ಬೆಂಗಳೂರು: ಬಗರ್‌ಹುಕುಂ ಅಡಿ ಇನ್ನು ಮುಂದೆ ಯಾರಿಗೂ ಯಾವುದೇ ರೀತಿಯ ಭೂಮಿ ಮಂಜೂರು ಮಾಡಬಾರದು ಎಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿರುವ ಸಂಪುಟ ಉಪ ಸಮಿತಿ ಸರ್ಕಾರಿ ಭೂಮಿ ಒತ್ತುವರಿ ವಿರುದ್ಧ ಅರಣ್ಯ ಕಾಯಿದೆ ಪ್ರಯೋಗಿಸಲು ಸಲಹೆ ಮಾಡಿದೆ.
ರಾಜ್ಯದ ಕಂದಾಯ ಭೂಮಿ ರಕ್ಷಣೆ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಲು ರಚಿಸಲಾಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ಸಂಪುಟ ಉಪ ಸಮಿತಿ ಈ ಶಿಫಾರಸು ಮಾಡಿದೆ.
ಸದ್ಯ ಬಗರ್ ಹುಕಂ ಯೋಜನೆಯಡಿ ಅಕ್ರಮ ಸಕ್ರಮಕ್ಕೆ ಸಲ್ಲಿಕೆಯಾದ ಎಲ್ಲ ಅರ್ಜಿಗಳನ್ನೂ ಸರ್ಕಾರ ಇತ್ಯರ್ಥಗೊಳಿಸಿದರೆ ಕಂದಾಯ ಭೂಮಿ ಸಂಪೂರ್ಣ ಖಾಲಿಯಾಗಲಿದೆ. ಬಹುಶಃ ಸರ್ಕಾರಿ ಯೋಜನೆಗಳಿಗೂ ಭೂಮಿ ದೊರಕದಂತಾಗಲಿದೆ ಎಂದು ಉಪ ಸಮಿತಿ ಕಳವಳ ವ್ಯಕ್ತಪಡಿಸಿದೆ.
ಕಂದಾಯ ಭೂಮಿಯನ್ನು ಅವ್ಯಾಹತವಾಗಿ ಕಬಳಿಸುವುದಕ್ಕೆ ಕಡಿವಾಣ ಹಾಕಬೇಕಿದೆ. ಇದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಬೇಕು. ಇದಕ್ಕಾಗಿ ಅರಣ್ಯ ಕಾಯ್ದೆ 1963ರ ಮಾದರಿಯಲ್ಲಿ ಕಂದಾಯ ಕಾನೂನು ರೂಪಿಸಲು ಸಲಹೆ ಮಾಡಿದೆ.
ಅರಣ್ಯ ಕಾಯಿದೆ 1963ರ ಅನ್ವಯ ಅರಣ್ಯ ಭೂಮಿ ಕಬಳಿಸಿದವರಿಗೆ ಕನಿಷ್ಠ ಒಂದು ವರ್ಷದಿಂದ ಗರಿಷ್ಠ ಎರಡು ವರ್ಷಗಳವರೆಗೆ ಶಿಕ್ಷೆ, ದಂಡ ವಿಧಿಸಲು ಅವಕಾಶವಿದೆ. ಇದನ್ನು ಕಂದಾಯ ಇಲಾಖೆಯಲ್ಲೂ ಜಾರಿಗೊಳಿಸಲು ಸಲಹೆ ಮಾಡಿದೆ. ಇಂತಹ ನಿಯಮಗಳನ್ನು ರೂಪಿಸುವ ಮೂಲಕ ಕಂದಾಯ ಭೂಮಿ ಕಬಳಿಕೆಗೆ ಸಂಪೂರ್ಣ ಕಡಿವಾಣ ಹಾಕಬಹುದು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.




