ಬೆಂಗಳೂರು: ಮತದಾರರ ಪಟ್ಟಿ ಕುರಿತು ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡ ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಪಕ್ಷದ ನಾಯಕರು, ಸಚಿವರು ಮತ್ತು ಶಾಸಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ನಾಯಕತ್ವ ಬದಲಾವಣೆ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಸೇರಿದಂತೆ ಪಕ್ಷ ಮತ್ತು ಸರ್ಕಾರದ ಕಾರ್ಯವೈಖರಿ ಕುರಿತಾಗಿ ಹಲವು ಶಾಸಕರು ಮತ್ತು ಸಚಿವರು ಬಹಿರಂಗ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸುತ್ತಿದ್ದರು. ಈ ರೀತಿಯ ಹೇಳಿಕೆ ನೀಡದಂತೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಕೂಡ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕಬೇಕು ಎಂದು ನಿರ್ಧರಿಸಿ ರಾಜಣ್ಣ ಅವರ ಪ್ರಕರಣವನ್ನು ಬಳಸಿಕೊಂಡಿದೆ.
ವಿವಾದದಲ್ಲಿ ಸಿಲುಕಿದ ಸಚಿವ ರಾಜಣ್ಣ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾದ ಬಳಿಕ
ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿ ಸಿಎಂ ಆಪ್ತ ಕಾರ್ಯದರ್ಶಿಯವರಿಗೆ ರಾಜೀನಾಮೆ ಪತ್ರ ಕೂಡ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಅವರು ಕೂಡ ರಾಜಣ್ಣ ಅವರ ರಾಜೀನಾಮೆ ಪಡೆಯಲು ಮುಂದಾಗಿದ್ದರು.
ಆದರೆ ಇದಕ್ಕೆ ಒಪ್ಪದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಎಚ್ಚರಿಕೆ ಸಂದೇಶ ರವಾನಿಸಲು ತೀರ್ಮಾನಿಸಿದರು. ಅದರಂತೆ ರಾಜಣ್ಣ ಅವರ ರಾಜೀನಾಮೆಗೆ ಬದಲಾಗಿ ಸಂಪುಟದಿಂದ ವಜಾ ಗೊಳಿಸಬೇಕು ಎಂದು ಸೂಚನೆ ನೀಡಿದರು ಎಂದು ಗೊತ್ತಾಗಿದೆ.
ಕೊನೆಯ ಹಂತದವರೆಗೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ರಾಜಣ್ಣ ಅವರಿಗೆ ಮುಜುಗರವಾಗದಂತೆ ನೋಡಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದರು. ಸದ್ಯ ವಿಧಾನಸಭೆಯ ಅಧಿವೇಶನ ನಡೆಯುತ್ತಿದೆ. ಈ ಸಮಯದಲ್ಲಿ ಸಚಿವಯೊಬ್ಬರನ್ನು ಸಂಪುಟದಿಂದ ವಜಾಗೊಳಿಸುವ ತೀರ್ಮಾನ ಸಾಕಷ್ಟು ವಿವಾದಕ್ಕೆ ಕಾರಣವಾಗಲಿದೆ ಎಂದು ಕೆ ಸಿ ವೇಣುಗೋಪಾಲ್ ಅವರ ಮೂಲಕ ರಾಹುಲ್ ಗಾಂಧಿ ಅವರ ಮನವೊಲಿಸಲು ನಡೆಸಿದ ಯತ್ನ ವಿಫಲವಾಯಿತು ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಸಿಎಂ ಮನವೊಲಿಕೆಯ ಯಾವುದೇ ಮಾತನ್ನು ಕೇಳಲು ಬಯಸದ ರಾಹುಲ್ ಗಾಂಧಿ ಅವರು ತಕ್ಷಣವೇ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಪಟ್ಟು ಹಿಡಿದ ಪರಿಣಾಮ ಸಿದ್ದರಾಮಯ್ಯ ಅವರು ರಾಜಣ್ಣ ಅವರ ರಾಜೀನಾಮೆಯ ಪ್ರಸ್ತಾಪವನ್ನು ತಿರಸ್ಕರಿಸಿ ಸಂಪುಟದಿಂದ ವಜಾಗೊಳಿಸಿರುವ ಆದೇಶವನ್ನು ರಾಜ್ಯಪಾಲರಿಗೆ ರವಾನಿಸಿದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಈ ಪ್ರಕರಣದ ಮೂಲಕ ಇನ್ನು ಮುಂದೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಯಾವುದೇ ವ್ಯಕ್ತಿ ಪಕ್ಷದ ತೀರ್ಮಾನ ಮತ್ತು ನಾಯಕತ್ವದ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದಲ್ಲಿ ಇದೇ ರೀತಿ ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಲಾಗಿದೆ.




