ಒಂದು ಸಾವಿರ ಕೋಟಿ ರೂಪಾಯಿ ತಂದು ಆಪರೇಷನ್ ಕಮಲ ನಡೆಸಲು ಬಳಕೆ ಮಾಡುತ್ತಿದ್ದಾರೆ: ಪ್ರಿಯಾಂಕ್ ಖರ್ಗೆ

2 years ago

#crore #rupees #used #run #OperationKamala #PriyankKharge

ಬೆಂಗಳೂರು: ಹೈಕಮಾಂಡ್‍ನಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವವರು ರಾಜ್ಯ ಬಿಜೆಪಿ ನಾಯಕರು ದೆಹಲಿಗೆ ಹೋಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈಕಾಲು ಹಿಡಿದು ಒಂದು ಸಾವಿರ ಕೋಟಿ ರೂಪಾಯಿ ತಂದು ಅದನ್ನು ಇಲ್ಲಿ ಆಪರೇಷನ್ ಕಮಲ ನಡೆಸಲು ಬಳಕೆ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರವಿಲ್ಲದೆ ಹತಾಶರಾಗಿರುವ ಅವರು ಹೇಗಾದರೂ ಮಾಡಿ ಕಾಂಗ್ರೆಸ್ ಸರ್ಕಾರ ಅಸ್ತಿರಗೊಳಿಸಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇದೆಂದಿಗೂ ಫಲಿಸುವುದಿಲ್ಲ ಎಂದರು.

ಬಿಜೆಪಿಯವರು ಭ್ರಮೆಯಲ್ಲಿದ್ದಾರೆ. ಕೇಂದ್ರದ ಬಿಜೆಪಿ ನಾಯಕರು ರಾಜ್ಯದ ಬಿಜೆಪಿಯವರಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಹೀಗಾಗಿ ಅಸ್ತಿತ್ವದಲ್ಲಿ ಇರಬೇಕು ಎಂದು ತಲೆ ಬುಡ ಇಲ್ಲದ ಹೇಳಿಕೆ ನೀಡುತ್ತಿದ್ದಾರೆ. ಆಪರೇಷನ್ ಕಮಲ ನಡೆಸಿ ರಾಜ್ಯ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಸಂಚು ನಡೆಸುತ್ತಿರುವುದು ಗುಟ್ಟೇನು ಅಲ್ಲ ಎಂದರು.

ಬಿಜೆಪಿಗೆ ಬಹುಮತ ಬರದೇ ಇರುವ ಮಹಾರಾಷ್ಟ್ರ, ಬಿಹಾರ, ಅಸ್ಸಾಂ, ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಿದ್ದರು. ರಾಜಸ್ಥಾನದಲ್ಲೂ ಪ್ರಯತ್ನ ಮಾಡಿದರು. ಕರ್ನಾಟಕದಲ್ಲೂ ಪ್ರಯತ್ನ ಮಾಡುತ್ತಿದ್ದಾರೆ. ಇದು ಬಿಜೆಪಿಯ ಸ್ಟಾಂಟರ್ಡ್ ಆಪರೇಷನ್ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಬಿಜೆಪಿ ನಾಯಕರಿಗೆ ಅವರ ಹೈಕಮಾಂಡ್ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಒಳ್ಳೆಯ ರಾಜ್ಯಾಧ್ಯಕ್ಷನನ್ನು ಮಾಡಿಲ್ಲ. ಮೇಲ್ಮನೆ, ಕೆಳಮನೆಗಳ ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡಿಕೊಟ್ಟಿಲ್ಲ. ಅದಕ್ಕಾಗಿ ಜೀವಂತ ಇದ್ದೇವೆ ಎಂದು ತೋರಿಸಿಕೊಳ್ಳಲು ಪೈಪೋಟಿ ನಡೆಸುತ್ತಿರುವರು ನಾ ಮುಂದು ತಾ ಮುಂದು ಎಂದು ಜಿದ್ದಿಗೆ ಬಿದ್ದಿದ್ದಾರೆ ಎಂದು ಹೇಳಿದರು.

ಒಂದು ಸಾವಿರ ಕೋಟಿ ರೂಪಾಯಿ ಕೊಡಿ, ಸರ್ಕಾರ ರಚನೆ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈ ಕಾಲು ಬಿದ್ದಿದ್ದಾರೆ. ಅದೇ ದುಡ್ಡು ತಂದು ಇಲ್ಲಿ ಆಪರೇಷನ್ ಕಮಲ ಆಮಿಶಕ್ಕೆ ಬಳಕೆ ಮಾಡುತ್ತಿರಬಹುದು. ಬಿಜೆಪಿಯವರು ಮೊದಲಿನಿಂದಲೂ ಇದನ್ನೇ ಅಲ್ಲವೇ ಮಾಡುತ್ತಿರುವುದು, ಅದನ್ನು ಬಿಟ್ಟು ಅವರು ಬೇರೇನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

Leave a Reply