ಎಸ್ ಎಂ ಕೃಷ್ಣ ಬಾರದೂರಿಗೆ ಹೊರಟಿದ್ದಾರೆ..
ನಿಮ್ಮೊಂದಿಗಿನ ಕೆಲವು ನೆನಪುಗಳು….
1967- 68 ರ ಸಮಯವಿರಬೇಕು.. ನೀವು ಮೊದಲ ಬಾರಿಗೆ ‘ ಗುಡಿಸಲು’ ಗುರುತಿನಿಂದ ಮಂಡ್ಯ ಜಿಲ್ಲಾ ಎಂ ಪಿ ಚುನಾವಣೆಗೆ ನಿಂತಿದ್ರಿ..ಆಗತಾನೆ ವಿದೇಶದಿಂದ ಓದ್ಕೊಂಡು ಬಂದಿದ್ರಿ.. ಪ್ರಚಾರಕ್ಕೆ ನಮ್ಮೂರು ದೇವಲಾಪುರಕ್ಕೂ ಬರುತ್ತಿದ್ದಾಗ ನಿಮ್ಮ ನೋಡಲೆಂದೇ ಅನೇಕ ಜನ ಸೇರುತ್ತಿದ್ದರು.. ಅದರಲ್ಲಿ ಹೆಣ್ಮಕ್ಕಳೇ ಹೆಚ್ಚು.. ನಮ್ಮೂರ ನಾಲ್ಕ್ರಾಟೆ ಬಾವಿಗೆ ನೀರ್ಗೆ ಅಂತ ಬರುತ್ತಿದ್ದ ಹೆಂಗಸರು ‘ ಎಸ್ಸೆಂ ಕಿಸ್ಣಾ ಒಳ್ಳೆ ತಂಬಟ್ಟೆ ಅಣ್ಣಿಂದಗವ್ನೆ ಕಣ್ರೆ..ನಮ್ಮನೆವೂ ಅವೇ…ಮೂದೇವ್ಗಳು..ನಾ ಅವೌನ್ಗೇ ಓಟಾಕದು ಕಣ ‘ ಎಂದು ಮಾತಾಡುತ್ತಿದ್ದನ್ನು ಅಮ್ಮನ ಜೊತೆಗೆ ನೀರು ಸೇದಲು ಹೋಗಿರುತ್ತಿದ್ದ ನಾನು ಕೇಳಿದ್ದೇನೆ..ಒಮ್ಮೆ ನಿಮ್ಮ ಮನೆಗೆ ಬಂದ್ದಿದ್ದಾಗ ಅದೂ ಇದೂ ಮಾತಾಡುತ್ತಾ ನಮ್ಮೂರ ಹೆಣ್ಮಕ್ಕಳು ಆಡುತ್ತಿದ್ದ ಮಾತುಗಳನ್ನು ಹೇಳಿದೆ..ಆ ಇಳಿ ವಯಸ್ಸಿನಲ್ಲಿ ಅದೆಷ್ಟು ಕೆಂಪಾದಿರಿ..’ ಹೌದೇನ್ರಿ ‘ ಎಂದು ನಗುತ್ತಾ ನನ್ನ ಭುಜದ ಮೇಲೆ ಕೈ ಹಾಕಿ ನನ್ನ ಬಗ್ಗೆ ವಿಚಾರಿಸುತ್ತಾ..ನಿಮ್ಮ ಹೋಬಳಿಯಿಂದನೇ ನನಗೆ ಹೆಚ್ಚು ಮತ ಬಂದಿದ್ದು ಎಂದ್ಹೇಳಿ.. ನಮ್ಮೂರಿಗರ ಬಗ್ಗೆ’ ಅವರಿದಾರೇನ್ರಿ..ಇವರು ಹೇಗಿದ್ದಾರೆ ‘ ಎಂದು ನಮ್ಮೂರ ನೆನಪಿಸಿಕೊಂಡಿರಿ..
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ನಾನು ಮಾತಾಡುತ್ತಾ ಮಾತಾಡುತ್ತಾ ‘ ಸಾರ್ ..ನಿಮ್ಮ ಗುಡಿಸಲ ಗುರುತಿನ ಪಾಂಪ್ಲೇಟ್ ಗಳನ್ನು ತುಂಬಾ ದಿನ ಇಟ್ಕೊಂಡಿದ್ದೆ ಸಾರ್ ಎಂದಾಗ..ಮತ್ತೂ ಖುಷಿಯಾದಿರಿ ತಾವು.. ( ಬಾಲ್ಯದಲ್ಲಿ ನನಗೆ ಎಲೆಕ್ಷನ್ ಪಾಂಪ್ಲೆಟ್ಗಳು..ಮ್ಯಾಚೆಸ್ಗಗಳು..ಸೀಗರೇಟು ಪ್ಯಾಕಿನ ಚಿತ್ರಗಳು..ತರಹೇವಾರಿ ಗೋಲಿ..ಬುಗರಿಗಳು ಇವೆಲ್ಲವನ್ನೂ ಇಟ್ಟುಕೊಳ್ಳುವ ಹುಚ್ಚಿತ್ತು )
ಸಾರ್..ಆಗ ನಿಮ್ಮ ವಿರುದ್ದ ಎಚ್ ಡಿ ಚೌಡಯ್ಯ ಅವರು ನಿಂತಿದ್ದರು…ನೀವು ಸೋಲಬೇಕೆಂದು..ನೀವು ಸೋತರೆ ನನ್ನ ತಲೆ ಬೋಳಿಸಿಕೊಳ್ಳುತ್ತೇನೆಂದು ( ಮುಡಿ ಕೊಡುತ್ತೇನೆಂದು ) ಮಾದಪ್ಪನಲ್ಲಿ ಹರಕೆ ಕಟ್ಟಿಕೊಂಡಿದ್ದೆ ಸಾರ್ ಎಂದೆನು..ತಾವು ಮತ್ತೂ ನಗುತ್ತಾ ಯಾಕ್ರಿ ಅಂತ ಹರಕೆ ಕಟ್ಕೊಳಕ್ಕೋದ್ರಿ ‘ ಎಂದ್ರಿ..ಅದಕ್ಕೆ ನಾನು ‘ ಚೌಡಯ್ಯನವರು ಕಪ್ಗಿದ್ರು ಮತ್ತು ನೋಡಕ್ಕೆ ನಿಮ್ಮಷ್ಟು ಚನ್ನಾಗಿರಲಿಲ್ಲ ಅಂದೆ.. ಕೆಂಪ್ಗಿದ್ದು ನೋಡಕ್ಕೆ ಚನ್ನಾಗಿರೋರನ್ನು ಯಾರ್ಬೇಕಾದ್ರೂ ಇಷ್ಟ ಪಡ್ತಾರೆ….ಆದ್ರೆ ಕಪ್ಗಿದ್ದು ನೋಡಕ್ಕೆ ಚನ್ನಾಗಿಲ್ದೋರ ಯಾರೂ ಇಷ್ಟ ಪಡೋದಿಲ್ವಲ್ಲಾ ಅದಕ್ಕೇ ನಾನು ಚೌಡಯ್ಯನವರು ಗೆಲ್ಲಲಿ ಅಂತ ಹರ್ಕೆ ಕಟ್ಟೋಡಿದ್ದೆ ಸಾ ‘ ಎಂದೆನು..
ತಾವು ..’ ಆ ಎಲೆಕ್ಷನ್ನಲ್ಲಿ ನಾ ಗೆದ್ಬಿಟ್ನೆಲ್ರೀ ‘ ಎಂದಾಗ..ನಾನು ‘ನಂಗೆ ಮಾದಪ್ಪ ಮೋಸ ಮಾಡ್ಬಿಟ್ಟ ಸಾ..ಅದಕ್ಕೇ ನಾನು ಮಾದಪ್ಪನಿಗೆ ಮುಡಿನೇ ಕೊಡ್ಲಿಲ್ಲಾ ಸಾರ್.. ‘ಎಂದು ನಕ್ಕೆ.. ( ಮಾದಪ್ಪನ ಹತ್ರ ಹೋಗಕ್ಕೆ ನನ್ಹತ್ರ ಕಾಸೆಲ್ಲಿತ್ತು..ನಮ್ಮ ಅಪ್ಪಾಜಿ ಕರ್ಕೊಂಡೋದಾಗ ಹೋಗ್ಬೇಕಾಗಿತ್ತು ..ಆದ್ರೂ ಮಾದಪ್ಪ ನಮ್ಮನೆ ದೇವರಲ್ವಾ..ಒಂದು ಚಾನ್ಸ್ ತಗೊಂಡಿದ್ದೆ ಕಣ್ರೀ )
ತಾವು ಮತ್ತೂ ನನ್ನ ಭುಜ ತಟ್ಟುತ್ತಾ ನಗಲು ಪ್ರಾರಂಭಿಸಿದಿರಿ..
ಆದ್ರೆ ನಿಮ್ಮ ಮತ್ತು ಆ ಕಲಾವಿದೆಯ ಕುರಿತು ನಮ್ಮೂರ ಜನ ಆಡುತ್ತಿದ್ದ ಮಾತುಗಳನ್ನು ತಮ್ಮೊಡನೆ ಹಂಚಿಕೊಳ್ಳಲು ನನಗೆ ಧೈರ್ಯ ಸಾಲದಾಯಿತು..ಆ ಕಲಾವಿದೆಯ ಖಟ್ಟರ್ ಅಭಿಮಾನಿಯೂ..ಪ್ರೇಮಿಯೆಂದುಕೊಂಡು ಅಲೆದಾಡುತ್ತಿದ್ದ ..ಆಕೆಯನ್ನು ಮದುವೆಯಾಗಲು ತಾವು ಅಡ್ಡಿಯಾಗುತ್ತಿದ್ದಿರೆಂದು ನಿಮ್ಮ ಮೇಲೆ ಕೆಂಡಾಮಂಡಲನಾಗುತ್ತಿದ್ದ…ಹಾಗೂ ಆ ಕಲಾವಿದೆಯ ಕನವರಿಕೆಯಲ್ಲಿ ಹುಚ್ಚನಾದ ನಾಗಮಂಗಲದ ಆ ಮೇಷ್ಟ್ರ ಹುಚ್ಚುತನದ ಬಗ್ಗೆ ನಿಮ್ಮ ಬಳಿ ಮಾತಾಡಬೇಕೆನಿಸಲಿಲ್ಲಾ ಸಾರ್..
ಸಾರ್.. ಪೆಟ್ರೋಲ್ ಬೆಲೆ ಹೆಚ್ಚಾದಾಗ ತಾವು ವಿಧಾನ ಸೌಧದ ಮುಂದೆ ‘ ಸೈಕಲ್ ರೈಡ್ ‘ ಮಾಡಿದ್ದನ್ನು ನೆನಪಿಸಿ..ಆ ಸೈಕಲ್ ಇದ್ರೆ ನಂಗೆ ಪ್ರಸೆಂಟ್ ಮಾಡಿ ಸಾರ್ ಎಂದು ತಮಾಷೆ ಮಾಡಿದಾಗ..ನೀವು ಮತ್ತೂ ನಗುತ್ತಾ..’ ರೀ ನೀವು ಚನ್ನಾಗಿ ಮಾತಾಡ್ತಿರಾ ಕಣ್ರೀ ‘ ಎನ್ನುತ್ತಾ..ಮತ್ತೆ ಮತ್ತೆ ಬರ್ತಾಯಿರ್ರಿ..ಒಂದಷ್ಟು ಹರಟೆ ಹೊಡೆಯೋಣ ಎಂದ್ಹೇಳಿದ್ರಿ..ಸಾರ್ ಮತ್ತೆ ನಿಮ್ಮನ್ಮು ಕಾಣಲಾಗಲಿಲ್ಲ..ನಿಮ್ಮ ಬಗ್ಗೆ ಪುಸ್ತಕ ಬರೆಯಬೇಕೆಂದಿದ್ದೆ ಆದೂ ಸಹ ಈಡೇರಲಿಲ್ಲ ಸಾರ್..

ಹೋಗಿ ಬನ್ನಿ ಸಾರ್..ನಾಡಿಗೆ ನಿಮ್ಮ ಕೊಡಿಗೆ ಅಪಾರವಾದದ್ದು.. ಆ ಕುರಿತು ಸಮಗ್ರ ಕೃತಿ ಬರಲಿ..
ತಮಗೆ ಭಾವಪೂರ್ಣ ಶ್ರದ್ಧಾಂಜಲಿ
– ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಹಿರಿಯ ರಂಗಕರ್ಮಿ




