ಡಾ ಮಂಜುನಾಥ ಸಾಹೇಬರೆ ಬೇಡ
ಡಾ. ಮಂಜುನಾಥ ಒಬ್ಬ ಪ್ರಬುದ್ಧ ಹೃದಯವಂತರು, ಹೃದಯಗಳನ್ನು ಕೃಷಿ ಮಾಡುವ ಮಾಂತ್ರಿಕರು. ಮೇಲಾಗಿ ಚಾಣಾಕ್ಷ ಆಡಳಿತಗಾರರು. ನಾಡಿನ ಜನತೆಗೆ ಆರೋಗ್ಯದ ವರದಾನ ನೀಡಿದ ಧನ್ವಂತರಿ.
ಇಂದು ರಾಹುಲ್ ಗಾಂಧಿಯವರಿಗೆ ಗಾಂಧಿ ಕುಟುಂಬದಲ್ಲಿ ಜನಿಸಿದ್ದೆ ಶಾಪ. ಡಾ.ಮಂಜುನಾಥರಿಗೆ ಮಾಜಿ ಪ್ರಧಾನಿ ದೇವೇಗೌಡರ ಅಳಿಯರೆಂಬುದು ಶಾಪವಾಗದಿದ್ದರೂ ವರದಾನಮಾತ್ರ ಆಗಲಾರದು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ನನ್ನ ಮಗಳ ಮದುವೆಯ ಆಮಂತ್ರಣ ಪತ್ರ ನೀಡಲು ಪತ್ನಿಯೊಂದಿಗೆ ದೊಡ್ಡಗೌಡರು ಯಾವಾಗಲೂ ವಾಸವಿರುವ ಡಾ. ಮಂಜುನಾಥ ಅವರ ಮನೆಗೆ ಹೋಗಿದ್ದೆ. ಗೌಡರಿಗೆ ಬರಲು ವಿನಂತಿಸಿಕೊಂಡು ಪಕ್ಕದಲ್ಲಿದ್ದ ಮಾಜಿ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ, ಆ ಕೋಣೆಯಿಂದ ಹೊರಬಂದಿದ್ದೆ.
ಹೊರಬರುತ್ತಿದ್ದಂತೆ ನಮಗೆ ಊಟದ ಮನೆಯತ್ತ ಬರಲು ಕೇಳಿಕೊಂಡ ಅವರ ಮನೆಯಲ್ಲಿದ್ದ ಸಹಾಯಕ. ಅವನ ಹಿಂದೆ ಹೆಜ್ಜೆ ಹಾಕಿದೆವು. ಅಲ್ಲಿದ್ದರು ಡಾ ಮಂಜುನಾಥ ಅವರ ಧರ್ಮಪತ್ನಿ. “ಅಣ್ಣಾ ತಿಂಡಿ ತಿನ್ನಿ”ಎನ್ನುತ್ತ ಇಡ್ಲಿ- ವಡಾ ಬಡಿಸಿದರು ತಟ್ಟೆಗೆ. ಕಾಫಿ ಸಮಾರಾಧನೆಯ ತರುವಾಯ ನನ್ನವಳಿಗೆ ಅರಿಶಿಣ ಕುಂಕುಮದೊಂದಿಗೆ ಸೀರೆಯ ಉಡುಗೊರೆ. ಅವರು ಮಾಜಿಪ್ರಧಾನಿಯ ಮಗಳು, ಮುಖ್ಯಮಂತ್ರಿಯ ಸಹೋದರಿ, ಪ್ರಸಿದ್ಧ ಹೃದಯ ತಜ್ಞನ ಪತ್ನಿ, ಆ ತಾಯಿಯ ಹೃದಯ ವೈಶಾಲ್ಯತೆ ಕಂಡು ಮೂಕವಿಸ್ಮಿತರಾಗಿದ್ದೆವು ನಾವಿಬ್ಬರು.
“ಅಣ್ಣಾ ಮದುವೆಗೆ ಬರಲಾಗುವುದಿಲ್ಲ ಅಂದು ಜಿಲ್ಲಾ ಪರಿಷತ್ ಚುನಾವಣೆ ಇದೆ” ಎಂದರು ಸಹೋದರಿ. “ಆಯಿತ್ರಿ” ಎಂದೆವು.
ಕೆಲಕಾಲದ ನಂತರ ಡಿ.ಎಮ್. ಡಿಗ್ರಿ ಪಡೆದ ನನ್ನಳಿಯ ಜಯದೇವ ಆಸ್ಪತ್ರೆಯಲ್ಲಿ consultant ಆಗಿ ನೇಮಕಗೊಂಡ. ಆತನಿಗೊಮ್ಮೆ ವರ್ಗವಾಯಿತು.
“ನೀವು ಸಾಹೇಬರಿಗೆ ಹೇಳಿ” ಅಂದ.
“ನನಗಾಗದು” ಎಂದೆ.
ಆಗ ನನ್ನ ಸಂಬಂಧಿಯೊಬ್ಬರು ಆರೋಗ್ಯ ಸಚೀವರಾಗಿದ್ದರು. ಮಗಳು ಅಂಕಲ್ ನ ಸಹಾಯ ಕೋರಿದಳು. ಅವಳ ಅಂಕಲ್ ಅವಳನ್ನು ನಿರಾಶೆಗೊಳಿಸಲಿಲ್ಲ.
ಇದು ನನಗೆ ಹಾಗು ಡಾ. ಮಂಜುನಾಥ ರವರಿಗಿರುವ ಸಣ್ಣ ನಂಟು.
ಇಂದು ಡಾ.ಮಂಜುನಾಥ ಅವರು ಚುನಾವಣೆಗೆ ಸ್ಪರ್ಧಿಸಲು ಸಮ್ಮತಿಸಿದ್ದಾರಂತೆ. ಡಾ. ಮಂಜುನಾಥರವರು ಚುನಾವಣೆಗೆ ಸ್ಪರ್ಧಿಸಿದರೆ ನಾನು ಅವರ ಋಣ ತೀರಿಸಬೇಕು. ಇದು ಧರ್ಮ ಅಲ್ಲವೆ? ಹೌದು ಆ ಧರ್ಮವನ್ನು ಪಾಲಿಸಲು ನಾನು ಪಾಲಿಸಿಕೊಂಡು ಬಂದಿರುವ ರಾಜಕೀಯ ಧರ್ಮ ಅಡ್ಡ ಬರುತ್ತಲಿದೆ. ನಾನು ಕೋಮವಾದಿ ಪಕ್ಷವನ್ನು ಬೆಂಬಲಿಸಲಾರೆ. ಅದು ಅಸಾಧ್ಯದ ಮಾತು. ದೇಶವನ್ನು, ದೇಶದ ಜನರನ್ನು ಒಗ್ಗೂಡಿಸಬೇಕಾದ ಪಕ್ಷವು ದೇಶದ ಜನರ ಮನಸ್ಸನ್ನು ಒಡೆಯುತ್ತಿರುವುದನ್ನು ನಾನು ಬೆಂಬಲಿಸಲಾರೆ.
ಕ್ಷಮಿಸಿ ಡಾ. ಸಾಹೇಬರೆ, ನೀವು ಚುನಾವಣೆಗೆ ಸ್ಪರ್ಧಿಸಿದರೆ ನಾನು ನಿಮಗೆ ಹಾರೈಸಲಾರೆ. ನನ್ನದೊಂದು ಮತವನ್ನೂ ನೀಡಲಾರೆ. ನನ್ನಪತ್ನಿಯ ನಿರ್ಧಾರ ಆಕೆಗೆ ಬಿಟ್ಟಿದ್ದು. ನನ್ನ ಆತಂಕದಂತೆ ನನ್ನಂತಹ ಅನೇಕರು ಇಂತಹ ಧರ್ಮ ಸಂಕಟಕ್ಕೆ ಈಡಾಗಬಹುದು.
ನನಗೆ ಸದ್ಯಕ್ಕೆ ಮಹಾಭಾರತ ನೆನಪಿಗೆ ಬರುತ್ತದೆ. ಮಹಾಭಾರತದ ಭೀಷ್ಮ ಧರ್ಮಭ್ರಷ್ಟನಾಗಿಬಿಟ್ಟಿದ್ದ, ಕೌರವರ ಪಡೆ ಸೇರಿ. ಅವನ ಪ್ರತಿಜ್ಞೆ ಅವನನ್ನು ಕಟ್ಟಿ ಹಾಕಿತ್ತು. ಧರ್ಮಸೂಕ್ಷ್ಮ ಅರಿತ ವಿದುರ ಕೌರವರ ದ್ರಾಷ್ಟ್ಯವನ್ನು ತಡೆಯದೆ ಹೋದ. ನಿರಪರಾಧಿ ಸೀತೆ ಅಗಸನ ಮಾತಿನಿಂದಾಗಿ ರಾಮನಿಂದ ದೂರವಾದಳು.
ಧರ್ಮ ಅತಿ ಸೂಕ್ಷ್ಮ ಅಲ್ಲವೆ?
ನನ್ನಂತ ಅನೇಕರು ಈ ರೀತಿಯಾಗಿ ತೊಳಲಾಡಬಹುದು. ನಿಮಗಿಂತ ಯೋಗ್ಯವ್ಯಕ್ತಿ ಮುಂಬರುವ ಸಂಸತ್ತಿನಲ್ಲಿ ಯಾರೂ ಬರಲಿಕ್ಕಿಲ್ಲ. ನೀವೊಬ್ಬ ಸಂತರು. ನಿಮಗೆ ರಾಜಕೀಯ ಶೋಭೆ ತರದು. ಅದು ಹೊಲಸಾಗಿದೆ. ಚುನಾವಣಾ ರಾಜಕೀಯದಲ್ಲಿ ಧರ್ಮವಿಲ್ಲ. ಯಾವನು ಹೆಚ್ಚಿಗೆ ಯಾಮಾರಿಸುವನೋ ಅವನೇ ಜಯಶಾಲಿ. ನೀವು ಜಯಶಾಲಿಯಾದರೂ ನಿಜಜೀವನದಲ್ಲಿ ಸೋತುಹೋಗುವಿರಿ ಡಾ.ಸಾಹೇಬ.
ಅಂತಿಮ ಇಚ್ಛೆ ನಿಮ್ಮದು. ನಮ್ಮಂತ ಅನೇಕರನ್ನು ನೀವು ಕ್ಷಮಿಸಿಬಿಡಿ.
- ಜಿ.ಬಿ.ಪಾಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ




