ನಾವು ಕಾಣುವ ಕುಟುಂಬಗಳು ಎಷ್ಟರಮಟ್ಟಿಗೆ ಅನ್ಯೋನ್ಯವಾಗಿ ಮತ್ತು ಸೌಹಾರ್ದದಲ್ಲಿ ಇವೆ

11 months ago

ಇವತ್ತು ವಿಶ್ವ ಕುಟುಂಬದ ದಿನ.
ವಸುದೈವ ಕುಟುಂಬಕಂ ಅಂತೆಲ್ಲ ಸುಮ್ಮನೆ ಹೇಳ್ಬೆಡಿ. ಅದೊಂದು ಒಳ್ಳೆಯ ಆಶಯ ಮತ್ತು ಗುರಿ; ಅದೇನೋ ನಿಜ. ಆದ್ರೆ ನಾವು ಕಾಣುವ ಕುಟುಂಬಗಳು ಎಷ್ಟರಮಟ್ಟಿಗೆ ಅನ್ಯೋನ್ಯವಾಗಿ ಮತ್ತು ಸೌಹಾರ್ದದಲ್ಲಿ ಇವೆ ಅನ್ನುವುದನ್ನು ಗಮನಿಸೋಣ.

ಕುಟುಂಬದಲ್ಲಿ ಸಾಮಾನ್ಯವಾಗಿ ಗಮನಕ್ಕೆ ಬಂದಂತೆ ಹಕ್ಕಿನ ಮೇಲಾಟವೇ ಹೊರತು ಕರ್ತವ್ಯ, ಹೊಣೆಗಾರಿಕೆ ಮತ್ತು ಬಾಂಧವ್ಯ ತಳಕ್ಕೆ ಸೇರುತ್ತದೆ ಕೆಲವೊಮ್ಮೆ ಇಲ್ಲವಾಗುತ್ತವೆ.

ಕುಟುಂಬ ಅಂತಂದ್ರೆ ಒಬ್ಬರಿಗೊಬ್ಬರು ಆಪ್ತತೆಯಲ್ಲಿ ಸಾವಯವ ಸಂಬಂಧಗಳನ್ನು ಗಟ್ಟಿಗೊಳಿಸಿಕೊಂಡು ಬಾಳುವ ಒಂದು ಸಾಮಾಜಿಕ ಮೂಲ ಘಟಕ.

ಆದರೆ ಈಗಿನ ರಕ್ತ ಸಂಬಂಧ ಆಧಾರಿತವಾದಂತಹ ಕುಟುಂಬಗಳು ಬರಿಯ ಹಕ್ಕುದಾರಿಕೆ ಮತ್ತು ಪಾಲುದಾರಿಕೆಯ ವಿಷಯದಲ್ಲಿ ಗಟ್ಟಿಯಾಗಿದ್ದು ಆಪ್ತತೆ ಆರ್ದ್ರತೆ ಮತ್ತು ಸಾವಯವ ಆತ್ಮೀಯತೆಗಳನ್ನು ಟೊಳ್ಳುಗೊಳಿಸಿಕೊಳ್ಳುತ್ತಿವೆ.

ಇದಕ್ಕೆ ಮುಖ್ಯ ಕಾರಣ ಹಕ್ಕುದಾರಿಕೆಯ ಮನೋಭಾವ, ಅಧಿಕಾರಸ್ತ ಮನಸ್ಥಿತಿ ಮತ್ತು ಹಠಮಾರಿ ಮನೋಗುಣ. ಈ ಕಾರಣಗಳಿಂದಾಗಿ ಪ್ರಸ್ತುತ ಕುಟುಂಬಗಳು ಜಾಳುಜಾಳಾಗಿವೆ ಮತ್ತು ತೋರಿಕೆಯ ಸಂಬಂಧಗಳ ರಚನೆಯಾಗಿದೆ.

ಕುಟುಂಬಗಳಲ್ಲಿ ಮನಸ್ತಾಪ ಮತ್ತು ಸಂಘರ್ಷ ಒಡಮೂಡಿದ ಕೂಡಲೇ ಪೊಲೀಸು ಹಾಗೂ ಕೋರ್ಟು ಎಂದು ಹಕ್ಕುದಾರಿಕೆ ಸ್ಥಾಪಿಸಲು ಮುನ್ನುಗ್ಗುವ ಮನಸ್ಥಿತಿ ಎಂದೆಂದಿಗೂ ಕುಟುಂಬದ ವ್ಯವಸ್ಥೆಗೆ ಮಾರಕವೂ ಹೌದು, ನೈತಿಕ ಪತನವು ಹೌದು.

ಕುಟುಂಬದಲ್ಲಿ ಪಾತ್ರಗಳ ಆಧಾರಿತವಾಗಿ ನಿರೀಕ್ಷೆ ಮತ್ತು ಅಪೇಕ್ಷೆಗಳನ್ನು ಹೊಂದುತ್ತಾ ಹಕ್ಕುದಾರಿಕೆಯನ್ನು ಮತ್ತು ಅಧಿಕಾರವನ್ನು ಸ್ಥಾಪಿಸುವ ಬದಲು, ಮನುಷ್ಯ ಸಹಜವಾದ ದೌರ್ಬಲ್ಯ ಮತ್ತು ಸಾಮರ್ಥ್ಯಗಳಿಂದ ಕೂಡಿದ್ದು, ಅವರ ದೌರ್ಬಲ್ಯಗಳನ್ನು ಮೀರಲು ಸಹಕರಿಸುತ್ತೇನೆ ಮತ್ತು ಸಾಮರ್ಥ್ಯಗಳನ್ನು ಗಟ್ಟಿಗೊಳಿಸಿಕೊಳ್ಳಲು ಬೆಂಬಲಿಸುತ್ತೇನೆ ಎನ್ನುವ ಮನಸ್ಥಿತಿ ಬರುವವರೆಗೂ ಕುಟುಂಬಗಳಲ್ಲಿ ಮನಸ್ತಾಪ ಮತ್ತು ಸಂಘರ್ಷಗಳು ತಪ್ಪಿದ್ದಲ್ಲ.

ಸಾಮಾಜಿಕ ಚೌಕಟ್ಟಿನ ಆಧಾರದಲ್ಲಿ ಪಾತ್ರಗಳಿಗೆ ಹಕ್ಕು ಮತ್ತು ಕರ್ತವ್ಯಗಳನ್ನು ಆರೋಪಿಸಿಕೊಳ್ಳುವುದನ್ನು ಮೊದಲು ನಿಲ್ಲಿಸಬೇಕು.

ಕುಟುಂಬ ಸದಸ್ಯರ ಒಡಕು ಪಂಚಾಯಿತಿ ಕಟ್ಟೆಗಳಿಂದ ಸರಿಹೋಗುವಂತಹದ್ದು ಎಂದಿಗೂ ಅಲ್ಲ.

ವೈಯಕ್ತಿಕ ಮನಸ್ಥಿತಿ ಮತ್ತು ಭಾವನೆಗಳ ಮೂಲಕ ಬೆಸೆದುಕೊಳ್ಳುವ ರೀತಿಯಲ್ಲಿನ ವ್ಯತ್ಯಾಸ ಕುಟುಂಬದ ರಚನೆಯನ್ನು ಶಿಥಿಲ ಗೊಳಿಸುವ ಅಥವಾ ಗಟ್ಟಿಗೊಳಿಸುವ ಪ್ರಕ್ರಿಯೆಯಲ್ಲಿ ಪಾತ್ರವನ್ನು ವಹಿಸುತ್ತದೆ.

ಕುಟುಂಬದಲ್ಲಿ ಇರಬೇಕಾದದ್ದು ಸಾಮಾಜಿಕ ವ್ಯವಸ್ಥೆಯ ನೈತಿಕತೆ ಅಲ್ಲ. ಆಪ್ತತೆಯ ಮತ್ತು ಹೊಣೆಗಾರಿಕೆಯ ಸಾವಯವ ನೈತಿಕತೆ.

ಸಾವಯವ ನೈತಿಕತೆಯೇ ಕುಟುಂಬವನ್ನು ಒಟ್ಟಾಗಿ ಇರಿಸಲು ಸಾಧ್ಯವಾಗುವ ಮೊದಲ ಮತ್ತು ಕೊನೆಯ ಅಂಶ. ಈಗಿನ ಕುಟುಂಬದ ರಚನೆಯೇ ಒಂದು ವಿಫಲ ವ್ಯವಸ್ಥೆಯಾಗಿದೆ.

ರಕ್ತ ಸಂಬಂಧಗಳು ಎಂಬುವುದು ಕಟ್ಟುಪಾಡಿನ ಅನಿವಾರ್ಯದ ಬಂಧಗಣ ಆಗಿವೆ.

ಕುಟುಂಬಕ್ಕೆ ಅಗತ್ಯವಿರುವುದು ಭಾವನೆಗಳ ಶುದ್ಧತೆ, ಪ್ರಾಮಾಣಿಕತೆ ಮತ್ತು ಪಾರದರ್ಶಕ ಮುಕ್ತತೆ.

ಅದಿಲ್ಲದ ಯಾವುದೇ ಕುಟುಂಬವು ಸಮಾಜದ ಚೌಕಟ್ಟಿನ ಕಟ್ಟಳೆಗೆ ಕಟ್ಟು ಬಿದ್ದಿರುವ ಒಂದು ‘ಗತಿ ಇಲ್ಲ ಮತಿ ಇಲ್ಲ’ ಎನ್ನುವ ಕೂಡು ಬದುಕಾಗಿರುತ್ತದೆ. ಅಂತಹ ಕೂಡಿ ಬದುಕು ಕಪಟತನವೇ ಹೊರತು ಪ್ರಾಮಾಣಿಕದ್ದಾಗಿರುವುದಿಲ್ಲ.

ಮನೆ, ಸಂಬಂಧ, ಕುಟುಂಬ ಮತ್ತು ಸಮಾಜ ಎಲ್ಲವೂ ಬೆಸೆದುಕೊಂಡು ಇರಬೇಕಾದ್ದು ಪರಸ್ಪರರ ಸಾವಯವ ನೈತಿಕತೆ ಮತ್ತು ಹೊಣೆಗಾರಿಕೆಯಿಂದ.

ನನಗೆ ಕುಟುಂಬ ಮತ್ತು ಸಮಾಜ ಎರಡು ಒಂದೇ. ಒಂದು ಚಿಕ್ಕ ನೆಲೆ, ಮತ್ತೊಂದು ದೊಡ್ಡ ನೆಲೆ.
ಚಿಕ್ಕದರಲ್ಲಿ ಹೊಣೆಗಾರಿಕೆ ವೈಯಕ್ತಿಕ, ದೊಡ್ಡದರಲ್ಲಿ ಹೊಣೆಗಾರಿಕೆ ಸಂಕಲಿತ (collective).
ಆದರೆ ಬೆಸೆಯುವ ತಂತುಗಳು ಒಂದೇ ಅದು ಸಾವಯವ ನೈತಿಕತೆ.

ಯಾರೊಬ್ಬನು ತನ್ನ ವೈಯಕ್ತಿಕ ಸಂಬಂಧಗಳನ್ನು ಆಪ್ತವಾಗಿಯೂ ಮತ್ತು ಕುಟುಂಬದ ರಚನೆಯನ್ನು ಹದವಾಗಿಯೂ ಇಟ್ಟುಕೊಳ್ಳಲಾರನೋ ಅವನಿಗೆ ಸಮಾಜವನ್ನು ಆಪ್ತತೆಯಿಂದ ಮತ್ತು ಸೌಹಾರ್ದತೆಯಿಂದ ಕಾಣಲು ಕಷ್ಟ ಸಾಧ್ಯ.

– ಯೋಗೇಶ್ ಮಾಸ್ಟರ್, ಹಿರಿಯ ರಂಗಕರ್ಮಿ

Leave a Reply