ಅಧಿಕಾರಿಗಳ ಅಮಾನತ್ತು ಆದೇಶವನ್ನು ಅನುಮೋದಿಸಿದ ಕೇಂದ್ರ ಸರ್ಕಾರ

10 months ago

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಸಮೀಪದಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಸೇರಿ ಮೂವರು ಐಪಿಎಸ್ ಅಧಿಕಾರಿಗಳನ್ನು  ಅಮಾನತುಗೊಳಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ವರದಿಯನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ.

ಕರ್ತವ್ಯ ಲೋಪ ಆರೋಪದಡಿ ರಾಜ್ಯ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಕಳುಹಿಸಿತ್ತು.

ರಾಜ್ಯ ಸರ್ಕಾರದ ವರದಿಯನ್ನು ಅಂಗೀಕರಿಸಿದ ಕೇಂದ್ರ ಸರ್ಕಾರ ಡಿಪಿಎಆರ್‌ಗೆ ಮಾಹಿತಿ ರವಾನೆ ಮಾಡಿದೆ. ದಯಾನಂದ್, ವಿಕಾಸ್ ಕುಮಾರ್ ಮತ್ತು ಶೇಖರ್ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತು ಮಾಡಿತ್ತು.

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತ ದುರಂತ ಹಿನ್ನೆಲೆಯಲ್ಲಿ ಬೆಂಗಳೂರು ಮಾಜಿ ಪೊಲೀಸ್‌ ಆಯುಕ್ತ, ಎಡಿಜಿಪಿ ಬಿ.ದಯಾನಂದ್ ಸೇರಿ ಮೂವರು ಐಪಿಎಸ್ ಅಧಿಕಾರಿಗಳ ಅಮಾನತು ಸಂಬಂಧ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಇತ್ತೀಚೆಗೆ ಸಮಗ್ರ ವರದಿ ಸಲ್ಲಿಸಿತ್ತು.

ಕೇಂದ್ರಕ್ಕೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮೂಲಕ ವರದಿ ಸಲ್ಲಿಸಲಾಗಿತ್ತು. ಇದರಲ್ಲಿ ಕಾಲ್ತುಳಿತ ದುರಂತಕ್ಕೆ ಪೊಲೀಸ್‌ ಭದ್ರತಾ ವೈಫಲ್ಯ ಹಾಗೂ ಸಂವಹನ ಕೊರತೆ ಪ್ರಮುಖ ಕಾರಣಗಳು. ಈ ಅಂಶಗಳನ್ನಾಧರಿಸಿಯೇ ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಇದೀಗ ರಾಜ್ಯ ಸರ್ಕಾರದ ವರದಿಗೆ ಕೇಂದ್ರ ಒಪ್ಪಿಗೆ ಸೂಚಿಸಿದೆ.

ಅಖಿಲ ಭಾರತ ಆಡಳಿತ ಸೇವಾಮಟ್ಟದ ಅಧಿಕಾರಿಗಳು ಅಂದರೆ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಅಮಾನತು ಬಗ್ಗೆ ನಿಯಮಾನುಸಾರ ಕೇಂದ್ರ ಸರ್ಕಾರ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕಿದೆ. ಅಧಿಕಾರಿಗಳ ಕೇಡರ್ ಹಾಗೂ ನೇಮಕಾತಿ ಬಗ್ಗೆ ರಾಜ್ಯ ಸರ್ಕಾರ ಅಧಿಕಾರ ಹೊಂದಿದೆ. ಆದರೆ ಅಮಾನತು ವಿಚಾರದಲ್ಲಿ ಕೇಂದ್ರದ ತೀರ್ಮಾನವೇ ಅಂತಿಮವಾಗಿರಲಿದೆ. ಹೀಗಾಗಿ ಈಗಿನ ಐಪಿಎಸ್ ಅಧಿಕಾರಿಗಳ ತಲೆದಂಡ ಕುರಿತು ಕೇಂದ್ರಕ್ಕೆ ರಾಜ್ಯ ವರದಿ ಸಲ್ಲಿಸಿತ್ತು. ಇದೀಗ ಅಧಿಕಾರಿಗಳ ಅಮಾನತ್ತು ಆದೇಶವನ್ನು ಕೇಂದ್ರ ಅನುಮೋದಿಸಿದೆ.

Leave a Reply