ಬೆಂಗಳೂರು: 16 ನೇ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಮಾಜಿ ಸಚಿವ ಯು.ಟಿ.ಖಾದರ್ ಅವಿರೋಧವಾಗಿ ವಿಧಾನಸಭೆಯಲ್ಲಿ ಆಯ್ಕೆಯಾಗಿದ್ದಾರೆ.
ಹಂಗಾಮಿ ಸಭಾಧ್ಯಕ್ಷರಾದ ಆರ್.ವಿ.ದೇಶಪಾಂಡೆ ಅವರು ಸಭಾಧ್ಯಕ್ಷರ ಚುನಾವಣೆ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟಾಗ ಸಭಾನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯು.ಟಿ.ಖಾದರ್ ಅವರನ್ನು ಸಭಾಧ್ಯಕ್ಷರನ್ನಾಗಿ ಚುನಾಯಿಸಬೇಕೆಂದು ಸೂಚಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಯವರ ಪ್ರಸ್ತಾವವನ್ನು ಅನುಮೋದಿಸಿದರು.ಬಳಿಕ ಸಭಾಧ್ಯಕ್ಷರು ಮಾತನಾಡಿ, ಮುಖ್ಯಮಂತ್ರಿ ಸೂಚಿಸಿರುವ ಹಾಗೂ ಉಪಮುಖ್ಯಮಂತ್ರಿ ಅನುಮೋದಿಸಿರುವ ಚುನಾವಣೆ ಪ್ರಸ್ತಾವವನ್ನು ಮತಕ್ಕೆ ಹಾಕುವುದಾಗಿ ಹೇಳಿದರು. ಆಗ ಸದನದಲ್ಲಿ ಧ್ವನಿ ಮತದ ಅಂಗೀಕಾರ ದೊರೆಯಿತು.ಯು.ಟಿ.ಖಾದರ್ ಅವರು ಸಭಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಬಳಿಕ ಖಾದರ್ ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸದಸ್ಯರು ಮೇಜು ಕುಟ್ಟಿ ನೂತನ ಸಭಾಧ್ಯಕ್ಷರನ್ನು ಅನುಮೋದಿಸಿದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸರ್ವಾನುಮತದಿಂದ ಆಯ್ಕೆಯಾದ ಖಾದರ್ ಅವರನ್ನು ಸಂಪ್ರದಾಯದಂತೆ ಸಭಾಧ್ಯಕ್ಷರ ಪೀಠದವರೆಗೂ ಕರೆತಂದರು.
ಆಗ ದೇಶಪಾಂಡೆ ಅವರು ನೂತನ ಸಭಾಧ್ಯಕ್ಷರಿಗೆ ಪೀಠವನ್ನು ಬಿಟ್ಟುಕೊಟ್ಟು ನಿರ್ಗಮಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕರ್ನಾಟಕ ವಿಧಾನಸಭೆಗೆ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ನಿಮ್ಮನ್ನು ಸದನದ ಎಲ್ಲ ಸದಸ್ಯರ ಪರವಾಗಿ ಹಾಗೂ ವೈಯಕ್ತಿಕವಾಗಿ ಅಭಿನಂದಿಸುವುದಾಗಿ ಹೇಳಿದರು.
ನಿಮ್ಮ ತಂದೆಯವರಾದ ಯು.ಟಿ.ಫರೀದರ್ ಅವರು ಶಾಸಕರಾಗಿದ್ದರು. ನೀವು ಕೂಡ ಉಲ್ಲಾಳ ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಆಯ್ಕೆಯಾಗಿದ್ದು, ಅತ್ಯಂತ ಉತ್ಸಾಹಿ, ಸಕ್ರಿಯ ರಾಜಕಾರಣಿ. ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದೀರಿ. 2017ರಲ್ಲಿ ಅತಿಹೆಚ್ಚು ಪ್ರಶ್ನೆ ಕೇಳಿ ಸದನವೀರ ಪ್ರಶಸ್ತಿಯನ್ನು ಗಳಿಸಿದ್ದೀರಿ. ಮಾದರಿ ಶಾಸಕರಾಗಿದ್ದೀರಿ. ಕೊಟ್ಟ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದೀರಿ ಎಂದು ನೂತನ ಸಭಾಧ್ಯಕ್ಷರನ್ನು ಅಭಿನಂದಿಸಿದರು
ಸಭಾಧ್ಯಕ್ಷರಾದವರು ಪಕ್ಷಾತೀತವಾಗಿ ಕೆಲಸ ಮಾಡಬೇಕೆಂದು ಎಲ್ಲರೂ ಬಯಸುತ್ತಾರೆ. ರಾಜ್ಯದ ಜ್ವಲಂತ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಚರ್ಚೆಯಾಗಬೇಕು. 7 ಕೋಟಿ ಕನ್ನಡಿಗರ ಸಮಸ್ಯೆ ಚರ್ಚೆಯಾಗಬೇಕು, ರಾಜ್ಯದ ಹಿತ, ಅಭಿವೃದ್ಧಿ ನಮಗೆ ಮುಖ್ಯ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ,ಪ್ರಗತಿಪರ ಹಾಗೂ ಜಾತ್ಯತೀತ ನಿಲುವು ಹೊಂದಿರುವ ಯು.ಟಿ.ಖಾದರ್ ಅವರು ವಿಧಾನಸಭೆಯ ಅಧ್ಯಕ್ಷರಾಗಿರುವುದರಿಂದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳಿಗೆ ಸಮಾನ ಅವಕಾಶ ಸಿಗುವ ನಿರೀಕ್ಷೆಗಳಿವೆ ಎಂದು ಹೇಳಿದರು.
ನಿಮ್ಮ ತಕ್ಕಡಿ ಆಡಳಿತ ಮತ್ತು ವಿರೋಧ ಪಕ್ಷಗಳಲ್ಲಿ ಸಮವಾಗಿ ಇರಲಿ ಕರ್ನಾಟಕದ ವಿಧಾನ ಮಂಡಲ ತನ್ನದೇ ಆದ ಘನತೆ ಹೊಂದಿದೆ. ಇಂತಹ ಮಹತ್ವದ ಸದನದ ಸಭಾಧ್ಯಕ್ಷರಾಗಿ ನೀವು ಆಯ್ಕೆಯಾಗಿರುವುದಕ್ಕೆ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ. ನಿಮಗೆ ಇಪ್ಪತ್ತು ವರ್ಷದ ಅನುಭವ ಇದೆ. ನೀವು ಶಾಸಕರಾಗಿ, ಸಚಿವರಾಗಿ ಕೆಲಸ ಮಾಡುವಾಗ ಯಾವತ್ತೂ ಸಂಯಮ ಕಳೆದುಕೊಳ್ಳದೆ ಕೆಲಸ ಮಾಡಿದ್ದೀರಿ ಎಂದರು.
ವಿರೋಧ ಪಕ್ಷದ ಉಪ ನಾಯಕರಾಗಿಯೂ ಸಮರ್ಥವಾಗಿ ಕೆಲಸ ಮಾಡಿದ್ದೀರಿ. ಈ ಹಿಂದೆ ಈ ಹುದ್ದೆ ಅಲಂಕರಿಸಿದವರು ಈ ಹುದ್ದೆಯ ಗೌರವ ಹೆಚ್ಚಿಸಿದ್ದಾರೆ. ನೀವು ಕೊಡುವ ತೀರ್ಪು ಇಡೀ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ ಎಂದರು.
ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಮಾತನಾಡಿ, ಯು.ಟಿ.ಖಾದರ್ ಮತ್ತು ತಾವು ವಿದ್ಯಾರ್ಥಿ ದೆಸೆಯಿಂದಲೂ ಸ್ನೇಹಿತರಾಗಿದ್ದೇವೆ. ಶಾಸಕರಾಗಿ ಉತ್ತಮ ಜವಾಬ್ದಾರಿ ನಿಭಾಯಿಸಿದ್ದಾರೆ. ಯು.ಟಿ.ಖಾದರ್ ಪ್ರತಿನಿಸುವ ಬ್ಯಾರಿ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಸಿದೆ. ಯು.ಟಿ.ಖಾದರ್ ಅವರಿಂದ ಸದನದ ಶಕ್ತಿ ಹೆಚ್ಚಾಗಲಿದೆ ಎಂದರು.
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಜಾತ್ಯತೀತೆ ಎಂಬುದು ರಾಜಕಾರಣಿಗಳ ಭಾಷಣದ ವಸ್ತುವಾಗಿದೆ. ಆದರೆ ಅದನ್ನು ಯು.ಟಿ.ಖಾದರ್ ಜೀವನದಲ್ಲಿ ಹಾಸುಹೊಕ್ಕಾಗಿ ಅನುಸರಿಸುತ್ತಿದ್ದಾರೆ. ಗೃಹ ಸಚಿವನಾಗಿದ್ದ ವೇಳೆ ನಾನು ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಖಾದರ್ ಅವರ ಸಲಹೆಗಳು ಸಹಕಾರಿಯಾಗುತ್ತಿದ್ದವು. ಹಿಂದೆ ಇಲ್ಲಿ ಮೌಲಿಕ ಮತ್ತು ವೈಚಾರಿಕ ವಿಷಯಗಳು ಚರ್ಚೆಯಾಗುತ್ತಿದ್ದವು. ಮುಂದೆಯೂ ಅದೇ ವಾತಾವರಣ ಮುಂದುವರೆಯಲಿ ಎಂದು ಹೇಳಿದರು.



