ಬೆಂಗಳೂರು: ಸಾಲ ವಸೂಲಾತಿ ಹೆಸರಿನಲ್ಲಿ ರಾಜ್ಯದ ಹಲವಡೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನಡೆಸುತ್ತಿರುವ ಕಿರುಕುಳ ತಡೆಗಟ್ಟುವ ದೃಷ್ಟಿಯಿಂದ ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ರಾಜ್ಯಪಾಲರು ನಿರಾಕರಿಸಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ರಾಜ್ಯದ ಹಲವಡೆ ನಡೆಯುತ್ತಿರುವ ಕಿರುಕುಳ ಪ್ರಕರಣಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ರೂಪಿಸಿರುವ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ತಕ್ಷಣವೇ ಜಾರಿಗೊಳಿಸಲು ನಡೆಸಿದ ಪ್ರಯತ್ನಕ್ಕೆ ಇದರಿಂದ ಹಿನ್ನಡೆ ಉಂಟಾಗಿದೆ.
ಕಾನೂನು ಮತ್ತು ಗೃಹ ಇಲಾಖೆ ಜಂಟಿಯಾಗಿ ಸಿದ್ಧಪಡಿಸಿ ರವಾನಿಸಿದ್ದ ಮಸೂದೆಯನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿರುವ ರಾಜ್ಯಪಾಲ ತಾವರ ಚೆಂದ್ ಗೆಹಲೋಟ್ ಅವರು ಮಸೂದೆಯಲ್ಲಿನ ಕೆಲವು ಅಂಶಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದಾರೆ.
ರಾಜ್ಯಪಾಲರು ರಾಜ್ಯ ಸರ್ಕಾರದ ಉದ್ದೇಶಿತ ಮಸೂದೆಯಲ್ಲಿ ಸಾಲ ವಸೂಲಾತಿ ಹೆಸರಿನಲ್ಲಿ ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ವಿಧಿಸುವ ದಂಡ ಮತ್ತು ಶಿಕ್ಷೆಯ ಪ್ರಮಾಣದ ಬಗ್ಗೆ ತಕರಾರು ತೆಗೆದಿದ್ದಾರೆ.
ಸುಗ್ರೀವಾಜ್ಞೆಯಲ್ಲಿ ಸಾಲ ಪಡೆದವರ ರಕ್ಷಣೆಗೆ ಮಾತ್ರವೇ ಗಮನ ಹರಿಸಲಾಗಿದೆ. ಸಹಜ ನ್ಯಾಯದ ಅಡಿಯಲ್ಲಿ ಸಾಲ ಕೊಟ್ಟವರಿಗೆ ರಕ್ಷಣೆ ಕಾಣಿಸುತ್ತಿಲ್ಲ. ಸುದೀರ್ಘ ಅವಧಿಯಲ್ಲಿ ಇದು ಮಾರಕವಾಗಲಿದೆ. ಮೈಕ್ರೋ ಫೈನಾನ್ಸ್ 3 ಲಕ್ಷಕ್ಕಿಂತ ಜಾಸ್ತಿ ಸಾಲ ಕೊಡುವುದಿಲ್ಲ. ನೀವು ಐದು ಲಕ್ಷ ದಂಡ ಹೇಗೆ ಹಾಕುತ್ತೀರಾ ಎಂದು ವಿವರಿಸುವಂತೆ ಸೂಚಿಸಿದ್ದಾರೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲ ಕೊಡುವಾಗ ಗ್ರಾಹಕರಿಂದ ಯಾವುದೇ ದಾಖಲೆ ಪಡೆದುಕೊಳ್ಳಬಾರದು ಎಂದು ಕಾನೂನಿನಲ್ಲಿ ತಿಳಿಸಲಾಗಿದೆ. ದಾಖಲೆಯಿಲ್ಲದೆ ಸಾಲ ನೀಡಲು ಹೇಗೆ ಸಾಧ್ಯ ಎಂದು ವಿವರಿಸುವಂತೆ ಸೂಚಿಸಿದ್ದಾರೆ.
ಸಾಲ ವಸೂಲಾತಿ ಹೆಸರಿನಲ್ಲಿ ಕಿರುಕುಳ ನೀಡಿದರೆ ಹತ್ತು ವರ್ಷ ಜೈಲು ಶಿಕ್ಷೆ ನೀಡಲಾಗುವುದು ಎಂದು ತಿಳಿಸಲಾಗಿದೆ. ಈ ಶಿಕ್ಷೆಯ ಪ್ರಮಾಣ ವಿಧಿಸಲು ಯಾವುದೇ ತರ್ಕವಿಲ್ಲ ಎಂದು ಹೇಳಿದ್ದಾರೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳದ ವಿರುದ್ಧ ಕ್ರಮ ಕೈಗೊಳ್ಳಲು ಈಗಿರುವ ಕಾನೂನುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದಾಗಿದೆ. ಪೊಲಿಸರು ಈ ವಿಷಯದಲ್ಲಿ ಸಮರ್ಥವಾಗಿ ಕೆಲಸ ಮಾಡಿದರೆ ಮತ್ತೊಂದು ಕಾನೂನಿನ ಅಗತ್ಯ ಉಂಟಾಗುವುದಿಲ್ಲ. ಈ ಬಗ್ಗೆ ಮುಂಬರುವ ಬಜೆಟ್ ಅಧಿವೇಶನದಲ್ಲಿ ಸಾಧಕ-ಬಾಧಕ ಚರ್ಚಿಸಿ ಎಂದು ಸೂಚಿಸಿ ಸುಗ್ರೀವಾಜ್ಞೆಯನ್ನು ವಾಪಸ್ ಕಳುಹಿಸಿದ್ದಾರೆ.
ಸುಗ್ರೀವಾಜ್ಞೆಯಲ್ಲಿ ಇರುವುದೇನು?: ಅಂತಿಮ ಸುಗ್ರೀವಾಜ್ಞೆ ನಿರ್ಣಯದಲ್ಲಿ ಕಿರುಕುಳ ನೀಡುವವರಿಗೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶ ಮಾಡಿಕೊಡಲಾಗಿದೆ.
ಕರ್ನಾಟಕ ರಾಜ್ಯ ಮೈಕ್ರೋ ಫೈನಾನ್ಸ್ (ಬಲವಂತದ ಕ್ರಮಗಳ ನಿಯಂತ್ರಣ) ಸುಗ್ರೀವಾಜ್ಞೆ -2025ರ 8ನೇ ಕರಡಿನಲ್ಲಿ ಕಿರುಕುಳ ನೀಡುವವರ ವಿರುದ್ಧ ಪೊಲೀಸರು ತಕ್ಷಣ ದೂರು ದಾಖಲಿಸಿಕೊಳ್ಳಬೇಕು. ಕಿರುಕುಳ ನೀಡಿರುವುದು ಸಾಬೀತಾದರೆ 3 ವರ್ಷ ಜೈಲು ಶಿಕ್ಷೆ ಹಾಗೂ 5 ಲಕ್ಷ ರು.ವರೆಗೆ ಗರಿಷ್ಠ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ರಾಜ್ಯದಲ್ಲಿ ವ್ಯವಹಾರ ನಡೆಸುವ ಯಾವುದೇ ಫೈನಾನ್ಸ್ ಕಂಪೆನಿ ಕಡ್ಡಾಯವಾಗಿ ನೋಂದಣಿ ಪ್ರಾಧಿಕಾರದ ಬಳಿ ನೋಂದಣಿ ಮಾಡಿಸಿಕೊಂಡು ಪರವಾನಗಿ ಪಡೆದಿರಬೇಕು. ನಿಯಮ ಬಾಹಿರವಾಗಿ ನಡೆದುಕೊಂಡರೆ ಪರವಾನಗಿಯನ್ನು ರಾಜ್ಯ ಸರ್ಕಾರ ರದ್ದುಪಡಿಸಬಹುದು.
ಸಾಲಗಾರರ ದೂರು ಆಧರಿಸಿ ಅಥವಾ ಸ್ವಯಂಪ್ರೇರಿತವಾಗಿ ಮೈಕ್ರೋ ಫೈನಾನ್ಸ್ ಅಥವಾ ಸಂಸ್ಥೆಯ ನೋಂದಣಿ ರದ್ದು ಮಾಡಲು ಸಾಕಷ್ಟು ಕಾರಣಗಳು ಲಿಖಿತವಾಗಿ ಸಲ್ಲಿಕೆಯಾದಲ್ಲಿ ಸಂಸ್ಥೆಗೆ ನೋಟಿಸ್ ನೀಡಿ ಅವರ ಅಹವಾಲು ಆಲಿಸಿ ನೋಂದಣಿ ರದ್ದು ಮಾಡಲು ಸುಗ್ರೀವಾಜ್ಞೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಒಂದೊಮ್ಮೆ ಮೈಕ್ರೋ ಫೈನಾನ್ಸ್ ಸಂಸ್ಥೆಗೆ ರಾಜ್ಯದಲ್ಲಿನ ವಹಿವಾಟು ನಡೆಸಲು ಅವಕಾಶವೇ ನೀಡಬಾರದು ಎಂದಾದರೆ ಆರ್‌ಬಿಐಗೆ ಶಿಫಾರಸು ಮಾಡಲು ಸಹ ಅಧಿಕಾರ ನೀಡಲಾಗಿದೆ.
ಸುಗ್ರೀವಾಜ್ಞೆ ಜಾರಿಗೊಂಡ 30 ದಿನದೊಳಗೆ ರಾಜ್ಯದಲ್ಲಿರುವ ಎಲ್ಲ ಮೈಕ್ರೋ ಫೈನಾನ್ಸ್ ಕಂಪನಿಗಳು ಆಯಾ ಜಿಲ್ಲಾ ನೋಂದಣಿ ಪ್ರಾಧಿಕಾರದಲ್ಲಿ ನೋಂದಣಿ ಆಗಬೇಕು. ಕಡ್ಡಾಯವಾಗಿ ಸ್ಥಳೀಯ ಕಚೇರಿ ಹೊಂದಬೇಕು. ಬಡ್ಡಿದರವನ್ನು ಫಲಕದಲ್ಲಿ ನಮೂದಿಸಬೇಕು. ಸಾಲಗಾರರಿಂದ ಯಾವುದೇ ಅಡಮಾನ ಇಟ್ಟುಕೊಳ್ಳುವಂತಿಲ್ಲ. ಹೆದರಿಸಿ, ಬೆದರಿಸಿ ಜಪ್ತಿ ಮಾಡುವಂತಿಲ್ಲ. ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರಾಧಿಕಾರವಾಗಿ ಜಿಲ್ಲಾಧಿಕಾರಿಯವರನ್ನು ನೇಮಿಸಲಾಗುತ್ತದೆ. ಕಿರುಕುಳ ನೀಡಿದಾಗ ಪೊಲೀಸರು ದೂರು ಸ್ವೀಕರಿಸಬೇಕು. ಅಲ್ಲದೇ, ಡಿವೈಎಸ್ಪಿ ಮೇಲ್ಪಟ್ಟ ಅಧಿಕಾರಿಗಳು ಸ್ವಯಂಪ್ರೇರಿತ ಕೇಸ್ ಕೂಡ ದಾಖಲಿಸಿಕೊಳ್ಳಬಹುದೆಂದು ಕರಡು ಸುಗ್ರೀವಾಜ್ಞೆಯಲ್ಲಿ ವಿವರಿಸಲಾಗಿದೆ.
ಸಾಲ ವಸೂಲಿಗಾಗಿ ಸಾಲಗಾರರಿಗೆ ಅವಮಾನ, ಹಿಂಸೆ, ಹಲ್ಲೆ, ಬಲವಂತವಾಗಿ ಆಸ್ತಿ, ದಾಖಲೆಗಳನ್ನು ಕಿತ್ತುಕೊಂಡರೆ ಶಿಕ್ಷೆ, ದಂಡಕ್ಕೆ ಅವಕಾಶ. ದಬ್ಬಾಳಿಕೆ, ದೌರ್ಜನ್ಯ, ಗೂಂಡಾಗಳು, ಬಾಡಿಗೆ ವ್ಯಕ್ತಿಗಳ ಬಳಕೆ, ಮನೆಗೆ ಭೇಟಿ ನೀಡುವುದು, ದೈನಂದಿನ ಕೆಲಸಕ್ಕೆ ಕಿರುಕುಳ ನೀಡಿದರೆ ಲೈಸನ್ಸ್ ರದ್ದು. ನೋಂದಣಿ ಆಗದ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲ ವಸೂಲಿಗೆ ಯಾವುದೇ ರೀತಿಯಲ್ಲೂ ಸಾಲಗಾರರ ಮೇಲೆ ಒತ್ತಡ ಹಾಕುವಂತಿಲ್ಲ.
ಸಾಲಗಾರರು ಮತ್ತು ಸಾಲ ನೀಡಿದವರ ನಡುವಿನ ವ್ಯಾಜ್ಯಗಳನ್ನು ಪರಿಹರಿಸಲು ಓಂಬುಡ್ಸ್‌ಪರ್ಸನ್ ನೇಮಿಸಲು ಸರ್ಕಾರಕ್ಕೆ ಅವಕಾಶ. ಮೈಕ್ರೋ ಫೈನಾನ್ಸ್ ಸ್ಥಳೀಯವಾಗಿ ಕಚೇರಿ ಹೊಂದಿರಬೇಕು. ಗ್ರಾಹಕರಿಂದ ಸ್ವೀಕರಿಸಿದ ಹಣಕ್ಕೆ ಸಹಿ ಮಾಡಿದ ರಸೀದಿ ನೀಡುವುದು ಕಡ್ಡಾಯ.
ಸಾಲ ಪಡೆದವರು ಬಡ್ಡಿ, ಕಂತು ಪಾವತಿ ಸೇರಿದಂತೆ ಇನ್ನಿತರ ಯಾವುದೇ ವಿವರಗಳನ್ನು ಕೇಳಿದಾಗ ಕಂಪನಿಗಳು ಒದಗಿಸುವುದು ಕಡ್ಡಾಯ. ಜಿಲ್ಲಾಧಿಕಾರಿಗಳು ಮೈಕ್ರೋ ಫೈನಾನ್ಸ್ ಕಂಪನಿಗಳ ಮೇಲ್ವಿಚಾರಣೆ ಪ್ರಾಧಿಕಾರ ಆಗಿರ್ತಾರೆ. ಬೇರೆ ಅಧಿಕಾರಿಗಳನ್ನೂ ನೇಮಿಸಲು ಅವಕಾಶ.
ಸಕಾರಣಗಳಿದ್ದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯ ಲೈಸನ್ಸ್ ರದ್ದುಗೊಳಿಸುವಂತೆ ಆರ್‌ಬಿಐಗೆ ಶಿಫಾರಸ್ಸು ಮಾಡಲು ಪ್ರಾಧಿಕಾರಕ್ಕೆ ಅವಕಾಶ. ಗ್ರಾಹಕರಿಗೆ ವಿಧಿಸುವ ಬಡ್ಡಿ ದರವನ್ನು ಕಚೇರಿ ಫಲಕದಲ್ಲಿ ಪ್ರದರ್ಶಿಸಬೇಕು. ಗ್ರಾಹಕರೊಂದಿಗೆ ಪತ್ರ, ಮೌಖಿಕವಾಗಿ ಕನ್ನಡದಲ್ಲಿ ವ್ಯವಹರಿಸಬೇಕು. ಲೈಸನ್ಸ್ ರಹಿತ ಸಂಸ್ಥೆಗಳು ಸಾಲ ವಸೂಲಿಗೆ ಕಿರುಕುಳ ನೀಡಿದರೆ ಪರಿಹಾರ ಪಡೆಯಬಹುದು. ಸಾಲದಿಂದ ಸಂಪೂರ್ಣ ಬಿಡುಗಡೆಯನ್ನೂ ಕೋರಬಹುದು.
ಪ್ರತಿ 3 ತಿಂಗಳಿಗೊಮ್ಮೆ ಸಾಲ ಪಡೆದವರು, ಸಾಲ ವಿತರಣೆ ಮೊತ್ತ ಮತ್ತು ಬಡ್ಡಿ ಕುರಿತ ವಿವರಗಳನ್ನು ಪ್ರಾಧಿಕಾರಕ್ಕೆ ಮೈಕ್ರೋ ಫೈನಾನ್ಸ್‌ಗಳು ಒದಗಿಸಬೇಕು. ಈ ನಿಯಮವನ್ನು ಪಾಲಿಸದಿದ್ದರೆ ಸಂಸ್ಥೆಯವರಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಲು ಸುಗ್ರೀವಾಜ್ಞೆಯಲ್ಲಿ ಅವಕಾಶ. ಸಾಲ ವಿಚಾರದ ವ್ಯಾಜ್ಯಗಳು, ಮೇಲ್ಮನವಿಗಳು ಬಾಕಿ ಇದ್ದಲ್ಲಿ ಸಿವಿಲ್ ಕೋರ್ಟ್‌ಗಳು ಸಾಲಗಾರರಿಂದ ಬಡ್ಡಿ, ಸಾಲ ವಸೂಲಿ ಅರ್ಜಿಗಳನ್ನು ಪರಿಗಣಿಸಬಾರದು.




