ಮಕ್ಕಳ ಶೈಕ್ಷಣಿಕ ಹಿತದೃಷ್ಟಿಗೆ ಅಗತ್ಯ ನೂತನ ಶಿಕ್ಷಣ ನೀತಿ ಜಾರಿ: ಮಧು ಬಂಗಾರಪ್ಪ

3 years ago

#Implementation #nep #necessary #educational #interest #children #MadhuBangarappa

ಬೆಂಗಳೂರು: ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದಾಗಿ ರಾಜ್ಯಕ್ಕೆ ಅಗತ್ಯವಾದಂತಹ ನೂತನ ಶಿಕ್ಷಣ ನೀತಿಯನ್ನು ರೂಪಿಸುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಹಿಂದೆ ತೀವ್ರ ವಿರೋಧದ ನಡುವೆಯೂ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ನೂತನ ಶಿಕ್ಷಣ ನೀತಿಯನ್ನು ಜಾರಿ ಮಾಡಿದೆ. ಈ ಮೂಲಕ ಚರ್ಚೆಗೆ ಅವಕಾಶ ಮಾಡಿಕೊಟ್ಟಿರುವುದು ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡುತ್ತೇವೆ ಎಂದು ವ್ಯಾಖ್ಯಾನಿಸುವುದು ಅನಗತ್ಯ. ನಮ್ಮ ಮಕ್ಕಳ ಶಿಕ್ಷಣ ವ್ಯವಸ್ಥೆ ನಮ್ಮ ಕೈಯಲ್ಲಿರಬೇಕು. ಅದಕ್ಕೆ ಪೂರಕವಾಗಿ ಒಂದಿಷ್ಟು ಮಾರ್ಪಾಡುಗಳನ್ನು ಮಾಡಲಾಗುವುದು. ಈ ನಿಟ್ಟಿನಲ್ಲಿ ನಾವು ಚುನಾವಣೆಯ ವೇಳೆಯಲ್ಲೇ ಭರವಸೆ ನೀಡಿದಂತೆ ರಾಜ್ಯಕ್ಕೆ ಅಗತ್ಯವಾದಂತಹ ಶಿಕ್ಷಣ ನೀತಿಯನ್ನು ಘೋಷಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ರಾಜ್ಯಕ್ಕೆ ಪೂರಕವಾದ ಶಿಕ್ಷಣ ನೀತಿ ರೂಪಿಸುವ ಸಲುವಾಗಿ ಆಗಸ್ಟ್ 2 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉನ್ನತ ಶಿಕ್ಷಣ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವರ ಸಭೆ ನಡೆಸಬೇಕಿತ್ತು. ಆದರೆ ಅಂದು ಮುಖ್ಯಮಂತ್ರಿಯವರು ದೆಹಲಿ ಪ್ರವಾಸ ಕೈಗೊಳ್ಳುವುದರಿಂದ ಮುಂದೊಂದು ದಿನ ಸಭೆ ನಡೆಸಲಾಗುವುದು ಎಂದರು.

ನಾವು ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಪಠ್ಯ ಪರಿಷ್ಕರಣೆ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಹಲವಾರು ವಿವಾದಗಳನ್ನು, ಚರ್ಚೆಗಳನ್ನು ಹುಟ್ಟುಹಾಕಿದ್ದೇ ಬಿಜೆಪಿಯವರು. ನಾವು ಶಿಕ್ಷಣದಲ್ಲಿ ಪಕ್ಷ, ರಾಜಕೀಯ, ಸಿದ್ದಾಂತಗಳನ್ನು ನೋಡುವುದಿಲ್ಲ. ನಮ್ಮ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವಂತಹ ಶಿಕ್ಷಣ ನೀಡುವುದಷ್ಟೇ ನಮ್ಮ ಆದ್ಯತೆ ಎಂದು ತಿಳಿಸಿದರು.

ಶಿಕ್ಷಣ ನೀತಿ ಹಾಗೂ ಪಠ್ಯ ಪರಿಷ್ಕರಣೆ ಬಗ್ಗೆ ಬಿಜೆಪಿಯವರು ಮಾಡಿದ ತಪ್ಪುಗಳನ್ನು ನಾವು ಸರಿಪಡಿಸುತ್ತೇವೆ. ಈ ವಿಷಯದಲ್ಲಿ ಚರ್ಚೆ ಮಾಡುವವರು ಮಾಡುತ್ತಲೇ ಇರಲಿ, ಅವರಿಗೆ 5 ವರ್ಷಗಳ ಕಾಲಾವಾಕಾಶವಿದೆ. ಜೊತೆಗೆ ಮತ್ತೊಂದು ಪಕ್ಷವೂ ಸೇರಿಕೊಂಡಿದೆ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಮಕ್ಕಳ ಭವಿಷ್ಯ ರೂಪಿಸುವುದು ನಮ್ಮ ಉದ್ದೇಶ. ಅದಕ್ಕನುಗುಣವಾಗಿ ನಡೆದುಕೊಳ್ಳುತ್ತೇವೆ ಎಂದರು.

Leave a Reply