ಆಪರೇಷನ್ ಕಮಲದ ಬಗ್ಗೆ ದೂರು ಕೊಟ್ಟರೆ ತನಿಖೆ ಮಾಡುತ್ತೇವೆ: ಡಾ.ಜಿ.ಪರಮೇಶ್ವರ್

2 years ago

#complain #OperationKamal #investigate #GParameshwar

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ತಿರಗೊಳಿಸಲು ಬಿಜೆಪಿ ಪ್ರಯತ್ನ ನಡೆಸಿದೆ ಎಂಬ ಆರೋಪಗಳ ಬೆನ್ನಲ್ಲೇ, ಆಪರೇಷನ್ ಕಮಲದ ಬಗ್ಗೆ ಯಾರಾದರೂ ದೂರು ಕೊಟ್ಟರೆ ತನಿಖೆ ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತಂತೆ ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ, ಯಾರಾದರೂ ದೂರು ಕೊಟ್ಟರೆ ತನಿಖೆಗೆ ಆದೇಶಿಸುತ್ತೇನೆ.ಆದರೆ, ದೂರು ಖಚಿತವಾಗಿರಬೇಕು ಎಂದರು.

ಬಿಜೆಪಿಯವರು ಟೀಕೆ ಮಾಡಿಕೊಂಡು ಇರಲಿ, ನಾವು ನಮ್ಮ ಆಡಳಿತ ನಾವು ಮಾಡುತ್ತೇವೆ, ಜನ ಸಂತೋಷವಾಗಿದ್ದಾರೆ. ಜನರಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ಜನ ಎಲ್ಲಾದರೂ ಪ್ರತಿಭಟನೆ ಮಾಡ್ತಿದ್ದಾರಾ? ಬಿಜೆಪಿಯವರೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮೊದಲು ಅವರಲ್ಲಿ ಇರುವ ಒಳ ಜಗಳವನ್ನು ಸರಿ ಮಾಡಿಕೊಳ್ಳಲಿ. ರಾಜ್ಯಧ್ಯಕ್ಷರನ್ನ ಮೊದಲು ಆಯ್ಕೆ ಮಾಡಲಿ. ವಿರೋಧ ಪಕ್ಷ ನಾಯಕನನ್ನ ಆಯ್ಕೆ ಮಾಡಲಿ ಎಂದು ಲೇವಡಿ ಮಾಡಿದರು.

ನಮ್ಮ ಪಕ್ಷದ ಬಗ್ಗೆ ಬಿಜೆಪಿಯವರು ಮಾತನಾಡುತ್ತಾರೆ. ಬಣಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಆದರೆ ನಾವು ಬಿಜೆಪಿಯವರು ಮಾತುಗಳಿಗೆ ಪ್ರಾಮುಖ್ಯತೆ ಕೊಡುವುದಿಲ್ಲ. ನಮ್ಮ ಮನೆಯ ಭೋಜನಕೂಟದಲ್ಲಿ ಏನಾದರೂ ಚರ್ಚೆಯಾಗಲಿ, ಅದು ಬಿಜೆಪಿಯವರಿಗೆ ಏಕೆ ಬೇಕು ಎಂದು ಪ್ರಶ್ನಿಸಿದರು.

ನಮ್ಮ ಮನೆಯ ಭೋಜನಕೂಟ ಕುರಿತು ಬಿಜೆಪಿಯವರು ಅನೇಕ ವ್ಯಾಖ್ಯಾನಗಳ ಮೂಲಕ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿ ಒಡೆದ ಬಾಗಿಲು, ಮೂರು, ನಾಲ್ಕು ಬಾಗಿಲು ಎಂದು ಹೇಳುತ್ತಾರೆ. ನಾವು, ಯಡಿಯೂರಪ್ಪ ಮನೆಯಲ್ಲಿ ಏನಾಗುತ್ತೆ, ಬೊಮ್ಮಾಯಿ ಮನೆಯಲ್ಲಿ ಏನಾಗುತ್ತದೆ ಎಂದು ನಾವು ಕೇಳ್ಳುತ್ತೇವೆಯೇ. ನಾವು ಸುಮ್ಮನಿದ್ದೇವೆ ಎಂದು ಏನು ಬೇಕಾದರೂ ತಿರುಗಳಿಲ್ಲದಂತೆ ಮಾತನಾಡಿದರೆ ಜನ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವ್ಯವಸ್ಥೆಯಲ್ಲಿ ಬದಲಾವಣೆ ತರುತ್ತೇವೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಿಗಮ-ಮಂಡಳಿಗಳ ನೇಮಕಾತಿ ಬಗ್ಗೆ ಮುಖ್ಯಮಂತ್ರಿಯವರು ಹೇಳಿದ್ದಾರೆ. ಇಲ್ಲಿ ಯಾರನ್ನೂ ನಿರ್ಲಕ್ಷ್ಯಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಮುಂದಿನ ದಿನಗಳಲ್ಲಿ ನಿಗಮ ಮಂಡಳಿಗಳ ಮೂಲಕ ಅವರನ್ನು ಸರ್ಕಾರದ ಭಾಗವಾಗಿ ಮಾಡಿಕೊಳ್ಳುತ್ತೇವೆ. ಪಕ್ಷಕ್ಕಾಗಿ ದುಡಿದವರು, ಹತ್ತಾರು ವರ್ಷ ಕೆಲಸ ಮಾಡಿದವರನ್ನು ಪರಿಗಣಿಸಲಾಗುವುದು. ಈ ಕುರಿತು ಪಕ್ಷದ ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದಿದ್ದು, ನೇಮಕಗೊಳ್ಳುವವರ ಮಾಹಿತಿ ಪಡೆಯಲಾಗುತ್ತಿದೆ ಎಂದರು.

Leave a Reply