ಮಂಗಳೂರು: BJP ನೇತೃತ್ವದ ಕೇಂದ್ರ ಸರಕಾರದ ಜನವಿರೋಧಿ,ರೈತ ಕಾರ್ಮಿಕ ವಿರೋಧಿ ಬಜೆಟ್ ವಿರುದ್ಧ ಹಾಗೂ ಮುಂಬರುವ ರಾಜ್ಯ ಬಜೆಟ್ ಕಾರ್ಮಿಕರ ಪರವಾಗಿ ಮಂಡಿಸಲು ಆಗ್ರಹಿಸಿ ಇಂದು (10-02-2023) ರಾಜ್ಯಾದ್ಯಂತ ಪ್ರತಿಭಟನೆಯ ಭಾಗವಾಗಿ ನಗರದ ಕ್ಲಾಕ್ ಟವರ್ ಬಳಿಯಲ್ಲಿ CITU ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು._
ಕೇಂದ್ರದ ಬಜೆಟ್ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆ ಕೂಗಿದ ಪ್ರತಿಭಟನಾಕಾರರು, ರಾಜ್ಯದ ಬಜೆಟ್ ರೈತ ಕಾರ್ಮಿಕರ ಪರವಾಗಿ ಮಂಡಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ CITU ದ. ಕ.ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ, ಬಣ್ಣ ಬಣ್ಣದ ಘೋಷಣೆಗಳ ಮೂಲಕ ದೇಶದ ಜನರನ್ನು ಮರಳುಗೊಳಿಸಿ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರ ಇಂದು ಜನಸಾಮಾನ್ಯರ,ರೈತ ಕಾರ್ಮಿಕರ ಹಿತಾಸಕ್ತಿಗಳನ್ನು ಕಡೆಗಣಿಸಿ ಕಾರ್ಪೊರೇಟ್ ಕಂಪೆನಿಗಳ ಪರವಾಗಿ ಧೃಢವಾಗಿ ನಿಂತಿದೆ ಎಂಬುದಕ್ಕೆ ಪ್ರಸಕ್ತ ಬಜೆಟ್ ಸೇರಿದಂತೆ ಸರಕಾರದ ಪ್ರತಿಯೊಂದು ಹೆಜ್ಜೆಯಲ್ಲೂ ಸಾಬೀತಾಗಿದೆ. ದೇಶದ ಪ್ರತಿಯೊಂದು ಸಂಪತ್ತನ್ನು ಅಂಬಾನಿ ಅಧಾನಿಗಳ ಕೈಗೊಪ್ಪಿಸಿದ ನರೇಂದ್ರ ಮೋದಿ ಸರಕಾರ ಲೂಟಿಗೋರ ಸರಕಾರವಾಗಿದೆ. ರಾಜ್ಯದಲ್ಲೂ ಪ್ರಜಾಪ್ರಭುತ್ವ ಆಶಯಗಳಿಗೆ ವಿರುದ್ಧವಾಗಿ ಅಕ್ರಮವಾಗಿ ಅಧಿಕಾರಕ್ಕೇರಿದ ಬಿಜೆಪಿ 40%ಕಮಿಷನ್ ಸರಕಾರವೆಂದು ಸಾಬೀತುಪಡಿಸಿ ರಾಜ್ಯದ ಖಜಾನೆಯನ್ನು ಲೂಟಿಗೈಯ್ಯುತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ , ಅತ್ಯುತ್ತಮ ಬಜೆಟ್ ಎಂದು ಪುಂಗಿ ಊದಿದ ಕೇಂದ್ರ ಸರಕಾರದ ಬಜೆಟ್ ನ್ನು ಎಳೆಎಳೆಯಾಗಿ ಬಿಡಿಸಿದಾಗ ಎಷ್ಟೊಂದು ಜನವಿರೋಧಿಯಾಗಿದೆ ಎಂದು ಗೊತ್ತಾಗುತ್ತದೆ. ಶಿಕ್ಷಣ ಆರೋಗ್ಯ ಉದ್ಯೋಗ ಕೈಗಾರಿಕಾ ಕ್ಷೇತ್ರಗಳಿಗೆ ತೀರಾ ಕಡಿಮೆ ಹಣವನ್ನು ಮೀಸಲಿಟ್ಟು, ಬಂಡವಾಳಶಾಹಿಗಳಿಗೆ ಸಾಕಷ್ಟು ಹಣವನ್ನು ವ್ಯಯಿಸಲು ಮುಂದಾಗಿರುವ ನರೇಂದ್ರ ಮೋದಿ ಸರಕಾರ ಜನತೆಯ ಕೊಂಡುಕೊಳ್ಳುವ ಶಕ್ತಿಯನ್ನು ನಾಶಮಾಡಲು ಹೊರಟಿದೆ. ಡಬಲ್ ಇಂಜಿನ್ ಸರಕಾರವೆಂದು ಬೀಗುತ್ತಿರುವ ಬಿಜೆಪಿ ಮುಂಬರುವ ಬಜೆಟ್ ನಲ್ಲಿ ಕಾರ್ಮಿಕರ ಹಿತಾಸಕ್ತಿಯನ್ನು ಕಡೆಗಣಿಸಿದರೆ ತೀವ್ರ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.
CITU ಜಿಲ್ಲಾ ನಾಯಕ ಸುಕುಮಾರ್ ಹಾಗೂ ಜಿಲ್ಲಾ ರೈತ ನಾಯಕ ಸದಾಶಿವ ದಾಸ್ ರವರು ಮಾತನಾಡಿ, ಬಾಯಿ ಬಿಟ್ಟರೆ ಹಸಿ ಹಸಿ ಸುಳ್ಳುಗಳನ್ನು ಹೇಳುತ್ತಾ ಜನತೆಯನ್ನು ದಾರಿ ತಪ್ಪಿಸುತ್ತಿರುವ ಬಿಜೆಪಿ ಸಂಘಪರಿವಾರ ಸುಳ್ಳುಗಳ ಕಾರ್ಖಾನೆಯಾಗಿದೆ. ಜನರ ಬದುಕಿನ ಪ್ರಶ್ನೆಗಳು ಮುನ್ನೆಲೆಗೆ ಬರದಂತೆ ತಡೆದು ಭಾವನಾತ್ಮಕ ವಿಚಾರಗಳನ್ನೇ ಪ್ರಚಾರಪಡಿಸಿ ಕೋಮು ಧ್ರುವೀಕರಣಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಪ್ರತಿಭಟನೆಯ ನೇತೃತ್ವವನ್ನು CITU ಜಿಲ್ಲಾ ನಾಯಕರಾದ ಪದ್ಮಾವತಿ ಶೆಟ್ಟಿ, ಸುಂದರ ಕುಂಪಲ, ನೋಣಯ್ಯ ಗೌಡ, ವಸಂತಿ ಕುಪ್ಪೆಪದವು, ರಾಧಾ ಮೂಡಬಿದ್ರೆ, ಗಿರಿಜಾರವರು ವಹಿಸಿದ್ದರು.
ಪ್ರತಿಭಟನೆಯಲ್ಲಿ CITU ಜಿಲ್ಲಾ ಮುಖಂಡರಾದ ಜಯಂತ್ ನಾಯ್ಕ್,ವಾರಿಜಾ, ಭವಾನಿ, ಅಶೋಕ್ ಶ್ರೀಯಾನ್, ಭಾರತಿ ಬೋಳಾರ, ಜಯಲಕ್ಷ್ಮಿ, ವಿಲ್ಲಿ ವಿಲ್ಸನ್, ಕೃಷ್ಣಪ್ಪ ಬೆಳುವಾಯಿ, ನಾಗೇಶ್ ಕೋಟ್ಯಾನ್, ಯುವಜನ ಮುಖಂಡರಾದ ಬಿಕೆ ಇಮ್ತಿಯಾಜ್, ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ವಿದ್ಯಾರ್ಥಿ ನಾಯಕರಾದ ಮಾಧುರಿ ಬೋಳಾರ, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್ ಮುಂತಾದವರು ಉಪಸ್ಥಿತರಿದ್ದರು.
ಬಳಿಕ CITU ಉನ್ನತ ಮಟ್ಟದ ನಿಯೋಗವೊಂದು ದ.ಕ.ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ವಿವಿಧ ವಿಭಾಗದ ಕಾರ್ಮಿಕರ 30 ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಅರ್ಪಿಸಲಾಯಿತು.



