ಆಗಸ್ಟ್ 2ರಂದು ದೆಹಲಿಯಲ್ಲಿ ಎಲ್ಲ ಸಚಿವರ ಸಭೆ

3 years ago

#meeting #ministers #Delhi #August #kpcc #congress

ಬೆಂಗಳೂರು: ರಾಜ್ಯ ಕಾಂಗ್ರೆಸ್ನ ಒಳ ಬೇಗುದಿಯನ್ನು ಶಮನ ಮಾಡಲು ಕಾಂಗ್ರೆಸ್ ಹೈಕಮಾಂಡ್ ಆ. 2 ರಂದು ಎಲ್ಲ ಸಚಿವರ ಸಭೆ ಕರೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲ ಸಚಿವರುಗಳಿಗೂ ದೆಹಲಿಗೆ ಬಂದು ಸಭೆಯಲ್ಲಿ ಪಾಲ್ಗೊಳ್ಳುವಂತೆ ವರಿಷ್ಠರು ಸಂದೇಶ ಕಳುಹಿಸಿದ್ದಾರೆ.

ಕೆಲ ಸಚಿವರ ಕಾರ್ಯವೈಖರಿ ವಿರುದ್ಧ ಶಾಸಕರು ಬಹಿರಂಗವಾಗಿಯೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ನಿನ್ನೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿ ಶಾಸಕರ ಅಸಮಾಧಾನವನ್ನು ತಣಿಸುವ ಪ್ರಯತ್ನ ಮಾಡಿ ಶಾಸಕರು ಹಾಗೂ ಸಚಿವರುಗಳಿಬ್ಬರಿಗೂ ಕೆಲ ಕಿವಿಮಾತನ್ನು ಹೇಳಿದ್ದ ಬೆನ್ನಲ್ಲೆ ಹೈಕಮಾಂಡ್ ಆ. ೨ರಂದು ದೆಹಲಿಯಲ್ಲಿ ರಾಜ್ಯನಾಯಕರ ಸಭೆ ನಿಗದಿ ಮಾಡಿದೆ.

ಈ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ಗಾಂಧಿ ಸೇರಿದಂತೆ ಹಲವು ಹಿರಿಯ ನಾಯಕರು ಭಾಗಿಯಾಗಿ ಸಚಿವರುಗಳಿಗೆ ನೀತಿ ಪಾಠವನ್ನು ಹೇಳಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ತಿಂಗಳಾಗುತ್ತಿದ್ದಂತೆಯೇ ಪಕ್ಷದೊಳಗೆ ಅಸಮಾಧಾನ ಹೊಗೆಯಾಡುತ್ತಿರುವುದನ್ನು ಗಂಭೀರವಾಗಿ ತೆಗೆದುಕೊಂಡಿರುವ ಹೈಕಮಾಂಡ್, ಎಲ್ಲದ್ದಕ್ಕೂ ಮದ್ದು ಅರೆಯಲು ಈ ಸಭೆಯನ್ನು ಕರೆದಿದೆ.

ಶಾಸಕರ ಅಸಮಾಧಾನ, ಸಚಿವರುಗಳ ನಡುವಿನ ಸಮನ್ವಯ ಕೊರತೆ ಎಲ್ಲದರ ಬಗ್ಗೆಯೂ ಚರ್ಚೆಗಳಾಗಲಿದ್ದು, ಎಲ್ಲ ಅಸಮಾಧಾನಗಳಿಗೂ ಹೈಕಮಾಂಡ್ ಸೂಕ್ತ ಪರಿಹಾರವನ್ನು ಸೂಚಿಸಲಿದೆ. ಹಾಗೆಯೇ, ಆಡಳಿತ ಚುರುಕಿಗೆ ಏನೆಲ್ಲ ಮಾಡಬೇಕು ಎಂಬ ಬಗ್ಗೆಯೂ ಸಲಹೆಗಳನ್ನು ನೀಡಲಿದೆ ಎಂದು ಹೇಳಲಾಗಿದೆ.

ಲೋಕಸಭಾ ಚುನಾವಣೆ ಸಚಿವರುಗಳಿಗೆ ಜವಾಬ್ದಾರಿ ನಿಗದಿ, ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಮುಖ್ಯಮಂತ್ರಿಯಾದಿಯಾಗಿ ಎಲ್ಲ ಸಚಿವರ ಸಭೆ ನಡೆಸುತ್ತಿದ್ದು, ಈ ಸಭೆಯಲ್ಲಿ ರಾಜ್ಯದ ರಾಜಕೀಯ ವಿದ್ಯಮಾನಗಳ ಜತೆಗೆ ಮುಂದಿನ ಲೋಕಸಭಾ ಚುನಾವಣೆ ಸಂಬಂಧವೂ ಚರ್ಚೆಗಳಾಗಲಿದ್ದು, ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಲು ಕೆಲ ಸಚಿವರುಗಳಿಗೆ ಜವಾಬ್ದಾರಿಗಳನ್ನು ಹೈಕಮಾಂಡ್ ನೀಡಲಿದೆ ಎಂದು ಕಾಂಗ್ರೆಸ್ನ ಮೂಲಗಳು ಹೇಳಿವೆ.

ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣವಿದ್ದು, ಅದನ್ನು ಲೋಕಸಭಾ ಚುನಾವಣೆವರೆಗೂ ಕಾಯ್ದುಕೊಂಡು ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವತ್ತ ಚಿತ್ತ ಹರಿಸಿ ಎಂದು ಹೈಕಮಾಂಡ್ ಈ ಸಭೆಯಲ್ಲಿ ಸಚಿವರುಗಳಿಗೆ ಕಿವಿಮಾತು ಹೇಳಲಿದ್ದು, ಯಾವುದೇ ಅಸಮಾಧಾನ, ಅತೃಪ್ತಿಗಳಿಗೆ ಅವಕಾಶವಿಲ್ಲದಂತೆ ಆಡಳಿತ ನಡೆಸಿ ಎಂಬ ಸಲಹೆಯನ್ನು ನೀಡಲಿದೆ ಎಂದು ಮೂಲಗಳು ವಿವರಿಸಿದೆ.

ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ಅಧಿಕಾರದ ಗದ್ದುಗೇರಿರುವ ಕಾಂಗ್ರೆಸ್ ಪಕ್ಷಕ್ಕೆ ಸ್ವಪಕ್ಷೀಯ ನಾಯಕರ ಹೇಳಿಕೆಯಿಂದಲೇ ಮುಜುಗರವಾಗುತ್ತಿದ್ದು, ಬಿ.ಕೆ ಹರಿಪ್ರಸಾದ್ ಸೇರಿದಂತೆ ಕೆಲ ನಾಯಕರುಗಳ ಹೇಳಿಕೆಗಳು ಸಭೆಯಲ್ಲಿ ಚರ್ಚೆಗಳಾಗಲಿವೆ ಎಂದು ಹೇಳಲಾಗಿದೆ.

ಎಲ್ಲ ನಾಯಕರು ಹಾಗೂ ಶಾಸಕರ ನಿರೀಕ್ಷೆಗೆ ತಕ್ಕಂತೆ ಕೆಲಸಮಾಡಿ ಲೋಕಸಭಾ ಚುನಾವಣೆಯ ಹೊತ್ತಿಗೆ ಸರ್ಕಾರದ ವರ್ಚಸ್ಸನ್ನು ಹೆಚ್ಚಿಸುವತ್ತ ಗಮನಕೊಡಿ ಎಂದು ವರಿಷ್ಠರು ಸಚಿವರುಗಳಿಗೆ ನೀತಿಪಾಠ ಹೇಳಲಿದ್ದಾರೆ.

Leave a Reply