ಈ ಒಂದು ಮಾತನ್ನು ಹೇಳಿ ಮುಂದುವರೆಸುತ್ತೇನೆ. ಕುರುಬರ ಕನಕ ಗುರು ಪೀಠದ ನಾಲ್ಕೂ ಜನ ಸ್ವಾಮೀಜಿಗಳು (ಶ್ರೀ ನಿರಂಜನಾನಂದಪುರಿ, ಶ್ರೀ ಈಶ್ವರಾನಂದಪುರಿ, ಶ್ರೀ ಸಿದ್ದರಾಮಾನಂದಪುರಿ, ಶ್ರೀ ಶಿವಾನಂದಪುರಿ ಸ್ವಾಮೀಜಿಗಳು) ಕೋಮುವಾದಿಗಳಾಗಿದ್ದರೆ, ಕರ್ನಾಟಕದ ದೊಡ್ಡ ಸಮುದಾಯಗಳಲ್ಲಿ ಒಂದಾದ ಇಡೀ ಕುರುಬ ಸಮುದಾಯ ಇವತ್ತು ಕೋಮುವಾದಿ ಜನಾಂಗವಾಗಿರುತ್ತಿತ್ತು. ಕುರುಬರು ಈಗಲೂ ಕೋಮುವಾದದಿಂದ ಸಾಕಷ್ಟು ದೂರವಿದ್ದರೆ ಅದಕ್ಕೆ ಕಾರಣರೇ ಈ ನಾಲ್ವರು ಮಠಾಧೀಶರು ಹಾಗು ಮುಖ್ಯಮಂತ್ರಿ ಸಿದ್ಧರಾಮಯ್ಯನವರು. ಈ ಕಾರಣಕ್ಕೆ ನಾವೆಲ್ಲರೂ ಮೊದಲು ಈ ಐದೂ ಜನರಿಗೆ ಅಭಿನಂದನೆ ಸಲ್ಲಿಸಬೇಕು.

ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಗಳು, ಹೊಸದುರ್ಗ ತಾಲ್ಲೂಕಿನ ಸಣ್ಣಕ್ಕಿ ಬಾಗೂರು ಗ್ರಾಮದ ಪ್ರಸಿದ್ಧ ಚನ್ನಕೇಶವ ದೇವಾಲಯ ಪ್ರವೇಶದ ಕುರಿತು, ಸ್ವಾಮೀಜಿ ದೇವಾಲಯದಿಂದ ಮರಳಿದ ಬಳಿಕ ದೇವಾಲಯವನ್ನು ನೀರಿನಿಂದ ತೊಳೆದು ಸ್ವಚ್ಚ ಮಾಡಿದ್ದರಂತೆ ಎಂದು ಸಾಣೆಹಳ್ಳಿಯಲ್ಲಿ ನಡೆದ ಮೂರು ಜಿಲ್ಲೆಗಳ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ್ದು ಈಗ ರಾಜ್ಯದಾದ್ಯಂತ ದೊಡ್ಡ ಸುದ್ದಿ. ಇದರ ಬೆನ್ನಿಗೆ ಸ್ವಾಮೀಜಿ ಕೂಡಾ ‘ಬಸವಣ್ಣ ಅಂಬೇಡ್ಕರ್ ಬಾರದೆ ಹೋಗಿದ್ದರೆ ಶೋಷಿತ ಸಮುದಾಯಗಳು ಈಗಲೂ ಕೂಡ ಕತ್ತಲಲ್ಲೇ ಇರುತ್ತಿದ್ದವು’ ಎಂದು ಹೇಳಿದ್ದಾರೆ.

ಈ ಹೇಳಿಕೆಯ ಪರ ಮತ್ತು ವಿರುದ್ಧ ಚರ್ಚೆಗಳು ಶುರುವಾಗಿವೆ. ಕೆಲವರು ‘ಈ ಕನಕ ಪೀಠದ ಸ್ವಾಮೀಜಿಗೆ ದೇವಾಲಯದೊಳಗೆ ಪ್ರವೇಶಕ್ಕೆ ಅವಕಾಶ ಸಿಗದೇ ಇರೋದಕ್ಕೆ ಅಂಬೇಡ್ಕರ್, ಸಂವಿಧಾನ ಇದೆಲ್ಲಾ ನೆನಪಾಗಿದ್ದಾವೆ’ ಎಂದೂ, ಅಷ್ಟು ಅಂಬೇಡ್ಕರ್ ಸಂವಿಧಾನದ ಬಗ್ಗೆ ಮಾತನಾಡುವ ಸ್ವಾಮೀಜಿ ತಮ್ಮ ಜಾತಿಯ ವಧುವರರಿಗೆ ದಲಿತ ವಧುವರರ ಜೊತೆ ಮದುವೆ ಮಾಡಿ ತೋರಿಸಲಿ ಎಂದೂ ಸವಾಲು ಹಾಕುತ್ತಿದ್ದಾರೆ. ಇದಕ್ಕೆ ಒಂದು ಕ್ಲಾರಿಫಿಕೇಷನ್ ಕೊಡುವ ಅಗತ್ಯವಿದೆ ಅನ್ನಿಸಿತು.
ನಾನು ಈಶ್ವರಾನಂದಪುರಿ ಸ್ವಾಮೀಜಿಗಳ ಜೊತೆ ಹಲವಾರು ವೇದಿಕೆಗಳನ್ನ ಹಂಚಿಕೊಂಡಿದ್ದೇನೆ. ಸ್ವಾಮೀಜಿ ನಾಲ್ಕಾರು ವರ್ಷದ ಹಿಂದೆ ನನಗೆ ಹತ್ತು ಹಲವು ಬಾರಿ ಫೋನ್ ಕರೆ ಮಾಡಿ ಸರ್ಕಾರ ಪ್ರಕಟಿಸಿದ್ದ ಅಷ್ಟೂ ಅಂಬೇಡ್ಕರ್ ಸಂಪುಟಗಳನ್ನು ತಮ್ಮ ಮಠದ ಲೈಬ್ರರಿಗೆ ತರಿಸಿಕೊಂಡಿದ್ದಾರೆ. ಪ್ರತಿಯೊಂದು ವೇದಿಕೆಯಲ್ಲೂ ಅಸ್ಪೃಶ್ಯತೆಯ ವಿರುದ್ಧ ಕುರುಬ ಸಮಾಜವನ್ನು ಜಾಗೃತಗೊಳಿಸುತ್ತಾರೆ. ಭಾರತದ ಸಂವಿಧಾನ, ಅಂಬೇಡ್ಕರ್ ವಿಚಾರಧಾರೆಗಳ ಕುರಿತು ಮಾತನಾಡಿ ಜನರನ್ನು ಎಚ್ಚರಿಸುತ್ತಾರೆ. ಮಾಧ್ಯಮಗಳು ಶೂದ್ರ ಸ್ವಾಮೀಜಿಯು ಸಂವಿಧಾನದ ಪರ, ಶೋಷಿತರ ಪರ ಮಾತನಾಡಿದರೆ ಸುದ್ಧಿ ಮಾಡುವುದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೇ ಯಾವನಾದರೂ ಮನುವಾದಿ ಮಠದ ಸ್ವಾಮಿ ಹೂಸು ಬಿಟ್ಟರೂ ಅದು ನ್ಯಾಷನಲ್ ನ್ಯೂಸ್ ಆಗುತ್ತದೆ. ಇದೇ ಕನಕ ಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿಗಳವರು ಹಿಂದುತ್ವದ ಪರ ಮಾತನಾಡಲಿ ನೋಡಿ; ನಾಳೆಯೇ ಅವರು ರಾಜ್ಯದ ಹೀರೋ ಆಗಿಬಿಡುತ್ತಾರೆ. ಮಾಧ್ಯಮಗಳು ಅವರು ಹೋದಲ್ಲಿ ಬಂದಲ್ಲಿ ಹೇಳಿಕೆ ಪಡೆಯಲು ಮುಗಿಬೀಳುತ್ತವೆ.
ನಾನು ಅವರರೊಂದಿಗೆ ನೇರವಾಗಿ ಒಡನಾಡುವುದರಿಂದ ನನಗೆ ಗೊತ್ತಿರುವುದನ್ನ ನಿಮ್ಮ ಗಮನಕ್ಕೆ ಇಲ್ಲಿ ತರ್ತಾ ಇದ್ದೇನೆ. ಬರಿಬೇಕು ಅಂತ ಚಟಕ್ಕೆ ಬಾಯಿಗೆ ಬಂದದ್ದನ್ನು ಬರೆಯೋದನ್ನು ಕೆಲಲವರು ನಿಲ್ಲಿಸಲಿ. ಇವರೆಲ್ಲಾ ಸ್ಯಾಡಿಸ್ಟ್ ನೇಚರ್ ಇಂದ ಹೊರಗಡೆ ಬರಬೇಕು. ಒಬ್ಬ ವ್ಯಕ್ತಿ ಸಮಾಜದಲ್ಲಿ ಏನು ಕೆಲಸ ಮಾಡುತ್ತಿದ್ದಾರೆ ಎಂಬ ಪೂರ್ವಾಪರ ವಿಚಾರಗಳನ್ನು ತಿಳಿದುಕೊಳ್ಳದೆ ಬಾಯಿಗೆ ಬಂದದ್ದು ಬರೆದರೆ ಅದು ಅಂತವರ ನೈತಿಕ ದಿವಾಳಿತ ತೋರಿಸುತ್ತದೆ.
ಸ್ವಾಮೀಜಿ ದಲಿತ ಹುಡುಗ ಹುಡುಗಿಯರನ್ನು ಕುರುಬರ ಹುಡುಗ ಹುಡುಗಿಯರ ಜೊತೆ ಮದುವೆ ಮಾಡಿಸಿ ತೋರಿಸಲಿ ಎನ್ನುವುದು ನಗೆಪಾಟಲಿನ ಮಾತು. ಸಮುದಾಯದ ಯುವಕ ಯುವತಿಯರು ಯಾರನ್ನ ಮದುವೆಯಾದರೂ ಅದನ್ನು ತಡೆದ, ಆಗಬಾರದೆಂದು ಹೇಳಿದ, ಆದವರನ್ನು ಬೇರ್ಪಡಿಸಿದ ಒಂದೇ ಒಂದು ಉದಾಹರಣೆ ಇದ್ದರೆ ಟೀಕಿಸುವ ಮಹಾಶಯರು ತೋರಿಸಿಕೊಡಲಿ. ಪ್ರೀತಿ ಪ್ರೇಮ ಸಂಗಾತಿಗಳ ಆಯ್ಕೆ ಅವರವರ ಹಕ್ಕು ನೈಸರ್ಗಿಕ ವಿಚಾರವೆಂದು ನಂಬಿರುವ ನಾಲ್ಕೂ ಮಠಾಧೀಶರು ಕುರುಬ ಸಮಾಜದ ಅಂತರ್ಜಾತಿ ವಿವಾಹಿತರನ್ನು ಸಹಿಸದ ಒಂದೇ ಒಂದು ಉದಾಹರಣೆ ಇದ್ದರೆ ತಿಳಿಸಲಿ.
ಇನ್ನು “ಬಸವಣ್ಣ ಅಂಬೇಡ್ಕರ್ ಸಂವಿಧಾನ ಇದೆಲ್ಲಾ ಈ ಸ್ವಾಮೀಜಿಗೆ ಈಗ ನೆನಪಾಗಿದೆ” ಎಂದು ಆಪಾದಿಸುವವರು ಸ್ವಾಮೀಜಿಗಳ ಸ್ವಂತ ಫೇಸ್ ಬುಕ್ ಗೋಡೆಯನ್ನು ಪರಿಶೀಲಿಸಲಿ. ೨೦೨೦ನೆಯ ಸಾಲಿನಲ್ಲಿ ಅಂಬೇಡ್ಕರ್ ಜೀವನಾಧಾರಿತ ‘ಮಹಾ ನಾಯಕ’ ಧಾರಾವಾಹಿಯ ಪ್ರಸಾರವನ್ನು ಸಹಿಸದೆ ನಿರ್ದೇಶಕರ ಮೇಲೆ ಧಮ್ಕಿ ಹಾಕಿದ ಸಂವಿಧಾನ ವಿರೋದಿಗಳನ್ನು ಕುರಿತು ಸ್ವಾಮೀಜಿ ಹೀಗೆ ಬರೆದುಕೊಂಡಿದ್ದರು.

“Z ಟಿವಿ ಚಾನಲ್ ನಲ್ಲಿ ಸಂವಿದಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಾದಾರಿತ ಮಹಾನಾಯಕ ದಾರಾವಾಹಿಯು ಕರ್ನಾಟಕದಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರಸಾರವಾಗುತ್ತಿದೆ. ನಾನೂ ಕೂಡ ವೀಕ್ಷಣೆ ಮಾಡ್ತೀನಿ. ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಪ್ರಸಾರ ಮಾಡುತ್ತಿರುವ Z ವಾಹಿನಿಯ ಮುಖ್ಯಸ್ಥರಿಗೂ ಮತ್ತು ಸಿಬ್ಬಂದಿಗೆ ಅಭಿನಂದನೆಗಳು. ಈ ದಾರವಾಹಿಯನ್ನು ಕೆಲವರು ವಿರೋಧಿಸಿ ಅದನ್ನು ಪ್ರಸಾರ ಮಾಡಬಾರದು ಎಂದು ವಾಹಿನಿಯ ಮುಖ್ಯಸ್ಥರಿಗೆ ಬೆದರಿಕೆ ಕರೆ ಮಾಡುತ್ತಿರುವುದು ಅತ್ಯಂತ ಖಂಡನೀಯವಾದದ್ದು. ಅಂದು ಬಾಬಾ ಸಾಹೇಬರನ್ನು ನಿಂದಿಸಿದ ಹೊಲಸು ಮನಸ್ಸಿನವರೇ ಇಂದು ಕೂಡ ನಿಂದಿಸುತ್ತಿರುವುದು ಎಂಬುದು ಸುಸ್ಪಷ್ಟ. ಇವರೆಲ್ಲಾ ಜೀವ ವಿರೋದಿ ಮನಸ್ಥಿತಿಯುಳ್ಳವರು ಸಂವಿಧಾನ ವಿರೋಧಿಗಳು. ಸಮ ಸಮಾಜದ ವಿರೋಧಿಗಳು. ಇಂತಹ ಮನಸ್ಥಿತಿವುಳ್ಳವರಿಗೆ ನಮ್ಮ ವಿರೋಧವಿದೆ. ಆದುದರಿಂದ ವಾಹಿನಿಯ ಮುಖ್ಯಸ್ಥರು ಧೃತಿಗೆಡದೆ ಈ ಧಾರವಾಹಿಯ ಪ್ರಸಾರ ಮುಂದುವರಿಸಿ. ನಾವು ನಿಮ್ಮೊಂದಿಗೆ ಇರುತ್ತೇವೆ. ಜೈ ಭೀಮ್.”
-ಈಶ್ವರಾನಂದಪುರಿ ಸ್ವಾಮೀಜಿ, ಕನಕಗುರುಪೀಠ, ಹೊಸದುರ್ಗ.
ಶ್ರೀಗಳು ಹೀಗೆ ಮಹಾನಾಯಕನನ್ನು ಬೆಂಬಲಿಸಿ ‘ಮಹಾ ನಾಯಕ’ ಧಾರಾವಾಹಿ ನಿರ್ದೇಶಕರನ್ನು ಸಿಬ್ಬಂದಿಯನ್ನು ಬೆಂಬಲಿಸಿ ಮಾತಾನಾಡಿದ್ದರು. ಜಾತಿ ಜನಗಣತಿ ವರದಿಯನ್ನು ವಿರೋಧಿಸುತ್ತಿರುವ ಮೇಲ್ಜಾತಿಗಳ ಜನ ಪ್ರತಿನಿಧಿಗಳನ್ನು ಕುರಿತು “ಜನಗಣತಿ ವಿರೋಧ ಮಾಡುವ ಜನಪ್ರತಿನಿಧಿಗಳ ಮುಖ ಮುಲಾಜಿಲ್ಲದೇ ತಿರಸ್ಕರಿಸಿ” ಎಂದು ಕಟುವಾಗಿ ಹೇಳಿದ್ದರಲ್ಲದೆ ಶೋಷಿತ ಸಮುದಾಯಗಳ ಹಕ್ಕುಗಳ ಕುರಿತು ಮಾತನಾಡಿದ್ದರು. ಹೀಗೆ ಒಂದು ಜಾತಿಗೆ ಸೀಮಿತವಾಗದೆ ಶೋಷಿತರ ಪರ ಯಾವತ್ತೂ ದನಿಯಾಗಿದ್ದಾರೆ.
ಸಂವಿಧಾನದ ಆಶಯಗಳ ಅಡಿಯಲ್ಲಿ ಈಶ್ವರಾನಂದಪುರಿ ಸ್ವಾಮೀಜಿ ಯಾವಾಗಲೂ ಕೆಲಸ ಮಾಡುತ್ತಾ, ಕುರುಬರೊಂದಿಗೆ ಇತರೆ ಧರ್ಮದವರಾದಿಯಾಗಿ ಎಲ್ಲ ದಲಿತ ಶೂದ್ರ ಜಾತಿಗಳವರಿಗೆ ಇರುವ ಸಾಂಸ್ಕೃತಿಕ ನೆಂಟಸ್ತಿಕೆಯನ್ನು ಕುರಿತು ವೇದಿಕೆಯಲ್ಲಿ, ಭಕ್ತರ ಮನೆಯಲ್ಲಿ ಹರಟುವಾಗಲೂ ಮಾತನಾಡುತ್ತಾ ಸಮುದಾಯದಲ್ಲಿ ಇತರೆ ಸಮುದಾಯಗಳನ್ನು ಹೇಗೆ ಸಹಿಷ್ಣುತೆ ಮತ್ತು ಆದರದಿಂದ ಕರೆದುಕೊಂಡು ಹೋಗಬೇಕೆಂದೇ ತಿಳಿಹೇಳುತ್ತಾರೆ. ಇದೆನ್ನೆಲ್ಲಾ ಅವರು ಡಂಗುರ ಸಾರುವುದಿಲ್ಲ. ನಾನು ನನ್ನ ಗೆಳೆಯ ನಮ್ಮ ಶಿಕಾರಿಪುರ ತಾಲ್ಲೂಕಿನ ವೀರಶೈವ ಮಠ ಒಂದಕ್ಕೆ ಭೆಟ್ಟಿ ನೀಡಿದ್ದಾಗ ನಮ್ಮನ್ನು ಜಾತಿ ಕೇಳಿ ಕುರುಬರು ಎಂಬ ಕಾರಣಕ್ಕೆ ಒಳಗೆ ಪ್ರವೇಶಿಸಲು ಅವಕಾಶ ಕೊಡದೆ ವಾಪಸ್ ಕಳಿಸಿದ್ದರ ಬಗ್ಗೆ ಸ್ವಾಮೀಜಿಗಳಲ್ಲಿ ತಿಳಿಸಿದಾಗ ಅವರು ಹತ್ತಾರು ವೇದಿಕೆಗಳಲ್ಲಿ ಅದನ್ನು ಪ್ರಸ್ತಾಪಿಸಿ ಜಾತಿ ಅಸ್ಪೃಶ್ಯತೆ ಮಾನವ ಶೋಷಣೆ ಎಷ್ಟು ಹೀನ ಕೃತ್ಯ ಎಂಬುದನ್ನು ಜನರಿಗೆ ತಿಳಿಸುತ್ತಾ ಹೋದರು.
ಪ್ರತಿ ವೇದಿಕೆಯಲ್ಲೂ…
‘ಕುಲಕುಲ ಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ…
‘ಕುಲ ಕುಲ ಕುಲವೆನ್ನುತಿಹರು
ಆತ್ಮ ಯಾವ ಕುಲ ಜೀವ ಯಾವ ಕುಲ
ತತ್ವೇಂದ್ರಿಯಗಳ ಕುಲವ ಪೇಳಿರಯ್ಯಾ’
ಎಂಬೆರೆಡು ಕನಕ ದಾಸರ ಕೀರ್ತನೆಗಳನ್ನು ವ್ಯಾಖ್ಯಾನಿಸುವ ಕನಕ ಪೀಠದ ಅಷ್ಟೂ ಸ್ವಾಮೀಜಿಗಳಿಗೆ ಬಸವಣ್ಣ ಅಂಬೇಡ್ಕರ್ ಅಂತವರೆಲ್ಲಾ ಯಾವಾಗಲೂ ಮನಸಿನಲ್ಲಿ ಸ್ಥಾನ ಪಡೆದಿರುವ ಮಹಾ ನಾಯಕರು. ಬಾಲಿಶವಾಗಿ ‘ಅವರಿಗೆ ಬಸವಣ್ಣ, ಅಂಬೇಡ್ಕರ್, ಸಂವಿಧಾನ ಈಗ ನೆನಪಾಗಿದೆ’ ಎಂದು ಟೀಕಿಸುವುದನ್ನು ಬಿಟ್ಟು ಸ್ವಾಮೀಜಿಯವರನ್ನು ಅಸ್ಪೃಶ್ಯತೆಗೆ ಗುರಿಯಾಗಿಸಿದ ಮನುವಾದಿಗಳ ಹೇಯ ಕೃತ್ಯದ ಬಗ್ಗೆ ದನಿ ಎತ್ತಿ ಖಂಡಿಸೋಣ. ಅಂಬೇಡ್ಕರ್ ಕುರಿತು ಸ್ವಾಮೀಜಿ ತಮ್ಮ ಫೇಸ್ ಬುಕ್ಕಿನಲ್ಲಿ ಬರೆದಿದ್ದ ಲೇಖನದ ಫೋಟೋವನ್ನೂ ಇಲ್ಲಿ ಲಗತ್ತಿಸಿದ್ದೇನೆ. ಹಗುರವಾಗಿ ಮಾತನಾಡುವ ಮುನ್ನ ಯೋಚಿಸಿ ಮಾತನಾಡಿ. ಅವರ ಮಠದ ವಿದ್ಯಾ ಸಂಸ್ಥೆಗಳಲ್ಲಿ ಕುರುಬರಿಗಿಂತ ದಲಿತ ಅಲ್ಪಸಂಖ್ಯಾತ ಮತ್ತು ಅಲೆಮಾರಿಗಳ ಮಕ್ಕಳಿಗೇ ಮೊದಲ ಆದ್ಯತೆ. ಆ ಸಮುದಾಯಗಳ ಮಕ್ಕಳೇ ಹೆಚ್ಚು.
- ಸುರೇಶ ಎನ್ ಶಿಕಾರಿಪುರ, ಚಿಂತಕರು




