ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಸಾಂವಿಧಾನಿಕ ಸಿಂಧುತ್ವ ಎತ್ತಿ ಹಿಡಿದ ಹೈಕೋರ್ಟ್

1 year ago

ಬೆಂಗಳೂರು: ರಾಜ್ಯದಲ್ಲಿ ಸಣ್ಣ ಪ್ರಮಾಣದಲ್ಲಿ ಸಾಲ ಪಡೆದವರಿಗೆ ಕಿರುಕುಳ ನೀಡುವುದನ್ನು ತಪ್ಪಿಸುವುದಕ್ಕಾಗಿ ರಾಜ್ಯ ಸರ್ಕಾರ ಹೊರಡಿಸಿದ್ದ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಸುಗ್ರೀವಾಜ್ಞೆಯ (ಮೈಕ್ರೋ ಫೈನಾನ್ಸ್) ಸಾಂವಿಧಾನಿಕ ಸಿಂಧುತ್ವವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಸುಗ್ರೀವಾಜ್ಞೆಯ ಸಿಂಧುತ್ವ ಮತ್ತು ಮೋಟಾರು ವಾಹನ/ಆಸ್ತಿ ಹಣಕಾಸು ಉದ್ಯಮವು ಸುಗ್ರೀವಾಜ್ಞೆಯಿಂದ ಹೊರಗಿವೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಲು ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ಕರ್ನಾಟಕ ಹೈರ್ ಪರ್ಚೇಸ್ ಅಸೋಶಿಯೇಶನ್ ಸಲ್ಲಿಸಿದ್ದ  ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಅರ್ಜಿ ವಜಾಗೊಳಿಸಿ, ಸುಗ್ರೀವಾಜ್ಞೆಯನ್ನು ಎತ್ತಿಹಿಡಿದು ಆದೇಶಿಸಿದೆ.

ಅರ್ಜಿ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಮೂರು ಲಕ್ಷ ವಾರ್ಷಿಕ ಆದಾಯ ಇರುವ ಕುಟುಂಬಗಳಿಗೆ ಯಾವುದೇ ಭದ್ರತೆ ಇಲ್ಲದ ಸಾಲ ನೀಡುವವರಿಗೆ ಸುಗ್ರೀವಾಜ್ಞೆ ಅನ್ವಯಿಸುತ್ತದೆ. ಹಾಲಿ ಪ್ರಕರಣದಲ್ಲಿ ಬಾಧಿತರು ಯಾರೂ ನ್ಯಾಯಾಲಯದ ಮುಂದೆ ಬಂದಿಲ್ಲ. ಅರ್ಜಿದಾರರು ಕಾಯಿದೆ ತಮಗೆ ಅನ್ವಯಿಸುತ್ತದೆಯೇ, ಇಲ್ಲವೇ ಎಂಬುದರ ಸ್ಪಷ್ಟನೆ ಕೋರಲು ನ್ಯಾಯಾಲಯದ ಮುಂದೆ ಬಂದಿದ್ದಾರೆ ಎಂದಿದ್ದರು.

ಆರ್​​ಬಿಐ ಸುತ್ತೋಲೆ ಏನು ಹೇಳುತ್ತದೆಯೋ ಅದನ್ನು ಮಾಡಲಾಗಿದೆ. ಅರ್ಜಿದಾರರಿಗೂ ಸುಗ್ರೀವಾಜ್ಞೆಗೂ ಯಾವುದೇ ಸಂಬಂಧವಿಲ್ಲ. 17 ಮಂದಿ ಸಾವನ್ನಪ್ಪಿದ್ದಾರೆ. ಆ ಸಂಬಂಧ ಎಫ್ಐಆರ್ ದಾಖಲಾಗಿವೆಯಷ್ಟೆ. ಬೇರೆ ಯಾವುದೇ ತೆರನಾದ ಎಫ್ಐಆರ್ ದಾಖಲಿಸಲಾಗಿಲ್ಲ. ಎನ್​ಬಿಎಫ್​ಸಿ ಮತ್ತು ಆರ್​​ಬಿಐ ಕಾಯಿದೆ ವ್ಯಾಪ್ತಿಯಿಂದ ಹೊರಗಿರುವವರಿಗೆ ಸುಗ್ರೀವಾಜ್ಞೆ ಅನ್ವಯಿಸುತ್ತದೆ” ಎಂದು ವಿವರಿಸಿದ್ದರು.

ಅರ್ಜಿದಾರರ ಪರ ವಕೀಲರು, ಸಂಕಷ್ಟದಲ್ಲಿರುವ ಕುಟುಂಬಗಳನ್ನು ರಕ್ಷಿಸುವ ಉದ್ದೇಶ ಸರ್ಕಾರದ್ದಾಗಿದ್ದರೆ ಸಾಲ ನೀಡುವವರು, ಸಂಸ್ಥೆಗಳು ಮತ್ತು ಸಂಘಗಳನ್ನು ಏಕೆ ಸೇರಿಸಲಾಗಿದೆ. ಸುಗ್ರೀವಾಜ್ಞೆಯಲ್ಲಿ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ವಿವೇಚನಾರಹಿತವಾಗಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಆರ್​ಬಿಐ ನಿರ್ದೇಶನ ಪಾಲಿಸಲಾಗಿದೆ ಎಂದು ಸರ್ಕಾರ ಹೇಳುತ್ತದೆ. ಆದರೆ, ಆರ್​ಬಿಐ ನಿರ್ದೇಶನವು ನಿಯಮ ಅಥವಾ ಶಾಸನವಲ್ಲ. ನಾವು ಖರೀದಿ ಉದ್ಯಮದಲ್ಲಿದ್ದು, ವಾಹನಗಳನ್ನೇ ಭದ್ರತೆಯನ್ನಾಗಿ ಇಟ್ಟುಕೊಳ್ಳುತ್ತೇವೆ ಎಂದು ಪೀಠದ ಗಮನ ಸೆಳೆದರು.

ಅಲ್ಲದೇ, ಸುಗ್ರೀವಾಜ್ಞೆಯ ಕೆಲ ಸೆಕ್ಷನ್​ಗಳು ಸಾಲದಾತರನ್ನು ತೊಂದರೆಗೆ ಸಿಲುಕಿಸಲಿದ್ದು, ಅವರ ಕಾನೂನುಬದ್ಧ ಹಕ್ಕುಗಳು ಹಾಗೂ ಆರ್ಥಿಕ ಹಿತಾಸಕ್ತಿಗಳನ್ನು ಉಲ್ಲಂಘಿಸಲಿವೆ. ಮೈಕ್ರೋ ಫೈನಾನ್ಸ್ ಎಂದರೆ ಏನು ಎಂಬುದನ್ನು ಸುಗ್ರೀವಾಜ್ಞೆಯಲ್ಲಿ ವ್ಯಾಖ್ಯಾನಿಸಿಲ್ಲ. ಆದ್ದರಿಂದ ಸುಗ್ರೀವಾಜ್ಞೆ ದುರುದ್ದೇಶಕ್ಕಾಗಿ ಬಳಸಿಕೊಳ್ಳುವುದಕ್ಕೆ ಅವಕಾಶವಿರಲಿದೆ. ಸುಗ್ರೀವಾಜ್ಞೆಯ ಸಂವಿಧಾನದ ಪರಿಚ್ಛೇದ 14, 19, 21 ಮತ್ತು 300ಎ ಗಳನ್ನು ಉಲ್ಲಂಘಿಸಲಿದ್ದು, ತರಾತುರಿಯಲ್ಲಿ ಜಾರಿ ಮಾಡಲಾಗಿದೆ ಎಂದು ಪೀಠಕ್ಕೆ ವಿವರಿಸಿದರು.

ದುರ್ಬಲ ವರ್ಗದವರನ್ನು ರಕ್ಷಣೆ ಮಾಡುವುದಕ್ಕಾಗಿ ಈ ಸುಗ್ರೀವಾಜ್ಞೆ ತರಲಾಗಿದೆ ಎಂದಿದ್ದರೂ, ದುರ್ಬಲ ವರ್ಗದವರು ಎಂದರೆ ಯಾರು ಎಂಬುದನ್ನೇ ಉಲ್ಲೇಖಿಸಿಲ್ಲ. ಇದರಿಂದ ಶ್ರೀಮಂತರು, ಬಡವರು ಎಂಬುದು ಗೊತ್ತಾಗದೆ, ಮೈಕ್ರೋ ಫೈನಾನ್ಸ್​​ನಿಂದ ಸಾಲ ಪಡೆದವರೆಲ್ಲರೂ ದುರ್ಬಲ ವರ್ಗದವರು ಎಂಬುದಾಗಿ ಪರಿಗಣಿಸಲು ಅವಕಾಶವಿರಲಿದೆ. ಲಕ್ಷಾಂತರ ಮತ್ತು ಕೋಟಿ ರೂ. ದುಡಿಯುವವರಿಗೆ ಇದು ನೆರವಾಗಲಿದ್ದು, ನಿಜವಾದ ಬಡವರು ಮತ್ತು ದುರ್ಬಲವರ್ಗದವರಿಗೆ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದರು.

ಸುಗ್ರೀವಾಜ್ಞೆಯಲ್ಲಿ ಸಾಲದಾತರು ನೋಂದಣಿ ಮಾಡುಕೊಳ್ಳುವವರೆಗೂ ಸಾಲವನ್ನು ನೀಡುವುದು ಮತ್ತು ವಸೂಲಿ ಮಾಡುವುದಕ್ಕೆ ಅವಕಾಶವಿಲ್ಲ ಎಂಬುದಾಗಿ ತಿಳಿಸಲಾಗಿದೆ. ಈ ನಿಯಮ ಈ ಹಿಂದೆ ನೀಡಿರುವ ಸಾಲಗಳಿಗೂ ಅನ್ವಯವಾಗಲಿದೆ. ಈ ನೋಂದಣಿ ಪ್ರಕ್ರಿಯೆಗೆ ತಿಂಗಳುಗಳೇ ಕಳೆಯಲಿದ್ದು, ಅಲ್ಲಿಯವರೆಗೂ ಸಾಲ ನೀಡುವುದು ಮತ್ತು ವಸೂಲಿ ಮಾಡುವುದಕ್ಕೆ ಸಾಧ್ಯವಿಲ್ಲದಂತಾಗಲಿದೆ. ಸೆಕ್ಷನ್ 6ರಲ್ಲಿ ತಿಳಿಸಿರುವಂತೆ ಸಾಲದಾದರು ನೀಡುವ ಸಾಲಕ್ಕೆ ಸಾಲಗಾರನಿಂದ ಯಾವುದೇ ಗಿರವಿ ಮತ್ತು ಭದ್ರತೆಗಳನ್ನು ತೆಗೆದುಕೊಳ್ಳಬಾರದು ಎಂಬುದಾಗಿ ತಿಳಿಸಲಾಗಿದ್ದು, ಇದು ಆಸ್ತಿ ವರ್ಗಾವಣೆ ಕಾಯಿದೆಗೆ ವಿರುದ್ಧವಾಗಿದೆ. ಜೊತೆಗೆ, ವಾಹನಗಳ ಮೇಲೆ ಸಾಲ ನೀಡುವವರಿಗೂ ಈ ಸುಗ್ರೀವಾಜ್ಞೆ ಅನ್ವಯವಾಗಲಿದೆ ಎಂದು ಅವರು ಪೀಠಕ್ಕೆ ವಿವರಿಸಿದ್ದರು.

ಸಾಲ ಪಡೆದವನಿಂದ ಬಲವಂತದ ಕ್ರಮಕ್ಕೆ ಮುಂದಾದರೆ ದಂಡ ವಿಧಿಸುವುದಕ್ಕೆ ಅವಕಾಶ ನೀಡಲಿದ್ದು, ಇದು ಸಾಲದಾತರ ವಿರುದ್ಧವಾಗಿರಲಿದೆ. ಆದ್ದರಿಂದ ಸುಗ್ರೀವಾಜ್ಞೆಯು ಸಂವಿಧಾನಬಾಹಿರ ಎಂದು ಘೋಷಣೆ ಮಾಡಬೇಕು ಎಂದು ಕೋರಿದ್ದರು. ಆದರೆ ಕಡೆಗೆ ಸರ್ಕಾರದ ನಿಲುವಿಗೆ ಸಮರ್ಥನೆ ಸಿಕ್ಕಿದೆ.

Leave a Reply