ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಶೇ 3.75ರಷ್ಟು ಹೆಚ್ಚಳ

2 years ago

ಬೆಂಗಳೂರು: ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿ ರಾಜ್ಯ ಸರ್ಕಾರ ವೇತನ ಹೆಚ್ಚಳ ಮಾಡಲಿದೆ ಎಂದು ಕಾಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡುವ ಮೂಲಕ ಸರ್ಕಾರ ಸಮಾಧಾನ ಪಡಿಸಲು ಯತ್ನಿಸಿದೆ. ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಶೇ 3.75ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಈ ಮೂಲಕ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ 38.75ಗೆ ಏರಿಕೆಯಾಗಿದೆ. ಮೂಲವೇತನಕ್ಕೆ ಶೇ. 38.75 ರಷ್ಟು ತುಟ್ಟಿಭತ್ಯೆ ಇತ್ತು. ಇದನ್ನು ಜನವರಿಯಿಂದ ಪೂರ್ವಾನ್ವಯವಾಗುವಂತೆ ಶೇ. 42.5ಕ್ಕೆ ಹೆಚ್ಚಳ ಮಾಡಲಾಗಿದೆ.

ನಿವೃತ್ತಿ ವೇತನದಾರರಿಗೂ ಜ.1ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿದ್ದು, ಮೂಲ ನಿವೃತ್ತಿ ವೇತನ, ಕುಟುಂಬ ನಿವೃತ್ತಿ ವೇತನದ ಶೇ.38.75ರಿಂದ ಶೇ.42.5ಕ್ಕೆ ಹೆಚ್ಚಿಸಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.

ಯು.ಜಿ.ಸಿ, ಎಐಸಿಟಿಇ, ಐಸಿಎಆರ್ ವೇತನ ಶ್ರೇಣಿಗಳ ನಿವೃತ್ತಿ ವೇತನದಾರರಿಗೂ ಈ ಆದೇಶ ಅನ್ವಯವಾಗಲಿದೆ. ಜಿಲ್ಲಾ ಪಂಚಾಯ್ತಿಗಳ ಪೂರ್ಣಾವಧಿ ನೌಕರರಿಗೆ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್ಚಾರ್ಜ್ ನೌಕರರಿಗೂ ಹಾಗೂ ಸರ್ಕಾರದಿಂದ ಸಹಾಯ ಅನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯದಲ್ಲಿ ಕಾಲಿಕ ವೇತನ ಶ್ರೇಣಿಯಲ್ಲಿರುವ ಪೂರ್ಣಾವಧಿ ನೌಕರರಿಗೂ ಈ ಆದೇಶ ಅನ್ವಯವಾಗಲಿದೆ.

ಆದರೆ ಯು.ಜಿ.ಸಿ, ಎಐಸಿಟಿಇ, ಐಸಿಎಆರ್ ವೇತನ ಶ್ರೇಣಿಗಳಲ್ಲಿ ಹಾಲಿ ವೇತನ ಪಡೆಯುತ್ತಿರುವ ನೌಕರರಿಗೆ ಮತ್ತು ಎನ್ಜೆಪಿಸಿ ವೇತನಶ್ರೇಣಿಯ ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶ ಹೊರಡಿಸುವುದಾಗಿ ತಿಳಿಸಲಾಗಿದೆ.

Leave a Reply