ಬೆಂಗಳೂರು: ನಿಗದಿತ ಆದಾಯ ಮೂಲಗಳನ್ನು ಮೀರಿ ಹೆಚ್ಚಿನ ಪ್ರಮಾಣದ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ನಡೆಯುತ್ತಿರುವ ಸಿಬಿಐ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ತಮ್ಮ ವಿರುದ್ಧ ಸಿಬಿಐ ನಡೆಸುತ್ತಿರುವ ತನಿಖೆ ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿ ಶಿವಕುಮಾರ್ ಸಲ್ಲಿಸಿರುವ ರಿಟ್ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣ’ಗಳ ವಿಚಾರಣೆ ನಡೆಸುವ ಹೈಕೋರ್ಟ್‌ನ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೆ.ನಟರಾಜನ್ ನಡೆಸುತ್ತಿದ್ದು ತನಿಖೆಗೆ ಫೆಬ್ರವರಿ 24 ರವರೆಗೆ ತಡೆಯಾಜ್ಞೆ ನೀಡಿದೆ.
ಶಿವಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ಎಚ್.ಜಾಧವ್, ಅರ್ಜಿದಾರರು ಸಾರ್ವಜನಿಕ ಸೇವಕರಿದ್ದು ಅವರ ಕುಟುಂಬದ ಸದಸ್ಯರನ್ನೂ ಈ ಪ್ರಕರಣದಲ್ಲಿ ಸಿಲುಕಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದರು.
ಶಿವಕುಮಾರ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದಾರೆ. ರಾಜ್ಯ ವಿಧಾನಸಭೆಯ ಚುನಾವಣೆ ಹತ್ತಿರದಲ್ಲಿದೆ. ಈ ಕಾರಣಕ್ಕಾಗಿಯೇ ಅವರಿಗೆ ನಿತ್ಯವೂ ಕಿರುಕುಳ ನೀಡಲಾಗುತ್ತಿದ್ದು ಅವರ ವಿರುದ್ಧ ರಾಜಕೀಯ ಪಿತೂರಿ ಹೆಣೆಯಲಾಗಿದೆ ಎಂದರು.
ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್ ಜಾಧವ್ ಅವರ ವಾದವನ್ನು ಬಲವಾಗಿ ಅಲ್ಲಗಳೆದರಾದರೂ ಕೋರ್ಟ್ ಒಪ್ಪಲಿಲ್ಲ. ಅಂತೆಯೇ, ತನಿಖೆಯ ಪ್ರಗತಿ ವರದಿಯನ್ನು ಕೋರ್ಟ್ ಗೆ ಸಲ್ಲಿಸಿ ಎಂದು ಸೂಚಿಸಿ ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಿತು.



