ಸ್ಥಳೀಯ ಸಂಸ್ಥೆಗಳ ಚುನಾವಣೆವರೆಗೂ ಕೆಪಿಸಿಸಿ ಅಧ್ಯಕ್ಷರ ನೇಮಕ ಇಲ್ಲ

1 year ago

ಬೆಂಗಳೂರು: ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ತತ್ವಕ್ಕೆ ಅನುಸಾರವಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಮುಕ್ತಗೊಳಿಸುವಂತೆ ಬೇಡಿಕೆ ಸಲ್ಲಿಸಿದ್ದ ಹಲವು ನಾಯಕರಿಗೆ ಹೈಕಮಾಂಡ್ ನಿರ್ಧಾರ ನಿರಾಸೆ ಮೂಡಿಸಿದೆ.

ಈ ಹಿಂದೆ ಡಿ ಕೆ ಶಿವಕುಮಾರ್ ಅವರು ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿದಾಗ ತಾವು ಲೋಕಸಭೆ ಚುನಾವಣೆ ಮುಗಿಯುವವರೆಗೆ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯುತ್ತೇನೆ ಎಂದು ಹೇಳಿದ್ದರು. ಇದೀಗ ಲೋಕಸಭೆ ಚುನಾವಣೆ ಮುಗಿದು ಆರು ತಿಂಗಳು ಪೂರ್ಣಗೊಂಡಿದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡಬೇಕು ಎಂಬ ಕೂಗು ಕಾಂಗ್ರೆಸ್ ವಲಯದಲ್ಲಿ ಎದ್ದಿತ್ತು. 

ಮುಖ್ಯವಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಹಕಾರ ಸಚಿವ  ಕೆ ಎನ್ ರಾಜಣ್ಣ ಮತ್ತು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ವರಿಷ್ಠರನ್ನು ಭೇಟಿ ಮಾಡಿ, ತಕ್ಷಣ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡಬೇಕು ಎಂದು ಮನವಿ ಸಲ್ಲಿಸಿದ್ದರು.

ಈ ಬೆಳವಣಿಗೆಗಳ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷ ಸಂಘಟನಾತ್ಮಕವಾಗಿ ಹಲವಾರು ಬದಲಾವಣೆಗಳನ್ನು ಮಾಡುತ್ತಿದ್ದು, ಇನ್ನೊಂದೆರಡು ವಾರದಲ್ಲಿ ಹಲವು ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡಲಾಗುವುದು ಎಂದಿದ್ದರು. ಇದು ಡಿ ಕೆ ಶಿವಕುಮಾರ್ ಅವರ ಬದಲಾವಣೆಗೆ ಆಗ್ರಹಿಸುತ್ತಿದ್ದ ನಾಯಕರಲ್ಲಿ ಹೊಸ ಭರವಸೆ ಮೂಡಿಸಿತ್ತು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಒತ್ತಾಯವನ್ನು ಇನ್ನೂ ಬಿಗಿಗೊಳಿಸಲು ಈ ಬಣ ತೀರ್ಮಾನಿಸಿತ್ತು. ಇದರ ಪರಿಣಾಮ ಕೆ.ಎನ್.ರಾಜಣ್ಣ ಅವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಮಂತ್ರಿ ಸ್ಥಾನ ತೊರೆಯುವುದಾಗಿ ಘೋಷಿಸಿದ್ದರು.

ಈ ಬೆಳವಣಿಗೆಗಳನ್ನು ಗಮನಿಸಿದಾಗ ಸದ್ಯದಲ್ಲೇ ಕೆಪಿಸಿಸಿಗೆ ನೂತನ ಸಾರಥಿ ಬರಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗ ಹೈಕಮಾಂಡ್ ತೆಗೆದುಕೊಂಡಿರುವ ತೀರ್ಮಾನ ಎಲ್ಲಾ ನಿರೀಕ್ಷೆಗಳನ್ನು ಹುಸಿಯಾಗಿಸಿದೆ.

ಬರುವ ಜೂನ್, ಜುಲೈ ಒಳಗೆ ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಈಗಾಗಲೇ ಪ್ರದೇಶ ಕಾಂಗ್ರೆಸ್ ತಯಾರಿ ಆರಂಭಿಸಿದ್ದು, ಸಂಭಾವ್ಯ ಅಭ್ಯರ್ಥಿಗಳ ಹುಡುಕಾಟ ನಡೆದಿದೆ. 

ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಪೂರ್ಣ ಪ್ರಮಾಣದಲ್ಲಿ ಈ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇಂತಹ ಸಮಯದಲ್ಲಿ ಅಧ್ಯಕ್ಷರ ಬದಲಾವಣೆ ಅನಗತ್ಯ ಗೊಂದಲಕ್ಕೆ ಕಾರಣವಾಗಲಿದೆ. ಇದು ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂಬ ವರದಿಗಳು ಹೈಕಮಾಂಡ್ ತಲುಪಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಮುಗಿಯುವವರೆಗೆ ಡಿ ಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಬದಲಾಯಿಸದಿರಲು ನಿರ್ಧರಿಸಿದ್ದಾರೆಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ. 

ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಮತ್ತು ವಿಧಾನ ಪರಿಷತ್ ನಾಮಕರಣ ಸದಸ್ಯರ ನೇಮಕ ಕುರಿತಂತೆ ಪಕ್ಷದ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರನ್ನು ದೆಹಲಿಯಲ್ಲಿ ಗೃಹ ಸಚಿವ ಪರಮೇಶ್ವರ್ ಭೇಟಿ ಮಾಡಿದ್ದಾರೆ. ಈ ವೇಳೆ ಡಿ ಕೆ ಶಿವಕುಮಾರ್ ಅವರನ್ನು ಬದಲಾಯಿಸದಿರುವ ಹೈಕಮಾಂಡ್ ನಿರ್ಧಾರವನ್ನು ಇವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply