ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ತಲೆದಂಡ

8 months ago

ಬೆಂಗಳೂರು: ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಕುರಿತಾಗಿ ಹೇಳಿಕೆ ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ತಲೆದಂಡವಾಗಿದೆ.

ತಮ್ಮ ಹೇಳಿಕೆ ಮೂಲಕ ಹೈಕಮಾಂಡ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದ ರಾಜಣ್ಣ ಅವರನ್ನು ಸಂಪುಟದಿಂದ ಕಿತ್ತೊಗೆಯುವಂತೆ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚಿಸಿತು. ಇದರ ಬೆನ್ನಲ್ಲೇ ರಾಜಣ್ಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜಣ್ಣ ಅವರ ರಾಜೀನಾಮೆ ಪತ್ರವನ್ನು ರಾಜಭವನಕ್ಕೆ ರವಾನಿಸಿದ ಸಿದ್ದರಾಮಯ್ಯ, ಇದನ್ನು ಅಂಗೀಕರಿಸುವಂತೆ ಮನವಿ ಮಾಡಿದರು. ಅದರಂತೆ ರಾಜ್ಯಪಾಲರು ರಾಜಣ್ಣ ಅವರ ರಾಜಿನಾಮೆಯನ್ನು ಅಂಗೀಕರಿಸಿದರು.

ಮತದಾರರ ಪಟ್ಟಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಕಾಂಗ್ರೆಸ್ ಪಕ್ಷ ಲೋಕಸಭೆ
ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಹೋರಾಟ ಆರಂಭಿಸಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ವ್ಯಾಪಕ ಪ್ರಮಾಣದ ಮತಗಳ್ಳತನ ನಡೆಸಲಾಗಿದೆ ಎಂದು ಆರೋಪಿಸಿ ರಾಹುಲ್ ಗಾಂಧಿ ಆಗಸ್ಟ್ 8ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದರು.

ಇದರಲ್ಲಿ ಪಾಲ್ಗೊಳ್ಳದೆ ತುಮಕೂರಿನಲ್ಲಿಯೇ ಉಳಿದಿದ್ದ ಸಚಿವ ಕೆ ಎನ್ ರಾಜಣ್ಣ ಅವರು ಮತಗಳ್ಳತನ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ನಾವೇ ಮೊದಲು ಮತಪಟ್ಟಿಯನ್ನು ನೋಡಿಕೊಳ್ಳಬೇಕಿತ್ತು. ಅದು ಬಿಟ್ಟು ಈಗ ಆ ವಿಷಯವನ್ನು ಹೇಳುತ್ತಿರುವುದು ಸರಿಯಲ್ಲ. ನಮ್ಮದೇ ಸರ್ಕಾರ ಅಧಿಕಾರದಲ್ಲಿದ್ದಾಗ ಮತದಾರರ ಪಟ್ಟಿ ಸಿದ್ಧವಾಗಿತ್ತು. ಆಗ ನಮ್ಮ ನಾಯಕರು ಕಣ್ಣುಮುಚ್ಚಿ ಕುಳಿತಿದ್ದರಾ? ಎಂದು ಪ್ರಶ್ನಿಸಿದ್ದರು.

ಈ ಹೇಳಿಕೆಯನ್ನು ಪ್ರಮುಖವಾಗಿ ಬಳಸಿಕೊಂಡ ಬಿಜೆಪಿ ತಮ್ಮ ವಿರುದ್ಧ ರಾಹುಲ್ ಗಾಂಧಿ ಮಾಡುತ್ತಿರುವ ಆರೋಪಕ್ಕೆ ಅವರದೇ ಸರ್ಕಾರದಲ್ಲಿನ ಮಂತ್ರಿ ಸೂಕ್ತ ಉತ್ತರ ನೀಡಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಅವರ ಆರೋಪದ ಬಗ್ಗೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಉತ್ತರ ನೀಡಬೇಕು ಎಂದು ಆಗ್ರಹಿಸಿತ್ತು.

ಇದಷ್ಟೇ ಅಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ರಾಜಣ್ಣ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಎದುರೇಟು ನೀಡಲು ಬಿಜೆಪಿ ಸಿದ್ಧತೆ ನಡೆಸಿತ್ತು. ಈ ರೀತಿ ಸಚಿವ ರಾಜಣ್ಣ ಅವರ ಹೇಳಿಕೆ ತಮ್ಮ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದೆ ಎಂಬುದನ್ನು ಅರಿತ ರಾಜ್ಯ ಕಾಂಗ್ರೆಸ್ ಕಾರ್ಯಕರ್ತರು ಅವರ ವಿರುದ್ಧ ಪ್ರತಿಭಟನೆ ನಡೆಸಿ ಕ್ರಮಕ್ಕೆ ಆಗ್ರಹಿಸಿದ್ದರು.

ಇದರ ಬೆನ್ನಲ್ಲೇ ರಾಜಣ್ಣ ಅವರ ಹೇಳಿಕೆ ಕುರಿತಾಗಿ ವರದಿ ತರಿಸಿಕೊಂಡು ಪರಿಶೀಲನೆ ನಡೆಸಿದ ಹೈಕಮಾಂಡ್ ರಾಜಣ್ಣ ಅವರನ್ನು ಮಂತ್ರಿಮಂಡಲದಿಂದ ವಜಾ ಮಾಡಬೇಕು ಎಂದು ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿತು.

ಇದಾದ ಬಳಿಕ ವಿಧಾನಸಭೆಯ ಕಾರ್ಯಕಲಾಪ ಆರಂಭಗೊಂಡು ಸಿದ್ದರಾಮಯ್ಯ ಕಲಾಪ ಸಲಹಾ ಸಮಿತಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬರು ರಾಜಣ್ಣ ಅವರನ್ನು ಸಂಪರ್ಕಿಸಿ ತಕ್ಷಣವೇ ತಾವು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಇಲ್ಲವಾದರೆ ತಮ್ಮನ್ನು ಸಂಪುಟದಿಂದ ವಜಾ ಗೊಳಿಸಲಾಗುತ್ತದೆ. ಇದು ಹೈಕಮಾಂಡ್ ಆದೇಶ ಎಂದು ಸಂದೇಶ ನೀಡಿದರು.

ಬಳಿಕ ರಾಜಣ್ಣ ಅವರು ಈ ವಿಚಾರದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಹೇಳಿದರಾದರು ಸಂದೇಶ ಹೊತ್ತು ತಂದವರು ಅದನ್ನು ಕೇಳುವ ಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಇಲ್ಲ. ಹೀಗಾಗಿ ತಾವು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಹೇಳಿ ಅವರಿಂದ ರಾಜೀನಾಮೆ ಪತ್ರ ಪಡೆದುಕೊಂಡು ಹೋದರು ಎನ್ನಲಾಗಿದೆ.

ಬಳಿಕ ರಾಜೀನಾಮೆ ಪತ್ರವನ್ನು ಸಿದ್ದರಾಮಯ್ಯ ಅವರು ರಾಜಭವನಕ್ಕೆ ರವಾನಿಸಿದರು. ಇದಾದ ನಂತರ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಗೊಳಿಸಿರುವುದಾಗಿ ರಾಜಭವನದ ಅಧಿಕೃತ ಪ್ರಕಟಣೆ ತಿಳಿಸಿತು.

Leave a Reply