ ಜಾರಿಯಲ್ಲಿದೆ. ಇತ್ತೀಚೆಗೆ ನಡೆದ ಹರ್ಯಾಣ ಮತ್ತು ಮಹಾರಾಷ್ಟ್ರದ ಚುನಾವಣೆಗಳಲ್ಲಿ ಮೋದಿಯ ಪ್ರಚಾರ ರ್‍ಯಾಲಿಗಳ ಸಂಖ್ಯೆಯನ್ನು ಕಡಿತಗೊಳಿಸಿದ್ದು ಇದೇ ಉದ್ದೇಶದಿಂದ. ಮೋದಿಯ ವರ್ಚಸ್ಸು ಇಲ್ಲದೆಯೂ ಗೆಲ್ಲುವ ತಾಕತ್ತು ಆರೆಸ್ಸೆಸ್ಗೆ ಇದೆ ಎಂದು ಮನವರಿಕೆ ಮಾಡಿಕೊಟ್ಟು, ಮೋದಿಯನ್ನು ಪಕ್ಷದ ಚೌಕಟ್ಟಿನಲ್ಲಿ ದುರ್ಬಲಗೊಳಿಸುವುದು ಆರೆಸ್ಸೆಸ್ನ ಒಟ್ಟಾರೆ ಯೋಜನೆಯಾಗಿತ್ತು. ಅದರಲ್ಲಿ ಯಶಸ್ವಿಯೂ ಆಗಿದೆ.
ಮೋದಿಯನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುವ ಯತ್ನಗಳು ಈಗ ಒಂದು ಹಂತಕ್ಕೆ ಬಂದಿವೆ ಎನ್ನಲಾಗುತ್ತಿದೆ. ಮೋದಿಯಿಂದ ತೆರವಾಗುವ ಪ್ರಧಾನಿಯ ಜಾಗಕ್ಕೆ ನಿತಿನ್ ಗಡ್ಕರಿಯನ್ನು ಕೂರಿಸಬೇಕೆನ್ನುವುದು ಆರೆಸ್ಸೆಸ್ನ ಎಣಿಕೆ. ಅದೇ ಈಗ ಮೋದಿಯ ನಿದ್ದೆಗೆಡಿಸಿರುವುದು.
ಲೋಕಸಭಾ ಚುನಾವಣೆಯ ಫಲಿತಾಂಶ ಆರೆಸ್ಸೆಸ್ಗೆ ಒಂದು ಸಂಗತಿಯನ್ನು ಖಾತ್ರಿಪಡಿಸಿದೆ. ಅತಿಯಾದ ಹಿಂದೂತ್ವ ಮತ್ತು ವಿಪರೀತವೆನಿಸುವ ಮುಸ್ಲಿಂ ದ್ವೇಷಗಳು ಕ್ರಮೇಣ ಬಿಜೆಪಿ ಪಕ್ಷದ್ದು ಮಾತ್ರವಲ್ಲ, ಅದರ ಮಾತೃಸಂಸ್ಥೆಯಂತೆ ಕೆಲಸ ಮಾಡುತ್ತಿರುವ ಆರೆಸ್ಸೆಸ್ನ ವಿಶ್ವಾಸಾರ್ಹತೆಯನ್ನು ಜಾಗತಿಕ ಮಟ್ಟದಲ್ಲಿ ಮುಕ್ಕಾಗಿಸುತ್ತಿದೆ. ಸದ್ಯಕ್ಕೆ ಅಧಿಕಾರವಿರುವುದರಿಂದ ತತ್ಕ್ಷಣಕ್ಕೆ ಇದು ದೊಡ್ಡ ಸಂಗತಿಯಂತೆ ಕಾಣದಿರಬಹುದು. ಆದರೆ ಯಾವಾಗಲೂ ಹತ್ತು ವರ್ಷದ ಮುಂದೆ ನಿಂತು ಯೋಚಿಸುವ ಆರೆಸ್ಸೆಸ್ಗೆ ಇದರ ಹಿನ್ನಡೆಯ ಅಗಾಧತೆ ಅರ್ಥವಾಗಿದೆ. ಮೋದಿಯನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಈಗ ಅದೇ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ ಅನ್ನೋದು ಸಂಗತಿ.
ತನ್ನನ್ನು ತಾನು ಸೆಕ್ಯುಲರ್ ಸಂಘಟನೆಯಾಗಿ ಪ್ರಪೋಸ್ ಮಾಡಿಕೊಳ್ಳುವುದು ಆರೆಸ್ಸೆಸ್ಗೆ ಸಾಧ್ಯವೂ ಇಲ್ಲ ಮತ್ತು ಇಷ್ಟವೂ ಇಲ್ಲದ ಸಂಗತಿ. ಹಾಗಾಗಿ ಮೋದಿಯ ತಲೆದಂಡದ ಮೂಲಕ ತನಗೆ ಮೆತ್ತಿರುವ ಅತಿಕೋಮುವಾದದ ಕೊಳೆಯನ್ನು ಮರೆಮಾಚಿಕೊಳ್ಳುವ ಯೋಜನೆ ಆರೆಸ್ಸೆಸ್ನದ್ದು. ಮೋದಿಯನ್ನು ಪಕ್ಕಕ್ಕೆ ಸರಿದಾಕ್ಷಣ ತಕ್ಕಮಟ್ಟಿಗಾದರೂ ತನ್ನ ಕಮ್ಯುನಲ್ ಉಗ್ರರೂಪವನ್ನು ಮುಚ್ಚಿಟ್ಟುಕೊಳ್ಳಬಹುದೆನ್ನುವುದು ಅದರ ಲೆಕ್ಕಾಚಾರ ಆಗಿರಬಹುದು. ಮೋದಿಯನ್ನು ಪಕ್ಕಕ್ಕಿಟ್ಟ ಮಾತ್ರಕ್ಕೆ ಅದು ಸಾಧ್ಯವಾಗಿಬಿಡುತ್ತಾ?
ಖಂಡಿತ ಇಲ್ಲ. ಆ ಜಾಗಕ್ಕೆ ಬಂದು ಕೂರುವ ವ್ಯಕ್ತಿ ಮೋದಿಗೆ ತದ್ವಿರುದ್ಧವಲ್ಲದಿದ್ದರೂ ತುಸುವಾದರೂ ಸೌಮ್ಯ, ಸ್ವೀಕಾರಾರ್ಹ ವ್ಯಕ್ತಿಯಾಗಿದ್ದಾಗ ಅದು ಸುಲಭವಾಗುತ್ತದೆ. ನಿತಿನ್ ಗಡ್ಕರಿ, ಮೋದಿಯಷ್ಟು ಕಟು ಹಿಂದೂತ್ವವಾದಿಯಲ್ಲ. ಮುಸ್ಲಿಂ ದ್ವೇಷಿಯಾಗಿ ಘಂಟಾಘೋಷವಾಗಿ ತೋರ್ಪಡಿಸಿಕೊಂಡಿಲ್ಲ. ಅಲ್ಲದೇ, ಕೆಲವೊಂದು ವಿರೋಧ ಪಕ್ಷಗಳೊಟ್ಟಿಗೂ ಆತ್ಮೀಯ ನಂಟು ಇಟ್ಟುಕೊಂಡ `ಅಂದರಿಕಿ ಮಂಚಿವಾಡು’ ಇಮೇಜಿನ ವ್ಯಕ್ತಿ. ಮುಖ್ಯವಾಗಿ, ಆರೆಸ್ಸೆಸ್ನ ವಿಧೇಯ ವಿದ್ಯಾರ್ಥಿ!
ಮೋದಿಯ ಪದಚ್ಯುತಿಯ ವೇಳೆಗೆ ಗಡ್ಕರಿಯ ಸ್ಯೂಡೋ-ಸೆಕ್ಯುಲರ್ ಇಮೇಜನ್ನು ಇನ್ನಷ್ಟು ಮೆದುಗೊಳಿಸುವುದು ಆರೆಸ್ಸೆಸ್ನ ಯೋಜನೆ. ಇತ್ತೀಚೆಗೆ ಗಡ್ಕರಿ ಆಡುತ್ತಿರುವ ಮಾತುಗಳೇ ಇದಕ್ಕೆ ಸಾಕ್ಷಿ. ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ, ‘ಯಾರಾದರೂ ನನ್ನ ಬಳಿಯ ಜಾತಿಯ ವಿಚಾರ ಮಾತಾಡಲು ಬಂದರೆ, ಅವರನ್ನು ಒದ್ದೋಡಿಸುತ್ತೇನೆ. ಜಾತೀಯತೆ ನಿರ್ಮೂಲವಾಗಬೇಕು’ ಎಂದು ಗಡ್ಕರಿ ಹೇಳಿದ್ದಾರೆ. ಶ್ರೇಣೀಕೃತ ಜಾತಿವ್ಯವಸ್ಥೆಯನ್ನು ಒಪ್ಪುವ ಮನುವಾದ ಪ್ರಣೀತ ಆರೆಸ್ಸೆಸ್ನ ಸಿಪಾಯಿಯಾಗಿ ಗಡ್ಕರಿ ಈಗ ಇಂಥಾ ಮಾತಾಡುತ್ತಾರೆಂದರೆ ಅದನ್ನು ಸಹಜವೆಂದು ಪರಿಗಣಿಸಲಾಗದು. ಅಲ್ಲದೇ, “ಮುಸ್ಲಿಂ ಸಮುದಾಯ ಶಿಕ್ಷಣದಲ್ಲಿ ತುಂಬಾ ಹಿಂದುಳಿದಿದ್ದು ಅವರ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ. ಈಗಲೂ ಪಾಪಾ, ಮುಸ್ಲಿಮರು ಪಂಕ್ಚರ್ ಅಂಗಡಿ, ಗುಜರಿ ಶಾಪ್, ಪಾನ್ ಅಂಗಡಿ, ಟ್ರಕ್ ಡ್ರೈವಿಂಗ್, ಚಹಾ ಅಂಗಡಿಯಂತಹ ಕೆಳಹಂತದ ಕೆಲಸಗಳನ್ನೇ ಮಾಡಿಕೊಂಡು ಬದುಕುತ್ತಿದ್ದಾರೆ. ಅವರಲ್ಲೂ ಡಾಕ್ಟರ್, ಎಂಜಿನಿಯರ್, ವಿಜ್ಞಾನಿಗಳಾಗಬೇಕು. ಆಗ ಸಮುದಾಯ ಏಳ್ಗೆಯಾಗುತ್ತದೆ” ಎಂಬ ಹೇಳಿಕೆ ನೀಡಿದ್ದರು. ಇದು ಕೂಡಾ ಆರೆಸ್ಸೆಸ್ ಐಡಿಯಾಲಜಿಗೆ ಒಗ್ಗುವಂತಹ ಮಾತಲ್ಲ. ಆದರೂ ಗಡ್ಕರಿ ಮೇಲಿಂದ ಮೇಲೆ ಇಂತಹ ಕಾಳಜಿಯ, ಸೆಕ್ಯುಲರ್ ಸೋಗಿನ ಮಾತುಗಳನ್ನಾಡಲು ಶುರು ಮಾಡಿದ್ದಾರೆ.
ಯಾವಾಗ ತನ್ನ ಉಗ್ರ ಹಿಂದೂತ್ವದ ಮತ್ತು ಮುಸ್ಲಿಂ ದ್ವೇಷಿ ಇಮೇಜನ್ನೇ ಅಸ್ತ್ರ ಮಾಡಿಕೊಂಡು, ತನ್ನ ತಲೆದಂಡಕ್ಕೆ ಆರೆಸ್ಸೆಸ್ ಮುಂದಾಗಿರುವುದು ತಿಳಿಯಿತೋ ಆಗ ಮೋದಿ ಕೂಡಾ ತಮ್ಮ ಸ್ಟ್ರಾಟಜಿಯನ್ನು ತುಸು ಬದಲಿಸಿಕೊಂಡಿದ್ದಾರೆ. ಗಡ್ಕರಿಯಂತೆ ತಾನೂ, ಸ್ಯೂಡೋ-ಸೆಕ್ಯುಲರ್ ಆಗಲು ಯತ್ನಿಸುತ್ತಿದ್ದಾರೆ. ಅದರ ಭಾಗವೇ ಈ ಸೌಕತ್-ಎ-ಮೋದಿ ಗಿಫ್ಟು ಆಗಿರಬಹುದು! ಗಡ್ಕರಿಯಿಂದ ಬಂದೊದಗಿರುವ ಆತಂಕವನ್ನು ದೂರ ಮಾಡಿಕೊಳ್ಳುವ ಕೊನೇಕ್ಷಣದ ಯತ್ನ!
ತನ್ನ ತಂತ್ರಕ್ಕೆ ಪ್ರತಿತಂತ್ರ ಹೆಣೆಯುತ್ತಿರುವ ಮೋದಿಯ ಈ ಗಿಫ್ಟ್ ಯೋಜನೆಯನ್ನು ಆರೆಸ್ಸೆಸ್ ತಡೆಯಬಹುದಿತ್ತಲ್ಲವೇ? ಇಲ್ಲೇ ಇರೋದು ಆರೆಸ್ಸೆಸ್ನ ಚಾಲ್ಬಾಜಿ…. ಮೋದಿ ಹಿಂದೂ ಸಾಮ್ರಾಟನಾಗುವ ಭರಾಟೆಯಲ್ಲಿ, ಈಗಾಗಲೇ ಅದೆಂತಹ ಕಟು ಮುಸ್ಲಿಂ ವಿರೋಧಿಯಾಗಿ ದಾಖಲಾಗಿದ್ದಾರೆಂದರೆ, ಅವರೀಗ ಮುಸ್ಲೀಮರ ಪರವಾಗಿ ಏನೇ ಮಾಡಿದರೂ, ಅದನ್ನು ಮುಸ್ಲಿಂ ಸಮುದಾಯ ನಂಬುವುದಿಲ್ಲ ಅನ್ನೋದು ಸಂಘ ಪರಿವಾರಕ್ಕೆ ಗೊತ್ತು. ಹಾಗಾಗಿ ಮೋದಿಯ ಇಮೇಜಿನಲ್ಲಿ ಈ ಗಿಫ್ಟಿನಿಂದ ಯಾವ ಬದಲಾವಣೆಯೂ ಸಾಧ್ಯವಿಲ್ಲ; ಬದಲಿಗೆ, ಕಮ್ಯುನಲ್ ಇಮೇಜನ್ನು ಮರೆಮಾಡಿಕೊಳ್ಳುವ ತನ್ನ ಯತ್ನಕ್ಕೆ ಇದು ಅಳಿಲುಸೇವೆ ಒದಗಿಸುತ್ತದೆ ಅನ್ನೋದೂ ಮನವರಿಕೆಯಾಗಿದೆ. ಹಾಗಾಗಿಯೇ ಆಕ್ಷೇಪಣೆ ವ್ಯಕ್ತಪಡಿಸಿಲ್ಲ. ಈಗಾಗಲೇ ಕೆಟ್ಟಿರುವ ಮೋದಿಯ ಹೆಸರು, ನಗೆಪಾಟಲಿಗೆ ಈಡಾಗುತ್ತೆ ಮತ್ತು ಅದರಿಂದ ತನಗೆ ಅನುಕೂಲವಾಗುತ್ತದೆ ಎಂದರೆ ಆರೆಸ್ಸೆಸ್ ಏಕೆ ಅಡ್ಡಿಪಡಿಸುತ್ತೆ.
ಹಾಗಂತ ಸಲೀಸಾಗಿ ಈ ಗಿಫ್ಟ್ ಯೋಜನೆಗೆ ಸಮ್ಮತಿ ನೀಡಿಲ್ಲ. ಆರಂಭದಲ್ಲಿ ಕೇಂದ್ರ ಸರ್ಕಾರದ ವತಿಯಿಂದಲೇ ಈ ಗಿಫ್ಟು ನೀಡಲು ಮೋದಿ ಯೋಚಿಸಿದ್ದರಂತೆ. ಹಾಗೇನಾದರೂ ಮಾಡಿದಲ್ಲಿ, ಇದು ವಿವಾದವಾಗುವ ಸಾಧ್ಯತೆ ಇದೆ ಮತ್ತು ಸರ್ಕಾರದ ಚುಕ್ಕಾಣಿ ಹಿಡಿದಿರುವ ಮೋದಿಗೆ ಸಂಪೂರ್ಣ ಕ್ರೆಡಿಟ್ಟು ಸಂದಾಯವಾಗುವ ಸಾಧ್ಯತೆಯಿದೆ ಎಂದರಿತ ಆರೆಸ್ಸೆಸ್, ಪಕ್ಷದ ವತಿಯಿಂದ ನೀಡುವಂತೆ ತಾಕೀತು ಮಾಡಿತು ಎನ್ನಲಾಗುತ್ತಿದೆ. ಮೋದಿ ಮುಸ್ಲಿಂ ದ್ವೇಷಿಯೇ ಹೊರತು, ಬಿಜೆಪಿ ಪಕ್ಷವಲ್ಲ ಎಂಬ ಕ್ಷೀಣ ಸಂದೇಶವನ್ನು ಈ ಮೂಲಕ ರವಾನಿಸಬಹುದೆನ್ನುವುದು ಆರೆಸ್ಸೆಸ್ನ ಲೆಕ್ಕಾಚಾರವಾಗಿರಬಹುದು. ಆದಾಗ್ಯೂ ಗಿಫ್ಟ್ನ ಯೋಜನೆಯಿಂದ `ಮೋದಿ’ ಹೆಸರನ್ನು ಅಳಿಸಲು ಆರೆಸ್ಸೆಸ್ಗೆ ಸಾಧ್ಯವಾಗಿಲ್ಲ. ಮೋದಿಯ ಹೆಸರೇ ಇಲ್ಲವಾದ ಮೇಲೆ ಯಾವ ಉದ್ದೇಶದಿಂದ ಮೋದಿ ಈ ತಂತ್ರ ರೂಪಿಸಿದ್ದಾರೋ ಅದೇ ಈಡೇರಿದಂತೆ ಆಗುವುದಿಲ್ಲ. ಹಾಗಾಗಿ ಒತ್ತಾಯ ಮಾಡಿರಬಹುದು. ಮೋದಿಯನ್ನು ತೀರಾ ಏಕಾಏಕಿ ಎದುರುಹಾಕಿಕೊಳ್ಳುವುದು ಬೇಡವೆಂದು ಅವರ ಒಂದು ಮನವಿಗೆ ಒಪ್ಪಿರಬಹುದು. ಒಂದು ಬಿಟ್ಟುಕೊಟ್ಟು, ಮತ್ತೊಂದು ಪಡೆದಂತೆ. ಅಷ್ಟಕ್ಕೂ ನೇರಾನೇರಾ ಸಂಘರ್ಷಕ್ಕಿಳಿಯುವುದು ಆರೆಸ್ಸೆಸ್ನ ಲಕ್ಷಣವಲ್ಲ….. ದಾರದಲ್ಲಿ ಕುಯ್ಯೋದು ಅಂದ್ರೆ ಹೀಗೇ ಅಲ್ಲವಾ?
– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು




