ಬೆಂಗಳೂರು: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ವಿಷಯ ರಾಜ್ಯ ವಿಧಾನಸಭೆಯಲ್ಲಿ ಪ್ರಸ್ತಾಪಗೊಂಡು ಆಡಳಿತ ಮತ್ತು ವಿಪಕ್ಷ ಬಿಜೆಪಿ ಸದಸ್ಯರ ನಡುವೆ ಮಾತಿನ ಚಟಾಪಟಿ ನಡೆಯಿತು. ಇದರಿಂದ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗಿ ಕಲಾಪಕ್ಕೆ ಅಡ್ಡಿಪಡಿಸುವ ಸದಸ್ಯರನ್ನು ಸದನದಿಂದ ಹೊರ ಹಾಕುವುದಾಗಿ ಸಭಾಧ್ಯಕ್ಷರು ಎಚ್ಚರಿಕೆ ನೀಡಿದರು.
- ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಫೇಕುಗಳ ಕಾಟ!
- ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಕೆ: ಆರ್ ಅಶೋಕ್
- ನವೆಂಬರ್ 07 ರಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನ
- ಆ್ಯಕ್ಸಿಡೆಂಟಲ್ ಸಿಎಂ ಬೊಮ್ಮಾಯಿ ಅವರೇ ಹಾವೇರಿ ಕ್ಷೇತ್ರದ ಬಗ್ಗೆ ಗಮನ ಕೊಡಿ: ಬಿ ಕೆ ಹರಿಪ್ರಸಾದ್
- 40 ದಾಟಿದ ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ನಡೆದ ಚರ್ಚೆಗೆ ಉತ್ತರಿಸುತ್ತಿದ್ದ ಸಿಎಂ ಸಿದ್ದರಾಮಯ್ಯ, ಎಸ್ ಇ ಪಿ, ಟಿ ಎಸ್ ಪಿ ಕಾನೂನು ಜಾರಿಗೆ ತಂದ ವಿಚಾರವನ್ನು ಪ್ರಸ್ತಾಪಿಸಿ ಈ ಮೂಲಕ ತಮ್ಮ ಸರ್ಕಾರ ಅಂಬೇಡ್ಕರ್ ಅವರನ್ನು ಗೌರವಿಸಿದೆ ಎಂದರು.
ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಬಿಜೆಪಿಯ ಅರವಿಂದ ಬೆಲ್ಲದ್, ಬಿ.ಆರ್.ಅಂಬೇಡ್ಕರ್ ಅವರನ್ನು ಸೋಲಿಸಿದ್ದೇ ಕಾಂಗ್ರೆಸ್. ಅವರು ನಿಧನರಾದ ಸಂದರ್ಭದಲ್ಲಿ ಅಂತ್ಯಕ್ರಿಯೆ ಗೌರವಯುತವಾಗಿ ನಡೆಯಲಿಲ್ಲ. ಅವರ ಸ್ಮಾರಕಕ್ಕೆ ಸೂಕ್ತ ಸ್ಥಳವನ್ನು ನೀಡಲಿಲ್ಲ ಎಂದು ಪ್ರಸ್ತಾಪಿಸಿ ಆಡಳಿತಾರೂಢ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಎದ್ದು ನಿಂತ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, 1952ರಲ್ಲಿ ಅಂಬೇಡ್ಕರ್ ಬರೆದ ಪತ್ರದಲ್ಲಿ ನನ್ನನ್ನು ಚುನಾವಣೆಯಲ್ಲಿ ಸೋಲಿಸಿದ್ದು ದಾಮೋದರ್ ಸಾವರ್ಕರ್ ಎಂದು ಬರೆದಿದ್ದಾರೆ ಎಂದರು. ಅಲ್ಲದೆ ಪತ್ರ ಪ್ರದರ್ಶನ ಮಾಡಿದರೆ ರಾಜೀನಾಮೆ ಕೊಡುತ್ತೀರಾ? ಎಂದು ಸವಾಲೆಸೆದರು.
ಈ ಸವಾಲು ಸ್ವೀಕಾರ ಮಾಡಿ ಎಂದು ಪ್ರಿಯಾಂಕ್ ಖರ್ಗೆ ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಪತ್ರದಲ್ಲಿ ಅಂಬೇಡ್ಕರ್ ಕಾಂಗ್ರೆಸ್ ಹೆಸರು ಉಲ್ಲೇಖ ಮಾಡಿಲ್ಲ, ಬದಲಾಗಿ ಸಾವರ್ಕರ್ ಹೆಸರು ಬರೆದಿದ್ದಾರೆ. ಇದನ್ನು ಸಾಬೀತು ಮಾಡುತ್ತೇವೆ ಎಂದರು.
ಸವಾಲು, ಆರೋಪ, ಪ್ರತ್ಯಾರೋಪ ಹಾಗೂ ಏರು ಧ್ವನಿಯ ಮಾತಿನ ನಡುವೆ ಕಾಂಗ್ರೆಸ್ ಬಿಜೆಪಿ ಸದಸ್ಯರು ಪರಸ್ಪರ ಘೋಷಣೆ ಕೂಗಿದರು. ಗದ್ದಲ ಕೋಲಾಹಲದ ನಡುವೆ ಪ್ರಿಯಾಂಕ್ ಖರ್ಗೆ ಅಂಬೇಡ್ಕರ್ ಬರೆದಿರುವ ಪತ್ರವನ್ನು ಸದನದಲ್ಲಿ ಓದಿದರು. ಇದರಿಂದಾಗಿ ಸದನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ಮಾತಿನ ಜಟಾಪಟಿಗೆ ಕಾರಣವಾಯಿತು.
ಬಿಜೆಪಿ ಸದಸ್ಯರಾದ ಅಶ್ವತ್ಥ ನಾರಾಯಣ, ಅರವಿಂದ ಬೆಲ್ಲದ, ಬಸನಗೌಡ ಪಾಟೀಲ್ ಯತ್ನಾಳ್ ಏರು ಧ್ವನಿಯಲ್ಲಿ ಕಾಂಗ್ರೆಸ್ ಸದಸ್ಯರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಆಡಳಿತ ಪಕ್ಷದಿಂದ ಪ್ರಿಯಾಂಕ್ ಖರ್ಗೆ, ನರೇಂದ್ರ ಸ್ವಾಮಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಗ ಎದ್ದು ನಿಂತ ಕಾಂಗ್ರೆಸ್ಸಿನ ಶಿವಲಿಂಗೇಗೌಡ ಇದೇನು ಸದನ ಈ ರೀತಿ ನಡೆಯುತ್ತಿದೆ. ಎಲ್ಲರೂ ಅವರಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನಾವೇನು ದನ ಕಾಯಬೇಕಾ ಎಂದು ಪ್ರಶ್ನಿಸಿದರು.
ಇದರಿಂದ ಕೆರಳಿದ ಸಭಾಧ್ಯಕ್ಷರು ಎದ್ದು ನಿಂತು ಸದನವನ್ನು ತಹಬಂದಿಗೆ ತರುವ ಪ್ರಯತ್ನ ನಡೆಸಿದರು. ಆದರೆ, ಸಭಾಧ್ಯಕ್ಷರ ಮಾತಿಗೆ ವಿಪಕ್ಷ ಬಿಜೆಪಿ ಸದಸ್ಯರು ಸೊಪ್ಪು ಹಾಕಲಿಲ್ಲ. ಇದರಿಂದ ಕೋಪಗೊಂಡ ಅವರು ಇದೇ ರೀತಿಯ ಗದ್ದಲ ಮುಂದುವರಿಸಿದರೆ ಅಂತಹ ಸದಸ್ಯರನ್ನು ಸದನದಿಂದ ಎತ್ತಿ ಹಾಕುತ್ತೇನೆ ಗೆಟ್ ಔಟ್ ಎಂದು ಅಬ್ಬರಿಸಿದರು.
ಹೇಳಿಕೆಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಎತ್ತಿ ಬಿಸಾಡುತ್ತೇನೆ ಎಂದರೆ ಅರ್ಥವೇನು? ಎಂದು ಪ್ರಶ್ನಿಸಿದರು. ಇದಕ್ಕೆ ಅಶೋಕ್ ದನಿಗೂಡಿಸಿ ಕಡತದಿಂದ ಈ ಪದ ತೆಗೆಯುವಂತೆ ಆಗ್ರಹಿಸಿದರು. ಇದರಿಂದ ಮತ್ತಷ್ಟು ಗೊಂದಲ ಉಂಟಾಗಿ ಸಭಾಧ್ಯಕ್ಷರು ಕಲಾಪವನ್ನು ಅಲ್ಪ ಕಾಲಕ್ಕೆ ಮುಂದೂಡಿದರು.




